ಇದೇನು ಮಾರುಕಟ್ಟೆಯೋ..ಕೊಳಚೆ ಪ್ರದೇಶವೋ..?

ತುಮಕೂರು :                                                                                                   ವರದಿ : ರಾಕೇಶ್.ವಿ.

      ತುಮಕೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಅಂತರಸನಹಳ್ಳಿ ಹೂವು ಹಣ್ಣು ಮಾರುಕಟ್ಟೆಗೆ ದಿನನಿತ್ಯವೂ ಸಾವಿರಾರು ಜನ ವ್ಯಾಪಾರ ಮಾಡುತ್ತಾರೆ. ಹೂವು, ಹಣ್ಣು, ತರಕಾರಿ ಸೇರಿದಂತೆ ಗೃಹಪಯೋಗಿ ವಸ್ತುಗಳ ಮಾರಾಟ ಸೇರಿದಂತೆ ಸಾಕಷ್ಟು ವಹಿವಾಟು ಇಲ್ಲಿ ನಡೆಯುತ್ತದೆ. ಆದರೆ ಈ ಮಾರಕಟ್ಟೆಯ ಸ್ಥಿತಿ ಗಮನಿಸಿದರೆ ಅತ್ಯಂತ ನಿರ್ಲಕ್ಷ್ಯದ ಪರಮಾವಧಿಯೆ ಇಲ್ಲಿ ಕಂಡು ಬರುತ್ತದೆ. ಸೂಕ್ತ ನಿರ್ವಹಣೆ ಇಲ್ಲ. ಗಮನಿಸಬೇಕಾದ ಅಧಿಕಾರಿಗಳು ಇತ್ತ ತಲೆಹಾಕುತ್ತಿಲ್ಲ ಒಟ್ಟಾರೆ ಈ ಮಾರುಕಟ್ಟೆ ಸೌಲಬ್ಯಗಳಿಂದ ಸೊರಗುತ್ತಿರುವುದು ಮಾತ್ರವಲ್ಲದೆ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.

      8 ಎಕರೆ 20 ಗುಂಟೆ ಜಾಗದಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಇಲ್ಲಿ ನಿರ್ಮಾಣವಾಗಿದೆ. 2015ರ ಮಾರ್ಚ್ ತಿಂಗಳಿನಲ್ಲಿ ಇದು ಪ್ರಾರಂಭವಾಯಿತು. ಇದಕ್ಕು ಮುಂಚೆ ತುಮಕೂರಿನ ಬಾಳನಕಟ್ಟೆ ಪ್ರದೇಶದ ಶ್ರೀ ಸಿದ್ದವಿನಾಯಕ ತರಕಾರಿ ಮಾರುಕಟ್ಟೆ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿತ್ತು. ಇಲ್ಲಿಗೆ ವರ್ಗಾವಣೆಗೊಂಡ ಬಳಿಕ ಕ್ರಮೇಣ ಗ್ರಾಹಕರು ಇತ್ತ ಬರಲಾರಂಭಿಸಿ ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಯತ್ತ ಮುಖ ಮಾಡಿತು.

      ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸುಮಾರು 260 ಮಳಿಗೆಗಳು ಇವೆ. ಒಂದು ರೈತ ಭವನ ಇದೆ. ಇಲ್ಲಿಯೇ ಆಡಳಿತ ಕಚೇರಿಯೂ ಇದೆ. ಆದರೆ ಸದರಿ ಕಚೇರಿ ನಾಮಕಾವಸ್ಥೆಗೆ ಇದ್ದಂತೆ ಕಾಣುತ್ತದೆ. ಆಡಳಿತ ಕಚೇರಿ ಮುಂಭಾಗದಲ್ಲೇ ಕಸದ ರಾಶಿಗಳು ರಾರಾಜಿಸುತ್ತವೆ. ಇದ್ಯಾವುದನ್ನು ಕೇಳುವವರೇ ದಿಕ್ಕಿಲ್ಲ. ದಿನವೊಂದಕ್ಕೆ 45 ಟನ್‍ಗಳಷ್ಟು ಕಸವು ಶೇಖರಣೆಯಾಗುತ್ತದೆ. ಕಸ ನಿರ್ಮೂಲನೆ ಮಾಡುವ ಜವಾಬ್ದಾರಿ ಕೃಷಿ ಮಾರುಕಟ್ಟೆ ಸಮಿತಿಯವರದ್ದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಎಂಬುವವರಿಗೆ ಗುತ್ತಿಗೆ ನೀಡಿದ್ದು, ಪ್ರತೀ ದಿನ ಬೆಳಗ್ಗೆ ಎರಡು ತಾಸುಗಳ ಕಾಲ ಕಸವನ್ನು ತೆಗೆದುಕೊಂಡು ಹೋಗಿ ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿದೆ. ಆದರೂ ಕಸದ ಸಮಸ್ಯೆ ಇನ್ನೂ ಕಡಿಮೆ ಆಗುತ್ತಿಲ್ಲ.

      ಕಸ ಎತ್ತುವಳಿ ಮಾಡಿ ಅದನ್ನು ವಿಲೇವಾರಿ ಮಾಡಲು ಯಾವುದೇ ಸಮಸ್ಯೆ ಇಲ್ಲ. ಅಜ್ಜಗೊಂಡನಹಳ್ಳಿ ಘಟಕ ಈಗಾಗಲೇ ಇರುವುದರಿಂದ ಅಲ್ಲಿಗೆ ಸಲೀಸಾಗಿ ಎತ್ತುವಳಿ ಮಾಡಬಹುದು. ಆದರೆ ಕಸದ ನಿರ್ವಹಣೆ ಬಗ್ಗೆ ಇಲ್ಲಿ ತಾತ್ಸಾರ ಇರುವುದಾದರು ಏತಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ತರಕಾರಿ ಮಾರುಕಟ್ಟೆ ಎಂದ ಮೇಲೆ ಅಲ್ಲಿ ತ್ಯಾಜ್ಯ ಸಂಗ್ರಹವಾಗುವುದು ಸಹಜವೇ. ಹಾಗೆಂದ ಮಾತ್ರಕ್ಕೆ ಅಂತಹ ತ್ಯಾಜ್ಯ ಮತ್ತು ಕಸ ಅಲ್ಲಿಯೇ ಉಳಿಯಬೇಕೆಂದೇನು ಇಲ್ಲ. ಇತ್ತೀಚೆಗಷ್ಟೇ ಆಯುಧ ಪೂಜೆ, ವಿಜಯದಶಮಿ ಹಬ್ಬ ಮುಗಿಯಿತು. ಹಬ್ಬ ಮುಗಿದು ನಾಲ್ಕು ದಿನ ಕಳೆಯಬೇಕೆ ಕಸ ಎತ್ತುವಳಿ ಮಾಡಲು. ಸೋಮವಾರದಂದು ಮಾರುಕಟ್ಟೆ ಆವರಣದಲ್ಲಿ ಕಸ ಎತ್ತುವ ಕೆಲಸ ನಡೆಯುತ್ತಿತ್ತು.

      ಇಲ್ಲಿ ಕೇವಲ ಕಸವೊಂದೇ ಸಮಸ್ಯೆ ಅಲ್ಲ. ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ, ಬೀದಿ ದೀಪದ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ಪಾರ್ಕಿಂಗ್ ಸೌಲಭ್ಯ ಇಲ್ಲದೆ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುತ್ತಿದ್ದಾರೆ. ದೂರದ ಊರುಗಳಿಂದ ವ್ಯಾಪಾರ ವಹಿವಾಟಿಗೆ ಇಲ್ಲಿಗೆ ಬರುತ್ತಾರೆ. ಅತಿ ದೊಡ್ಡ ಮಾರುಕಟ್ಟೆ ಪ್ರದೇಶ ಇದಾಗಿರುವುದರಿಂದ ಮೂಲಭೂತ ಸೌಕರ್ಯಗಳು ಇರಬೇಕು. ಇದನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸಂಬಂಧಪಟ್ಟವರಿಗೆ ಇರಬೇಕು.

ಎಲ್ಲಂದರಲ್ಲಿ ಕಾಣುವ ಕಸದ ರಾಶಿಗಳು:

      ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದ ಪ್ರತೀ ಮೂಲೆ ಮೂಲೆಯಲ್ಲೂ ಕಸದ ರಾಶಿಗಳು ದರ್ಶನ ನೀಡುತ್ತವೆ. ಮಾರುಕಟ್ಟೆ ಹೊರಭಾಗದಿಂದ ಹಿಡಿದು ಒಳಗಿನ ಪ್ರತಿಯೊಂದು ಬ್ಲಾಕ್‍ಗಳಲ್ಲೂ, ಅಂಗಡಿಗಳ ಮುಂದೆ ಕಸವು ತುಂಬಿಕೊಂಡಿದೆ. ದಸರಾ ಹಬ್ಬದ ಪ್ರಯುಕ್ತ ನಡೆದ ವ್ಯಾಪಾರ ವಹಿವಾಟಿನಿಂದ ಇನ್ನಷ್ಟು ಕಸ ಹೆಚ್ಚಾಗಿದೆ. ಕುಂಬಳಕಾಯಿ ಸೇರಿದಂತೆ ಸಾಕಷ್ಟು ತ್ಯಾಜ್ಯವನ್ನು ಅಲ್ಲಿಯೇ ಬೀಸಾಡಿದ್ದಾರೆ. ನಿತ್ಯ ಕಸವನ್ನು ತೆಗೆದುಕೊಂಡು ಹೋಗುವವರು ಕಳೆದ ಎರಡು ವಾರದಿಂದ ಕಸವನ್ನು ತೆಗೆದಿರಲಿಲ್ಲ. ಇದರಿಂದ ಹೆಚ್ಚಿನ ಕಸ ಶೇಖರಣೆಗೊಂಡಿದೆ.

