ಮಂಡ್ಯ:
ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಜಮೀನಿಗೆ ಮಗುಚಿ ಬಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮದ್ದೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮದ್ದೂರು ಪಟ್ಟಣದ ಹೊರವಲಯದ ಐಶ್ವರ್ಯ ಶಾಲೆ ಬಳಿ ಘಟನೆ ನಡೆದಿದ್ದು, ಬಸ್ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದ್ದು ಎಂದು ಹೇಳಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಶ್ಚಿಮ ಬಂಗಾಳದ ಪ್ರವಾಸಿಗರ ಬಸ್ ಹೊರಟಿತ್ತು. ಮದ್ದೂರು ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ಸು ರಸ್ತೆ ಬಿಟ್ಟು ಕೆಳಗೆ ಇಳಿದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ಸು ಬಿದ್ದಿದ್ದನ್ನು ನೋಡಿದ ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿ, 108ಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಲ್ಲಿ ಬಸ್ ನಲ್ಲಿದ್ದ ಸುಮಾರು 40 ಜನ ಪ್ರಯಾಣಿಕರು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ಪ್ರಯಾಣಿಕರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಗನಮರಡಿ ಬಸ್ ದುರಂತ ಸಂಭವಿಸಿ ನಾಲ್ಕು ತಿಂಗಳು ಕೂಡ ಆಗಿಲ್ಲ. ಮತ್ತೊಂದು ಬಸ್ ಅವಘಡವು ಜಿಲ್ಲೆಯಲ್ಲಿ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
