ತುಮಕೂರು
ಕುಡಿಯುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಲಭ್ಯವಿರುವ ಕೊಳವೆ ಬಾವಿಗಳನ್ನು ರೀ-ಬೋರ್ ಮಾಡಬೇಕೆಂದು ಹುಲಿಕುಂಟೆ ಹೋಬಳಿ ನೋಡಲ್ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ಜಿ.ಪಿ.ದೇವರಾಜ್ ಸಲಹೆ ನೀಡಿದರು.
ಶಿರಾ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಜರುಗಿದ ಬರ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹುಲಿಕುಂಟೆ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು.
ಹಂದಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿ ಅರಿಯಜ್ಜಿಹಳ್ಳಿ ಹಾಗೂ ದೊಡ್ಡ ಬಾಣಗೆರೆ ಗ್ರಾಮಪಂಚಾಯತಿ ವ್ಯಾಪ್ತಿ ಚಿಕ್ಕಬಾಣಗೆರೆ ಗ್ರಾಮಕ್ಕೆ ತಾವು ಇಂದು ಬೆಳಿಗ್ಗೆ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇನೆ ಎಂದರಲ್ಲದೆ, ನೀರಿನ ತೊಂದರೆ ಇರುವ ಗ್ರಾಮಗಳಿಗೆ ತಾತ್ಕಾಲಿಕವಾಗಿ ಖಾಸಗಿ ಬೋರ್ವೆಲ್ ಮೂಲಕ ಕರಾರು ಒಪ್ಪಂದದ ಮೇರೆಗೆ ನೀರು ಸರಬರಾಜು ಮಾಡಬೇಕು.
ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಿರಾ ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಇಂಜಿನಿಯರ್ ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
ಹಂದಿಕುಂಟೆ ಗ್ರಾಮಪಂಚಾಯತಿ ವ್ಯಾಪ್ತಿ ಅರಿಯಜ್ಜಿಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಾವಿರ ಅಡಿ ಆಳದ ಕೊಳವೆ ಬಾವಿ ಕೊರೆಯಲಾಗಿದ್ದು, ಅಲ್ಪ ಪ್ರಮಾಣದಲ್ಲಿ ನೀರು ಸಿಕ್ಕಿರುವುದರಿಂದ ನೀರಿಗೆ ಸಮಸ್ಯೆ ಬಾರದಂತೆ ಮತ್ತೊಂದು 750 ಅಡಿ ಆಳದ ಕೊಳವೆ ಬಾವಿಯನ್ನು ರೀ-ಬೋರ್ ಮಾಡಲು ಸಲಹೆ ನೀಡಿದರು. ಸಭೆಯಲ್ಲಿ ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.