ಶಿರಾ

ಶಿರಾ ನಗರದಲ್ಲಿ ಸೋಂಕು ಹರಡಲು ಕಾರಣನಾದ ಪಿ-5813 ಸೋಂಕಿತನ ವಿರುದ್ಧ ಶಿರಾ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಕೋವಿಡ್-19 ಸರ್ಕಾರಿ ಆದೇಶದಂತೆ ಶಿರಾ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದ್ದು, ನಗರವನ್ನು ರೋಗ ನಿರೋಧಕ ಸ್ಥಿತಿಯಲ್ಲಿಡಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿತ್ತು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ನಗರದ ನಾಯಕರ ಹಟ್ಟಿಯಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ಪಿ-5813 ವ್ಯಕ್ತಿಯು ಸೇವಾ ಸಿಂಧು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳದೆ, ಹೊರ ರಾಜ್ಯವಾದ ಆಂಧ್ರ್ರದ ಹಿಂದೂಪುರಕ್ಕೆ ಮೇ 30 ರಂದು ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಹೋಗಿದ್ದು, ಜೂನ್2 ರಂದು ಶಿರಾಕ್ಕೆ ವಾಪಸ್ ಬಂದಿರುತ್ತಾರೆ.
ಗಂಟಲು ನೋವು, ಜ್ವರದ ಹಿನ್ನೆಲೆಯಲ್ಲಿ ಶಿರಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿ ಆತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿತ್ತು. ಹೊರ ರಾಜ್ಯಕ್ಕೆ ಹೋಗಿ ಬಂದ ವಿಷಯವನ್ನು ಮರೆ ಮಾಚಿ, ಸಾರ್ವಜನಿಕರ ಆರೋಗ್ಯ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಹಿನ್ನೆಲೆಯಲ್ಲಿ ಶಿರಾ ನಗರ ಠಾಣಾ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಡಿವೈಎಸ್ಪಿ ಕುಮಾರಪ್ಪ ಅವರ ಮಾರ್ಗದರ್ಶನದಂತೆ ಪಿ-5813 ವ್ಯಕ್ತಿ ವಾಸವಿರುವ ಪಾರ್ಕ್ ಮೊಹಲ್ಲಾ, ಪಾತ್ರೆ ವ್ಯಾಪಾರ ಮಾಡುತ್ತಿದ್ದ ನಾಯಕರಹಟ್ಟಿ ಹಾಗೂ ಆತನ ಸಂಬಂಧಿಕರು ವಾಸವಿದ್ದ ಬೇಗಂ ಮೊಹಲ್ಲಾ (ಗೌಳಿಗರಹಟ್ಟಿ) ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿ ಪೊಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








