ತುಮಕೂರು:
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಖಾಸಗಿ ಬಸ್ ಸುಟ್ಟು ಕರಕಲಾದರೂ ಪ್ರಯಾಣಿಕರೆಲ್ಲರು ಅಪಾಯದಿಂದ ಪಾರಾಗಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇಂದು ಬೆಳಗ್ಗೆ ಸುಮಾರು 5 ಗಂಟೆಯ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 6:15ಕ್ಕೆ ಎಸ್‍ಆರ್ ಎಸ್ ಸ್ಲೀಪಿಂಗ್ ಕೋಚ್ ಬಸ್ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಿಂದ 40 ಪ್ರಯಾಣಿಕರನ್ನು ಹೊತ್ತು ಇಂದು ಬೆಳಗ್ಗೆ ಬೆಂಗಳೂರಿಗೆ ತಲುಪಬೇಕಿತ್ತು.
ಆದರೆ ತುಮಕೂರಿನಲ್ಲಿ ಆಕಸ್ಮಿಕವಾಗಿ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ. ಮುದ್ದೆಬಿಹಾಳ ಮೂಲದ ಪ್ರಯಾಣಿಕರೊಬ್ಬರು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ನಿದ್ದೆಯಲ್ಲಿದ್ದ ಉಳಿದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗಿಳಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಪ್ರಯಾಣಿಕರು ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರಾದರೂ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಲ್ಲದೆ ಪ್ರಯಾಣಿಕರ ಲಗೇಜ್‍ಗಳು ಸಹ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರಾಜು, ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