ಬೆಂಗಳೂರು
ಬಿಜೆಪಿ ನಾಯಕರ ರಾಜಕೀಯ ದ್ವೇಷದಿಂದಾಗಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಆ ಪಕ್ಷದ ಮುಖಂಡರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಮುಗಿಸಬೇಕೆಂಬ ದುರುದ್ದೇಶದಿಂದ ಈ ರೀತಿ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಆದರೆ, ವಿರೋಧ ಪಕ್ಷದ ನಾಯಕರನ್ನು ಮುಗಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಡಿಕೆಶಿ ಬಂಧನ ವಿರೋಧಿಸಿ ಇಂದಿಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಡಿಕೆಶಿ ಪರವಾಗಿ ನಿಲ್ಲಲಿದ್ದು, ಕಾನೂನಾತ್ಮಕವಾಗಿ ಹೋರಾಟ ಮುಂದುವರೆಸಲಿದೆ ಎಂದರು ರಾಜ್ಯಾದ್ಯಂತ ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು, ಶಿವಕುಮಾರ್ ಜಾರಿ ನಿರ್ದೇಶನಾಲಯದ ಸಮನ್ಸ್ ಉಲ್ಲಂಘನೆ ಮಾಡಿರಲಿಲ್ಲ ಹಾಗೂ ಅವರನ್ನು ಬಂಧಿಸುವ ಅಗತ್ಯವೂ ಇರಲಿಲ್ಲ. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಅವರ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದರು.
ಶಿವಕುಮಾರ್ ಬಂಧನಕ್ಕೂ ನಮಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರಿಗೆ ಗೊತ್ತಿಲ್ಲದೆ ಈ ಎಲ್ಲ ಬೆಳವಣಿಗೆಗಳು ನಡೆಯುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ ಹಾಗೂ ಶಿವಕುಮಾರ್ ಅವರ ಪ್ರಕರಣಗಳು ಬೇರೆ ಬೇರೆಯಾಗಿದ್ದರೂ ಅವರನ್ನು ಬಂಧಿಸಿರುವುದು ರಾಜಕೀಯ ಪ್ರೇರಿತ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ, `ವಿನಾಶಕಾಲೆ ವಿಪರೀತ ಬುದ್ಧಿ’ ಎಂದು ಹೇಳುತ್ತಾರೆ.
ನಾಲ್ಕು ದಿನ ಡಿಕೆಶಿ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಗಣೇಶ ಹಬ್ಬದ ದಿನ ಅವರ ತಂದೆಗೆ ಎಡೆ ಹಾಕಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕರು ಕುಗ್ಗಿಸಿದಷ್ಟೂ ನಾವು ಪುಟಿದೇಳುತ್ತೇವೆ ಎಂದು ತಮ್ಮದೆ ದಾಟಿಯಲ್ಲಿ ಟೀಕಿಸಿದರು. ಕಾರ್ಯಕರ್ತನ ಕೆನ್ನೆಗೆ ಬಾರಿಸಿದ ಸಿದ್ದು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬುವರ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ.
ಅಷ್ಟೊತ್ತಿಗಾಗಲೇ ಮೊಬೈಲ್ ದೂರವಾಣಿಯಲ್ಲಿ ಇತರರೊಂದಿಗೆ ಮಾತನಾಡುತ್ತಿದ್ದ ರವಿ, ಕರೆ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡುವಂತೆ ಸಿದ್ದರಾಮಯ್ಯ ಅವರಿಗೆ ಮೊಬೈಲ್ ನೀಡಲು ಮುಂದಾದಾಗ ಸಿಟ್ಟಿಗೆದ್ದ ಅವರು, ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ. ಈ ಘಟನೆಯ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