ಸರಿಯಿಲ್ಲದ ರಸ್ತೆ, ಒಳಚರಂಡಿ ವ್ಯವಸ್ಥೆ:

      ಮಾರುಕಟ್ಟೆ ಒಳಭಾಗಕ್ಕೆ ಪ್ರವೇಶಿಸುತ್ತಲೇ ತಗ್ಗುಗುಂಡಿಗಳಿಂದ ಕೂಡಿದ ರಸ್ತೆಯೊಂದು ಕಣ್ಣಿಗೆ ಕಾಣುತ್ತದೆ. ಒಳಭಾಗದಲ್ಲಿ ಅಳವಡಿಸಲಾದ ಚರಂಡಿ ವ್ಯವಸ್ಥೆಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಮಳೆ ಬಂದರೆ ರಸ್ತೆ ಮೇಲೆಲ್ಲಾ ನೀರು ನಿಂತುಕೊಂಡು ಓಡಾಡಲು ಆಗುವುದಿಲ್ಲ. ವ್ಯಾಪಾರ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಗಳ ಸಂಪರ್ಕವೂ ಚರಂಡಿಗೆ ನೀಡಿದ್ದು, ದುರ್ವಾಸನೆಯೇ ಹೆಚ್ಚಾಗಿರುತ್ತದೆ. ಇಲ್ಲಿ ನಾವು ವ್ಯಾಪಾರ ಮಾಡುವುದಾದರೂ ಹೇಗೆ ಎಂದು ಕೆಲ ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ಬಳಕೆಗೆ ಬಾರದ ಕುಡಿಯುವ ನೀರಿನ ಘಟಕ:

       ಕೃಷಿ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಎಡಭಾಗದಲ್ಲಿ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿ ಸುಮಾರು 6 ತಿಂಗಳು ಕಳೆದಿದೆ. ಇಲ್ಲಿಯವರೆಗೆ ಅದಕ್ಕೆ ನೀರೇ ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಸೌಲಭ್ಯ ಮಾಡಿಯೂ ಅಪ್ರಯೋಜನವಾಗಿದೆ. ಕುಡಿಯಲು ನೀರೇ ಸಿಗುವುದಿಲ್ಲ. ಇದರಿಂದ ಬಾಟಲ್ ನೀರಿಗೆ ಮೊರೆ ಹೋಗಿದ್ದಾರೆ.

ರಸ್ತೆಯ ಮುಂಭಾಗದಲ್ಲಿ ಹಾಕಿದ ಟೆಂಟ್‍ಗಳು:

      ವ್ಯಾಪಾರ ಮಾಡಲು ಅಂಗಡಿಗಳನ್ನು ಲೀಜ್ ಹಾಗೂ ಬಾಡಿಗೆಗೆ ಪಡೆದುಕೊಂಡ ಮಳಿಗೆಗಳ ಮುಂದೆ ದಿನಸಿ ಪದಾರ್ಥಗಳನ್ನು ಮಾರುವವರು ರಸ್ತೆಯ ಮಧ್ಯಭಾಗದವರೆಗೂ ಟೆಂಟ್‍ಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಬಾಡಿಗೆ ಬರುವ ಆಟೋಗಳು ಮಾರುಕಟ್ಟೆ ಒಳಗಡೆ ಪ್ರವೇಶ ಮಾಡಲು ಆಗುತ್ತಿಲ್ಲ ಎಂಬುದು ಮತ್ತೊಂದು ಸಮಸ್ಯೆಯಾಗಿದೆ. ಇಲ್ಲಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುವವರ ಬಳಿ ತಿಂಗಳಿಗಿಷ್ಟು ಎಂದು ಸುಂಕವನ್ನು ಕಟ್ಟಿಸಿಕೊಳ್ಳುತ್ತದೆ ಎಂಬುದು ಕೆಲ ವ್ಯಾಪಾರಸ್ಥರ ಮಾತಾಗಿದೆ. ಮಾರುಕಟ್ಟೆ ಒಳಗೆ ಪ್ರವೇಶಿಸುವ ವಾಹನಗಳಂತೂ ಕಿರಿಕಿರಿ ಅನುಭವಿಸುವ ವಾತಾವರಣ ಅಲ್ಲಿ ಕಂಡು ಬರುತ್ತದೆ. ಓಡಾಡುವ ರಸ್ತೆಗಳು ಮಾರುಕಟ್ಟೆಯ ಆವರಣಗಳಾಗಿಬಿಟ್ಟಿವೆ.

