ಗ್ಯಾರಂಟಿ’ ಯೋಜನೆಗಳ ಪರಿಷ್ಕರಣೆ ಅಗತ್ಯವಿದೆ : ಸತೀಶ್‌ ಜಾರಕೀಹೋಳಿ

ಬೆಂಗಳೂರು:

    ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂಬ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮಾತ್ರ ಯೋಜನೆ ನೀಡಿ. ಶ್ರೀಮಂತರನ್ನು ಯೋಜನೆಯಿಂದ ಹೊರಗಿಡಬೇಕು.ಇದರಿಂದಾಗಿ ವಾರ್ಷಿಕವಾಗಿ ರೂ. 10,000 ಕೋಟಿ ಉಳಿತಾಯವಾಗಲಿದೆ ಎಂದು ಜಾರಕಿಹೊಳಿ ಬುಧವಾರ ಹೇಳಿದ್ದಾರೆ.

   ಈ ವರ್ಷದ ಆರಂಭದಲ್ಲಿ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,2024-25ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ರೂ.52,000 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು.

   ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿದಾಗ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ನಾನು ಹೇಳಿಲ್ಲ. ಈ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪಬೇಕು, ಶ್ರೀಮಂತರಿಗೆ ಬೇಡ ಎಂದು ಜನ ಹೇಳುತ್ತಿದ್ದಾರೆ. ಹೋಟೆಲ್ ಗಳಲ್ಲಿ, ಕೆಲಸಗಾರರು ಸೇರಿದಂತೆ ಎಲ್ಲೆಡೆಯೂ ಇದೇ ಚರ್ಚೆಯಾಗುತ್ತಿದೆ. ಶ್ರೀಮಂತರಿಗೆ ಯಾಕೆ ನೀಡುತ್ತಿದ್ದೀರಿ? ಬಡವರಿಗೆ ನೀಡಿ ಎಂದು ಪ್ರತಿಪಕ್ಷಗಳು ಕೂಡಾ ಕೇಳಿವೆ ಎಂದರು.

   ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದಿಂದ ಜನಪ್ರಿಯತೆ ಹೆಚ್ಚಲಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಯಾರು ಹೇಳಿದ್ದು?ಅದನ್ನು ನಾವು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ಕ್ಯಾಬಿನೆಟ್ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು. ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಈ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಬದ್ಧತೆಗಳು, ಹೀಗಾಗಿ ಅವುಗಳು ಮುಂದುವರೆಯುತ್ತವೆ ಎಂದು ತಿಳಿಸಿದರು.

   ಆದಾಗ್ಯೂ, ಈ ಗ್ಯಾರಂಟಿಗಳ ಪ್ರಯೋಜನವನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ನೀಡಬೇಕು, ಬೇರೆವರಿಗೆ ಬೇಡ ಎಂಬ ಸಲಹೆಯನ್ನು ಬೆಂಬಲಿಸಿದರು. ರಾಜ್ಯದಲ್ಲಿ ಶೇ. 82 ರಷ್ಟು ಬಿಪಿಎಲ್ ಕುಟುಂಬಗಳಿವೆ. ಆ ಕುಟುಂಬಗಳು ಪ್ರಯೋಜನ ಪಡೆಯಬೇಕೆಂಬುದು ಗುರಿಯಾಗಿದೆ. ನಮ್ಮಂತಹವರು ಇದರ ಲಾಭ ಪಡೆಯುವುದರಲ್ಲಿ ಏನು ಪ್ರಯೋಜನ ಎಂಬ ಚಿಂತನೆ ಬಹಳ ದಿನಗಳಿಂದ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಮಗ್ರ ಪರಾಮರ್ಶೆಯ ಅಗತ್ಯವಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.  

   ಗೃಹ ಸಚಿವ ಡಾ. ಜಿ. ಪರಮೇಶ್ವರ್, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ. 56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ ಎಂದರು.

    ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.‌13ರಷ್ಟು ಮತ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದ ಮತ ಹೆಚ್ಚಾಗಿದೆ ಎಂದು ಯಾಕೆ ವಿಶ್ಲೇಷಣೆ ಮಾಡಬಾರದು ಎಂದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನನ್ನ ಅಭಿಪ್ರಾಯವೊಂದೇ ಮುಖ್ಯವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದರು. 

   ಜಾರಕಿಹೊಳಿ ಹೇಳಿಕೆ ವಿರುದ್ಧ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಕಾಂಗ್ರೆಸ್ ಸರ್ಕಾರಕ್ಕೆ ಬಿಟ್ಟಿ ಭಾಗ್ಯಗಳನ್ನು ಜನಸಾಮಾನ್ಯರಿಗೆ ವಿತರಿಸಲೂ ಆಗುತ್ತಿಲ್ಲ, ನಿರ್ವಹಿಸಲೂ ಆಗುತ್ತಿಲ್ಲ, ಅದಕ್ಕೆ ಬೇಕಾದ ಹಣವನ್ನು ಹೊಂದಿಸಲೂ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರ ಮೂಲಕ ಗ್ಯಾರಂಟಿಗಳ ವಿರುದ್ಧ ಅಪಸ್ವರ ಎತ್ತಿಸಿರುವ ಕಾಂಗ್ರೆಸ್ ನಾಯಕರು ಭಾಗ್ಯಗಳಿಗೆ ಕತ್ತರಿ ಪ್ರಯೋಗಿಸುವುದಲ್ಲದೇ, ಸಂಪೂರ್ಣವಾಗಿ ನಿಲ್ಲಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

   ಕಾಂಗ್ರೆಸ್‌ ಸರ್ಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಕಾಂಗ್ರೆಸ್‌ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

   ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಇಂತಹ ಸ್ಥಿತಿಯಲ್ಲಿ ಸಂಪನ್ಮೂಲದ ಗ್ಯಾರಂಟಿಯೇ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ತರಲಾಗಿದೆ. ಇದನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ಇಲಾಖೆಗಳು ನಷ್ಟದಲ್ಲಿವೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ. ಅದಕ್ಕೂ ಮುಂದೆ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap