ಬೆಂಗಳೂರು:
ವೈರಸ್ ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಸರ್ಕಾರದಿಂದ ಕ್ವಾರಂಟೈನ್ ಮಾಡಲು 20 ಸಾವಿರ ಹೋಟೆಲ್ ರೂಮ್ ಪಡೆಯಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಕೊರೊನಾ ಮೇಲಿನ ಚರ್ಚೆಗೆ ಪ್ರತಿಪಕ್ಷಗಳು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀರಾಮುಲು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೇ ಇದ್ದಾಗ ರಾಮುಲು ಬೆಂಬಲಕ್ಕೆ ಬಂದ ಅಶ್ವತ್ಥ ನಾರಾಯಣ್, ದೇಶಾದ್ಯಂತ ಸುಮಾರು 5 ಲಕ್ಷ ಮಂದಿಗೆ ಕರ್ನಾಟಕದಲ್ಲಿ 1 ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದೆ.
ವೈರಸ್ ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಸರ್ಕಾರದಿಂದ ಕ್ವಾರಂಟೈನ್ ಮಾಡಲು 20 ಸಾವಿರ ಹೊಟೇಲ್ ರೂಮ್ ಪಡೆಯಲು ಮುಂದಾಗಿದೆ. ಒಂದು ಲಕ್ಷ ಜನಕ್ಕೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು ಸರ್ಕಾರದಿಂದ ಒಂದು ಸಾವಿರ ವೆಂಟಿಲೇಟರ್ ಹಾಗೂ 15 ಲಕ್ಷ ಎನ್-95 ಮಾಸ್ಕ್ ಖರೀದಿಸಲಾಗುತ್ತಿದೆ. ಫೀವರ್ ಕ್ಲಿನಿಕ್ ಗಳನ್ನು ತೆರೆಯಲಾಗುತ್ತಿದೆ.ಕ್ವಾರೆಂಟೈನ್‌ಗಾಗಿ 20 ಸಾವಿರ ಹೊಟೇಲ್ ರೂಂ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದರು.
ಪ್ರಸಕ್ತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ700 ವೆಂಟಿಲೇಟರ್ ಇದ್ದು, ಹೆಚ್ಚುವರಿ ಯಾಗಿ 1ಸಾವಿರ ವೆಂಟಿಲೇಟರ್ ಆರ್ಡರ್ ಮಾಡಲಾಗಿದೆ ಎಂದರು. ಆಗ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ, 17 ಸಾವಿರ ನಿಗಾ ಘಟಕ ಮಾಡಲಾಗಿದೆ.ಹಾಗಾಗಿ 17 ಸಾವಿರ ವೆಂಟಿಲೇಟರ್ ತರಿಸಿ ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ವಿಧಾನ ಪರಿಷತ್ತಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಇಡೀ ರಾಜ್ಯದಲ್ಲಿ 2 ಸಾವಿರ ಬೆಡ್ ಮೀಸಲಿಡಲಾಗಿದೆ. 10 ಸಾವಿರ ಮಂದಿಗೆ ಬಂದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಕೇಂದ್ರ ತೆರೆದಿದ್ದೇವೆ. ಹೋಮ್ ಕ್ವಾರಂಟೇನ್ ಮೇಲೆ ನಿಗಾ ವಹಿಸಿದ್ದೇವೆ.1 ಲಕ್ಷ ಜನರಿಗೆ ಸಮಸ್ಯೆ ಆಗದ ರೀತಿಯ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. 30% ಉಚಿತವಾಗಿ ವೆಂಟಿಲೇಟರ್ ಕೊಡಲು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 1ಸಾವಿರ ವೆಂಟಿಲೇಟರ್ ಗೆ ಈಗಾಗಲೇ ಆರ್ಡರ್ ಮಾಡಿದ್ದೇವೆ ಎಂದರು.
ಈ ವೇಳೆ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡುವಂತೆ ಕಾಂಗ್ರೆಸಿನ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು. ಆಗ ಡಾ. ಅಶ್ವತ್ ನಾರಾಯಣ್ ಉತ್ತರಿಸಿ,ಕೊರೊನಾಗೆ ಮೆಡಿಸನ್ ಇಲ್ಲ. ಔಷಧಿ ಕಂಡು ಹಿಡಿಯುವ ಕೆಲಸ ಆಗುತ್ತಾ ಇದೆ. ರಾಜ್ಯದಲ್ಲಿ ವೆಂಟಿಲೇಟರ್ ಪಡೆದ ಕರೋನಾ ಸೋಂಕಿತ ಯಾರು ಇಲ್ಲ. ಯಾರಿಗೂ ವೆಂಟಿಲೇಟರ್ ಹಾಕುವ ಅಗತ್ಯ ಈವರೆಗೆ ಬಂದಿಲ್ಲ . ಸೋಂಕಿತರು ಸಾಮಾನ್ಯ ಚಿಕಿತ್ಸೆ ಪಡೆದು ಗುಣ ಆಗುತ್ತಾ ಇದ್ದಾರೆ ಎಂದರು.
ಶ್ರೀರಾಮುಲು ಮಾತನಾಡಿ, ಕೊರೊನ ಎದುರಿಸಲು ಯಾವುದೇ ಹಣಕಾಸಿನ ತೊಂದರೆ ಇಲ್ಲ.ರಾಜ್ಯ ಸರ್ಕಾರ 200 ಕೋಟಿ ಕೊರೊನಾಗೆ ಮೀಸಲು ಇಟ್ಟಿದೆ.ಕೇಂದ್ರ ಸರ್ಕಾರ 186 ಕೋಟಿ ರೂ. ನೀಡಿದೆ.ಕೊರೊನ ಎದುರಿಸಲು ರಾಜ್ಯ ಸರಕಾರ ಸನ್ನದ್ಧವಾಗಿದೆ ಎಂದರು. ಈ ವೇಳೆ ವಿಧಾನ ಪರಿಷತ್ ನಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲವುಂಟಾಯಿತು.ಕೊರೊನಾ ಎದುರಿಸಲು ಸರಕಾರ ವಿಫಲ ಆಗಿದೆ. ಕನಿಷ್ಠ 10 ಸಾವಿರ ರೂ. ಮೀಸಲು ಇಡಬೇಕು.ಇಲ್ಲದಿದ್ದರ ಮುಂದಿನ ದಿನಗಳಲ್ಲಿ ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಸದನದಲ್ಲಿ ಗದ್ದಲ ಹೆಚ್ಚದಾಗ ಸಭಾಪತಿಗಳು ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