ಪಾರ್ಕಿಂಗ್ ಸೌಲಭ್ಯವೇ ಇಲ್ಲ:

      ಮಾರುಕಟ್ಟೆಗೆ ಬರುವವರ ವಾಹನಗಳನ್ನು ಪಾರ್ಕಿಂಗ್ ಮಾಡಲು ನಿರ್ದಿಷ್ಠ ಸ್ಥಳಾವಕಾಶ ಇಲ್ಲ. ಮುಖ್ಯ ರಸ್ತೆಯ ಪಕ್ಕದಲ್ಲಿ ಬೃಹತ್ ವಾಹನಗಳಿಗೆಂದು ಸೌಲಭ್ಯ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಅಲ್ಲಿ ನಿಲ್ಲಿಸಲು ಆಗುವುದಿಲ್ಲವೆಂದು ಸಾರ್ವಜನಿಕರು ಒಳಗಡೆಗೆ ತೆಗೆದುಕೊಂಡು ಹೋಗುತ್ತಾರೆ. ಒಳಗಡೆ ಎಲ್ಲಿಯೂ ಕೂಡ ದ್ವಿಚಕ್ರ ವಾಹನಗಳ ನಿಲುಗಡೆಗೆಂದು ಸೂಕ್ತ ಸ್ಥಳ ಇಲ್ಲವಾದ್ದರಿಂದ ಎಲ್ಲಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಓಡಾಡುವ ಜನರಿಗೂ ತೊಂದರೆ ಹಾಗೂ ವ್ಯಾಪಾರ ಮಾಡುವವರಿಗೂ ತೊಂದರೆ ಉಂಟಾಗುತ್ತಿದೆ. ವಾಹನ ನಿಲುಗಡೆಗೆ ಸ್ಥಳ ಇಲ್ಲವೆಂದು ಕೆಲ ವಾಹನ ಮಾಲೀಕರು ಅಂಗಡಿಗಳ ಮುಂಭಾಗದಲ್ಲಿ ನಿಲ್ಲಿಸುವುದರಿಂದ ವ್ಯಾಪಾರ ಮಾಡುವವರಿಗೆ ಸಮಸ್ಯೆ ಎದುರಾಗುತ್ತಿದೆ ಕೆಲ ವ್ಯಾಪಾರಸ್ಥರು.

ರಾತ್ರಿ ವೇಳೆ ಉರಿಯದ ಬೀದಿ ದೀಪಗಳು:

     ಮಾರುಕಟ್ಟೆ ಒಳಗಡೆ ಹಾಕಲಾದ ಬೀದಿದೀಪಗಳಲ್ಲಿ ಅರ್ಧದಷ್ಟು ಉರಿಯುವುದೇ ಇಲ್ಲ. ಸಾಕಷ್ಟು ಬೀದಿ ದೀಪಗಳು ಹಾಳಾಗಿದ್ದು ಸುಮಾರು ದಿನಗಳಾಗಿವೆ. ಆದರೂ ಇಲ್ಲಿಯವರೆಗೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ರಾತ್ರಿ ವೇಳೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಇದ್ದಾರೆ. ಕಳ್ಳತನಗಳು ಮಾತ್ರ ನಡೆಯುತ್ತಲೇ ಇವೆ. ಹಾಡಹಗಲೇ ಕಳವು ಪ್ರಕರಣಗಳು ವರದಿಯಾಗುತ್ತಿವೆ.
ರಾತ್ರಿ ವೇಳೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲಿ ಅಗತ್ಯವಾಗಿ ಬೇಕಾಗಿದೆ.

ಮುಖ ಪರಿಚಯವೇ ಇಲ್ಲದ ಕಾರ್ಯದರ್ಶಿ

      ಕಳೆದ 14 ತಿಂಗಳ ಹಿಂದೆ ಕಾರ್ಯದರ್ಶಿ ಹುದ್ದೆಗೆ ಬಂದ ಡಾ.ಕೆ.ಕೋಡಿಗೌಡ ಕೃಷಿ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿದ್ದು ಕೇವಲ ಎರಡು ಬಾರಿ ಮಾತ್ರ. ಅದು ಕೂಡ ಕಾರಿನಲ್ಲೇ ಕುಳಿತು ಮಾರುಕಟ್ಟೆಯ ಒಳಭಾಗದಲ್ಲಿ ಒಂದು ಸುತ್ತು ಹೊಡೆದು ಅಲ್ಲಿಂದ ವಾಪಸ್ ತೆರಳುತ್ತಾರೆ. ಅಲ್ಲಿ ಸಮಸ್ಯೆಯಾದರೂ ಏನು ಎಂಬುದು ತಿಳಿಯುವಷ್ಟು ಸಮಯ ಕೂಡ ಇಲ್ಲವಾ. ಯಾರಾದ್ರೂ ಸಮಸ್ಯೆ ಇದೆ ಎಂದು ದೂರವಾಣಿ ಕರೆ ಮಾಡಿದರೂ ನಾನು ದೆಹಲಿಯಲ್ಲಿದ್ದೀನಿ, ಬೆಂಗಳೂರಿನಲ್ಲಿದ್ದೀನಿ ಎಂದು ಬೇಜವಬ್ದಾರಿ ಉತ್ತರ ಸಿಗುತ್ತದೆ ಎಂಬುದು ವ್ಯಾಪಾರಸ್ಥರ ಆರೋಪವಾಗಿದೆ.

