ದಾವಣಗೆರೆ:
ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸಿ, ಪಕ್ಷದ ಸೋಲಿಗೆ ಆತ್ಮ ಅವಲೋಕನ ಮಾಡಿಕೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದ್ದಾರೆ.
2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಿರುವ ಡಿ.ಬಸವರಾಜ್, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಹಜ. ದೇಶದ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾಗಾಂಧಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಂತಹ ರಾಷ್ಟ್ರನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ.
ಪುನ: ಗೆದಿದ್ದಾರೆ. ಆದರೆ ಇಂದು ಮುಕ್ತಾಯಗೊಂಡ 17ನೇ ಲೋಕಸಭಾ ಚುನಾವಣೆ ಯಲ್ಲಿ ಓಟಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರನ್ನು ಅಮಾನುಷವಾಗಿ ಕೊಲೆ ಮಾಡಿದ ಹಂತಕ ನಾಥೂರಾಂ ಗೋಡ್ಸೆ ಒಬ್ಬ ದೇಶಪ್ರೇಮಿ ಎಂದು ಹೇಳಿಕೆ ನೀಡಿದ ಸಾಧ್ವಿ ಪ್ರಜ್ಞಾನಸಿಂಗ್, ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಪುಡಿ ಪುಡಿ ಮಾಡಿ ಎಂದು ಕರೆ ನೀಡಿದ ತೇಜಸ್ವಿ ಸೂರ್ಯ ಇಂತವರು ಲೋಕಸಭೆಗೆ ಆಯ್ಕೆ ಆಗುತ್ತಾರೆಂದರೆ ದೇಶ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಕೇಂದ್ರದ ಗುಪ್ತಚರ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ಪುಲ್ವಾಮದಲ್ಲಿ 44 ಭಾರತೀಯ ಸೈನಿಕರಿಗೆ ಸಮಾಧಿಕಟ್ಟಿ, ಭಾರತೀಯ ವಾಯುಸೇನೆಯ ಬಾಲಕೋಟ್ ಏರ್‍ಸ್ಟ್ರೈಕ್‍ನ್ನು ಉತ್ತಮವಾಗಿ ಮಾರ್ಕೆಟಿಂಗ್ ಮಾಡಿ ದೇಶದ ಅಧಿಕಾರವನ್ನು ಹಿಡಿಯುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಏನೇ ಇರಲಿ ಕಳೆದ 5 ವರ್ಷಗಳಲ್ಲಿ ಏನೊಂದು ಅಭಿವೃದ್ಧಿ ಮಾಡದ ಮೋದಿಯವರು ತಮ್ಮ ಘೋಷಣೆಯಾದ ಸಬ್‍ಕಸಾತ್ ಸಬ್‍ಕ ವಿಕಾಸ್ ಘೋಷ ವಾಕ್ಯದಂತೆ ಮುಂದಿನ ದಿನಗಳಲ್ಲಾದರೂ ಈ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಸೇರಿಸಿ ಆಡಳಿತ ನಡಿಸಲಿ ಎಂದು ಅವರು ಪ್ರಕಟಣೆಯಲ್ಲಿ ಆಶಿಸಿದ್ದಾರೆ.