ಎರಡು ತಿಂಗಳಿಂದ ಬಾಕಿ ಉಳಿದ ಬಿಲ್:

      ಕಸದ ನಿರ್ಮೂಲನೆಗೆಂದು ಗೋವಿಂದರಾಜು ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ದಾಖಲೆಗಳ ಪ್ರಕಾರ ಪ್ರತೀ ತಿಂಗಳು ಮೊದಲನೇ ವಾರದೊಳಗೆ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಬೇಕು. ಆದರೆ ಕಳೆದ ಎರಡು ತಿಂಗಳಿನಿಂದಲೂ ಬಿಲ್ ಪಾವತಿ ಮಾಡದೆ ಇರುವುದರಿಂದ ಗುತ್ತಿಗೆದಾರರು ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಕಸ ನಿರ್ಮೂಲನೆ ಮಾಡಿಲ್ಲ. ಸೋಮವಾರದಂದು ಮತ್ತೊಮ್ಮೆ ಕಾರ್ಯದರ್ಶಿಗೆ ದೂರವಾಣಿ ಮೂಲಕ ಮಾತನಾಡಲಾಗಿ ಚೆಕ್‍ನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಆಗಷ್ಟೆ ಕಸ ವಿಲೇವಾರಿ ಕಾರ್ಯ ಪ್ರಾರಂಭವಾಗಿದೆ. ಮಂಗಳವಾರ ಸಂಜೆಗೆ ಪೂರ್ಣ ಪ್ರಮಾಣದಲ್ಲಿ ಕಸ ವಿಲೇವಾರಿ ಮಾಡಲಾಗಿದೆ.

ಸರಿಯಾದ ಸಮಯಕ್ಕೆ ಸಿಗದ ಸಂಬಳ:

      ಮಾರುಕಟ್ಟೆ ಸ್ಥಳದಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕೆಲ ಕೆಲಸದಾರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಇದರಿಂದ ಇಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಕೆಲಸ ಬಿಟ್ಟು ಬೇರೆಡೆ ತೆರಳುತ್ತಿದ್ದಾರೆ. ಈ ಮುಂಚೆ ಸರಿಯಾದ ಸಮಯಕ್ಕೆ ವೇತನ ಬರುತ್ತಿತ್ತು. ಕಳೆದ ಹತ್ತು ತಿಂಗಳುಗಳಿಂದ ಸರಿಯಾದ ಸಮಯಕ್ಕೆ ವೇತನ ಸಿಗದೆ ಪರದಾಡುವಂತಾಗಿದೆ. ವೇತನ ಕೇಳಿದರೆ ನಾಳೆ ಕೊಡ್ತೇನೆ. ಆಮೇಲೆ ಕೊಡ್ತೇನೆ ಎಂದು ಹೇಳುತ್ತಾ ಕಾಲಹರಣ ಮಾಡುತ್ತಾರೆ. ಇದರಿಂದ ಬೇಸತ್ತು ಸುಮಾರು ಜನ ಕೆಲಸ ಬಿಟ್ಟು ಹೋಗಿದ್ದಾರೆ ಎನ್ನುತ್ತಾರೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು.

ಕೆಲಸ ಕಾರ್ಯಗಳ ವಿಳಂಬಕ್ಕೆ ಕಾರಣವೇನು ?

      ಕೃಷಿ ಮಾರುಕಟ್ಟೆ ಸಮಿತಿಯ ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ಅದಕ್ಕೆ ಕಾರ್ಯದರ್ಶಿಯವರ ಸಹಿ ಅತ್ಯಗತ್ಯ. ಇದಕ್ಕಾಗಿ ಅವರ ಬಳಿ ತೆರಳಿದರೆ ಮೇಲೆ ಕೆಳಗೆ ನೋಡುತ್ತಾರೆ. ಇಲ್ಲಿ ಬಹಳಷ್ಟು ವಿಳಂಬವಾಗುತ್ತಿದೆ. ಅವರನ್ನು ನೋಡಿಕೊಳ್ಳದಿದ್ದರೆ ಯಾವ ಕೆಲಸವೂ ಸುಸೂತ್ರವಾಗಿ ಆಗುವುದಿಲ್ಲ ಎಂಬ ಆರೋಪ ಕೇಳಿಬರುತ್ತದೆ. ನೌಕರರು ತಮ್ಮ ವೇತನ ಪಡೆಯಲು ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರಿಗೆ ಪ್ರತಿ ತಿಂಗಳು 10ರಿಂದ 10.50 ಲಕ್ಷ ರೂಗಳ ವರೆಗೆ ಬಿಲ್ ನೀಡಬೇಕಾಗುತ್ತದೆ. ಈ ಹಣವನ್ನು ಪಡೆಯುವಷ್ಟರವೇಳೆಗೆ ಸಾಕು ಸಾಕಾಗಿ ಹೋಗುತ್ತದೆ ಎನ್ನುತ್ತಾರೆ ಕೆಲವರು.

ಕುಡಿಯುವ ನೀರಿನ ಸೌಲಭ್ಯ ಇಲ್ಲ:

      ಮಾರುಕಟ್ಟೆ ಪ್ರಾಂಗಣದಲ್ಲಿ ಎರಡು ಬೋರ್‍ವೆಲ್‍ಗಳನ್ನು ಅಳವಡಿಸಲಾಗಿದೆ. ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ನೀರೇ ಬರುತ್ತಿಲ್ಲ. ಇದರಿಂದ ರಾತ್ರಿ ವೇಳೆ ಮದ್ಯಪಾನಾಸಕ್ತರ ತಾಣವಾಗಿ ಪರಿಣಮಿಸಿದ್ದು, ಇಲ್ಲಿಯೇ ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಕುಡಿಯುವ ನೀರಿನ ಘಟಕದ ತೊಟ್ಟಿಗೆ ಹಾಕಿದ್ದಾರೆ. ರಾತ್ರಿ ವೇಳೆ ಮಲ ವಿಸರ್ಜನೆ ಅಲ್ಲಿಯೇ ಮಾಡುತ್ತಾರೆ. ಇದರಿಂದ ದುರ್ವಾಸನೆ ಬೀರುತ್ತದೆ.

ಅನಾಥ ರೈತರ ಮಳಿಗೆಗಳು :

      ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು 254 ಮಳಿಗೆಗಳು ಇವೆ. 35 ಶೀಟ್‍ವ್ಯವಸ್ಥೆಯ ಮಳಿಗೆಗಳು, 46 ತೆರೆದ ಶೀಟ್ ವ್ಯವಸ್ಥೆಯ ಮಳಿಗೆಗಳು ಹಾಗೂ 200ಕ್ಕೂ ಹೆಚ್ಚು ಅನಾಥ ರೈತರ ಮಳಿಗೆಗಳು ಎಂದು ಟೋಕನ್ ಸಿಸ್ಟಮ್ ಮೂಲಕ ನೀಡಲಾಗಿದೆ. ಇವರು ರಸ್ತೆಯ ಪಕ್ಕದ 4 ಅಡಿ ಅಗಲ ಹಾಗೂ 4 ಅಡಿ ಉದ್ದದಲ್ಲಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದು, ಇವರು ರಸ್ತೆಯ ಮುಂಭಾಗಕ್ಕೂ ಬಂದಿದ್ದಾರೆ. ಇದರಿಂದ ಓಡಾಡುವ ಸಾರ್ವಜನಿಕರಿಗೂ ಅನನುಕೂಲವಾಗಿದೆ.
ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳು:

 

      ಕೃಷಿ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯ ಒಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಗಾಗಿ ನಕ್ಷೆ ರೂಪಿಸಲಾಗಿದೆ. ಆದರೆ ಅದು ಕಾರ್ಯಗತವಾಗಿಲ್ಲ. ಇದರಿಂದ ವ್ಯಾಪಾರಕ್ಕೆಂದು ಬರುವ ಗ್ರಾಹಕರು ನೇರವಾಗಿ ದ್ವಿಚಕ್ರವಾಹನಗಳನ್ನು ಪ್ರಾಂಗಣ ಒಳಭಾಗಕ್ಕೆ ತೆಗೆದುಕೊಂಡು ಬರುವುದರ ಜೊತೆಗೆ ಎಲ್ಲಿ ಬೇಕೋ ಅಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಇದರಿಂದ ಟ್ರಾಫಿಕ್ ಕಿರಿಕಿರಿಯು ಉಂಟಾಗುತ್ತಿದೆ. ಇದರಲ್ಲಿ ಗ್ರಾಹಕರ ಹಾಗೂ ವರ್ತಕರ ಇಬ್ಬರ ತಪ್ಪೂ ಇದೆ ಎನ್ನುತ್ತಾರೆ ಕಾರ್ಯದರ್ಶಿ ಕೋಡಿಗೌಡ. ವಾಹನಗಳನ್ನು ನಿಲ್ಲಿಸಲು ಹಲವು ಬಾರಿ ಮನವಿ ಮಾಡಿದರೂ ಯಾರು ಅದನ್ನು ಲೆಕ್ಕಿಸದೇ ಪ್ರಾಂಗಣ ಒಳಕ್ಕೆ ತಂದು ಬಿಡುತ್ತಾರೆ ಇದರಿಂದ ಹೆಚ್ಚಿನ ಸಮಸ್ಯೆ ಉದ್ಭವವಾಗುತ್ತಿದೆ ಎನ್ನುತ್ತಾರೆ.

ಪ್ರಾಂಗಣಕ್ಕೆ ಬೇಕು ಪೊಲೀಸ್ ವ್ಯವಸ್ಥೆ:

 

      ನಗರದಲ್ಲಿ ದೊಡ್ಡದಾದ ಮಾರುಕಟ್ಟೆ ಇದಾಗಿದ್ದು, ಇಲ್ಲಿ ಪೊಲೀಸ್ ಚೌಕಿ ಇದ್ದರೆ ಒಳಿತು ಎನ್ನುವುದು ಕೆಲ ವರ್ತಕರ ಮಾತು. ಕೇವಲ ಬೆಳಗ್ಗೆ ಎರಡು ಬಾರಿ ಸಂಜೆ ಎರಡು ಬಾರಿ ಬೀಟ್ ಪೊಲೀಸರು ಬಂದು ನೋಡಿಕೊಂಡು ಹೋಗುತ್ತಾರೆ ಆದರೆ ಇಲ್ಲಿಯೇ ಒಂದು ಪೊಲೀಸ್ ಚೌಕಿ ಇದ್ದರೆ ಹೆಚ್ಚಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದಾಗಿದೆ. ಹಬ್ಬದ ಸಮಯದಲ್ಲಿ ಜೇಬುಗಳ್ಳರ ಕೈಚಳಕ ತೋರುತ್ತಾರೆ ಹೊರತು ಮಾಮೂಲಿ ದಿನಗಳಲ್ಲಿ ಆ ಸಾಹಸಕ್ಕೆ ಯಾರು ಕೈಹಾಕುವುದಿಲ್ಲ ಎಂಬುದು ವರ್ತಕರಿಂದ ಕೇಳಿ ಬಂದಿವೆ.

 
ಮಾರುಕಟ್ಟೆ ಒಳಭಾಗದಲ್ಲಿ ರಸ್ತೆ ಸಮಸ್ಯೆ ಇದೆ. ರಸ್ತೆಯ ಕೆಳ ಭಾಗದಲ್ಲಿ ಮಾಡಲಾಗಿದ್ದ ಚರಂಡಿ ವ್ಯವಸ್ಥೆ ಹಾಗೂ ಪಿಟ್‍ಗುಂಡಿ ವ್ಯವಸ್ಥೆಯಿಂದ ದುರ್ವಾಸನೆ ಬೀರುತ್ತದೆ. ಮಳೆ ಬಂದ ಸಮಯದಲ್ಲಿ ನೀರು ನಿಂತುಕೊಳ್ಳುತ್ತದೆ. ಇದರಿಂದ ವ್ಯಾಪಾರ ಮಾಡುವುದು ಕಷ್ಟಕರವಾಗಿದೆ.

-ನರಸಿಂಹಮೂರ್ತಿ, ವರ್ತಕರು

ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಗಳು ಉರಿಯುವುದೇ ಇಲ್ಲ. ಸರಿಯಾದ ಬೆಳಕಿನ ಸೌಕರ್ಯ ಇಲ್ಲ. ಮಾರುಕಟ್ಟೆ ಪ್ರವೇಶ ಮಾಡಬೇಕಾದರೆ ತಗ್ಗು ಗುಂಡಿಗಳು ಬಿದ್ದಿವೆ. ಅಧಿಕಾರಿಗಳ್ಯಾರು ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ದ್ವಿಚಕ್ರವಾಹನಗಳು ಓಡಾಡುವುದರಿಂದ ಧೂಳು ಎದ್ದು ತರಕಾರಿಗಳ ಮೇಲೆ ಕೂರುತ್ತದೆ. ಇದರಿಂದ ತರಕಾರಿ ಯಾರು ಕೊಳ್ಳುವುದಿಲ್ಲ.

-ನೇತ್ರ, ತರಕಾರಿ ಮಾರಾಟ ಮಾಡುವವರು.

ದಿನನಿತ್ಯ ಮಧುಗಿರಿಯಿಂದ ತುಮಕೂರಿಗೆ ಬಾಡಿಗೆ ಮೇಲೆ ಬರುತ್ತೇವೆ. ಇಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಒಳಗಡೆ ಚಲಿಸುವಾಗ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವವರಿಂದ ತೊಂದರೆಯಾಗುತ್ತಿದೆ.

-ರಂಗನಾಥ್, ಆಟೋ ಚಾಲಕರು, ಮಧುಗಿರಿ

ವರ್ಷಕ್ಕೊಮ್ಮೆ ನಡೆಯುವ ಇ ಟೆಂಡರ್‍ನಲ್ಲಿ ಸುಮಾರು 1 ಲಕ್ಷ 50 ಸಾವಿರದಷ್ಟು ಹಣವನ್ನು ಬಂಡವಾಳ ಹಾಕಿ ಟೆಂಡರ್ ಪಡೆದು 42 ಜನರನ್ನು ಬಳಸಿಕೊಂಡು ಕೆಲಸ ಮಾಡಿಸುತ್ತೇವೆ. ಇದರಲ್ಲಿ ಸೆಕ್ಯುರಿಟಿಗಳು, ವಾಹನ ಚಾಲಕರು ಸೇರಿ 42ಜನ ಕೆಲಸ ಮಾಡುತ್ತಾರೆ. ಈ ಕೆಲಸಕ್ಕೆ ಪ್ರತೀ ತಿಂಗಳು 10 ಲಕ್ಷದಷ್ಟು ಬಿಲ್ ಆಗುತ್ತದೆ. ಇದರಲ್ಲಿ ಶೇ.18 ರಷ್ಟು ಜಿಎಸ್‍ಟಿ ಕಟ್ಟಬೇಕಾಗುತ್ತದೆ. ಉಳಿದ ಹಣದಲ್ಲಿ ಇಎಸ್‍ಐ ಮತ್ತು ಪಿಎಫ್ ಸಂದಾಯ ಮಾಡಿ ಉಳಿದಿದ್ದರಲ್ಲಿ ವೇತನ ನೀಡಬೇಕು. ಸರ್ಕಾರದಿಂದ ಬರುವ ಹಣ ನೀಡಲು ಕಾರ್ಯದರ್ಶಿಗಳು ಡಿಮ್ಯಾಂಡ್ ಮಾಡುತ್ತಾರೆ. ಹೀಗಿದ್ದಾಗ ನಾವು ಎಲ್ಲಿ ಹಣ ನೀಡುವುದು. ಕೆಲಸ ಮಾಡಿಸುವುದು ಹೇಗೆ ?

-ಗೋವಿಂದರಾಜು, ಗುತ್ತಿಗೆದಾರ.

ಶಿರಾಗೇಟ್ ಬಳಿಯಿಂದ ಹಾಗೂ ಸುತ್ತಮುತ್ತಲಿನ ಜನರಿಗೆ ಅಂತರಸನಹಳ್ಳಿ ಮಾರುಕಟ್ಟೆ ಹತ್ತಿರವಾಗುವುದರಿಂದ ತರಕಾರಿ, ಹೂವು ಹಣ್ಣು ಕೊಂಡುಕೊಳ್ಳಲು ಇಲ್ಲಿಗೆ ಬರುತ್ತೇವೆ. ಇಲ್ಲಿ ವಾಹನ ನಿಲ್ಲಿಸಲು ಯಾವುದೇ ಸೌಲಭ್ಯ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಇಲ್ಲಿಗೆ ಬಂದರೆ ಬರೀ ಕೊಳೆತ ವಸ್ತುಗಳ ದುರ್ವಾಸನೆ ಬೀರುತ್ತದೆ. ಆದರೂ ಯಾವುದೇ ಗತಿ ಇಲ್ಲದೆ ಇಲ್ಲಿಗೆ ಬರಬೇಕು.

-ಲಕ್ಷ್ಮಮ್ಮ, ಗ್ರಾಹಕರು.

ಮಾರುಕಟ್ಟೆ ಸಂಬಂಧಿಸಿಂತೆ ಪೂರ್ಣ ಹಕ್ಕು ಜಿಲ್ಲಾಧಿಕಾರಿಗಳಿಗಿದೆ. ಅವರ ಆದೇಶಗಳಂತೆ ನಾವು ಕೆಲಸ ಮಾಡಬೇಕು. ಕಳೆದ ಒಂದು ವಾರದಿಂದ ಕಸವನ್ನು ತೆಗೆದಿರಲಿಲ್ಲ. ಕಂಟ್ರಾಕ್ಟರ್‍ರವರ ಮೇಲೆ ಕೆಲ ದೂರುಗಳು ಬಂದಿದ್ದವು. ಹಾಗಾಗಿ ಅವರಿಗೆ ಬಿಲ್ ನೀಡುವುದು ತಡಮಾಡಲಾಗಿತ್ತು. ಅದರಲ್ಲೂ ಮಾರುಕಟ್ಟೆಯಿಂದ ಬರುವ ಲಾಭ ಕಡಿಮೆ. ಆದರೆ ಅದಕ್ಕೆ ಆಗುವ ಖರ್ಚು ವೆಚ್ಚ ಅಧಿಕವಾಗಿವೆ. ಈ ಕಾರಣದಿಂದ ಬಿಲ್ ನೀಡುವುದು ತಡವಾಗಿತ್ತು. ಈಗ ಈ ಸಮಸ್ಯೆ ಪರಿಹಾರವಾಗಿದ್ದು, ಕಸವನ್ನು ಎತ್ತುತ್ತಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದು ಸೇರಿದಂತೆ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರ ಮಾಡುತ್ತೇವೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ.

-ಡಾ.ಕೆ.ಕೋಡಿಗೌಡ, ಜಂಟಿ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಸಮಿತಿ.

 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap