ಚಿಕ್ಕನಾಯಕನಹಳ್ಳಿ : ವಿವಿಧ ಯೋಜನೆಗಳಿಂದ ತಾಲ್ಲೂಕಿಗೆ 4 ಟಿಎಂಸಿ ನೀರು

 ಚಿಕ್ಕನಾಯಕನಹಳ್ಳಿ : 

      ಭದ್ರಾಮೇಲ್ದಂಡೆ, ಎತ್ತಿನಹೊಳೆ ಯೋಜನೆ, ಹೇಮಾವತಿ ಯೋಜನೆ ಸೇರಿದಂತೆ ಎಲ್ಲಾ ಮೂಲಗಳಿಂದ ತಾಲ್ಲೂಕಿನ ಕೆರೆಗಳಿಗೆ 4 ಟಿ.ಎಂ.ಸಿಯಷ್ಟು ನೀರನ್ನು ಹರಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ತಾಲ್ಲೂಕಿನ ಶೆಟ್ಟಿಕೆರೆ ಪ್ರಾಥಮಿಕ ಶಾಲಾ ಆವರಣದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಸಾಸಲು ಕೆರೆಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

      ಕೇಂದ್ರ ಸರ್ಕಾರ ಜಾರಿ ಮಾಡಿರುವ ಅಟಲ್ ಭೂ ಜಲ್ ಯೋಜನೆಯಲ್ಲಿ ರಾಜ್ಯಕ್ಕೆ 1208 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ, ಈ ಯೋಜನೆಯಲ್ಲಿ ಕೆಲವು ತಾಲ್ಲೂಕುಗಳನ್ನು ಆಯ್ಕೆ ಮಾಡಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಸೇರ್ಪಡಿಸಲಾಗುವುದು ಎಂದರಲ್ಲದೆ, ತಾಲ್ಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯತ್ ನ್ನು ಪೈಲೆಟ್ ಯೋಜನೆಯಲ್ಲಿ ಆಯ್ಕೆ ಮಾಡಿದ್ದು ಈ ಯೋಜನೆ ಮೂಲಕ ಬೋರ್ ವೆಲ್ ಕೊರೆಸುವುದು, ನಿಂತಿರುವ ನೀರು ಪುನಃ ಕ್ರೂಡೀಕರಣಗೊಂಡು ಬಳಕೆಯಾಗುವಂತೆ ಮಾಡುವುದರ ಮೂಲಕ ಮಾದರಿ ಗ್ರಾಮವನ್ನಾಗಿ ರಾಜ್ಯಕ್ಕೆ ಸಹಕಾರವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

      ಸಣ್ಣ ನೀರಾವರಿ ಇಲಾಖೆಯ ಖಾತೆ ನನ್ನ ಕೈಯಲ್ಲಿದೆ, ಇಡೀ ತಾಲ್ಲೂಕಿನ ಕೆರೆಗಳ ಸಮಗ್ರ ಚಿತ್ರಣವೂ ನನ್ನ ಬಳಿ ಇದೆ ಹಾಗಾಗಿ ಇನ್ನು 2 ವರ್ಷಗಳಲ್ಲಿ ತಾಲ್ಲೂಕಿನ ಪ್ರತಿ ಕೆರೆಗಳೂ ತುಂಬುವುದು, ಹಳ್ಳಕೊಳ್ಳಗಳಲ್ಲಿ ನೀರು ನಿಲ್ಲುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದರಲ್ಲದೆ, 250 ಕೋಟಿಯ ಟೆಂಡರ್ ಕರೆದು ಇನ್ನು ಹೆಚ್ಚಿನ ನೀರಾವರಿ ಯೋಜನೆಗೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

      ತಾಲ್ಲೂಕಿನ ಎರಡು ದಶಕಗಳ ಕನಸಾಗಿದ್ದ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸಲು ಪ್ರತಿಯೊಬ್ಬರ ಹೋರಾಟವೂ ಇದೆ, ಅವರಿಗೆಲ್ಲಾ ನಾನು ಆಭಾರಿ, ಈ ಮೊದಲು ಹೇಮಾವತಿ ನೀರು ಹರಿಯಲು ಸರ್ವೆ ಮಾಡಲು ಮುಂದಾದಾಗ ಈಶ್ವರಪ್ಪನವರು 3 ಲಕ್ಷ ಹಣ ಬಿಡುಗಡೆ ಮಾಡಿ ಸಹಕರಿಸಿದ್ದರು, ಮುಖ್ಯಮಂತ್ರಿ ಯಡಿಯೂರಪ್ಪನವರು 102 ಕೋಟಿ ಹಣ ಬಿಡುಗಡೆ ಮಾಡಿದ್ದರು ಅವರ ಸಹಕಾರ ಇಂದು ಕೆರೆಗೆ ನೀರು ಹರಿದಿರುವುದಕ್ಕೆ ಸಾಕ್ಷಿ ಎಂದರು.

      ಹೇಮಾವತಿ ಯೋಜನೆಗೆ ನೀರು ಹರಿಯಲು ಜಮೀನು ಬಿಟ್ಟು ಕೊಟ್ಟ ಪ್ರತಿ ರೈತರಿಗೆ ಪರಿಹಾರ ದೊರಕಲು ಸರ್ಕಾರದಿಂದ ಇತ್ತೀಚೆಗೆ 11 ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ, ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳದಿದ್ದರೆ ಈ ಯೋಜನೆ ಇನ್ನೂ 10ವರ್ಷವಾದರೂ ನೆರವೇರುತ್ತಿರಲಿಲ್ಲ, ಸರ್ಕಾರದ ಮಟ್ಟದಲ್ಲಿ ಯೋಜನೆ ಪೂರ್ಣಗೊಳಿಸಲು ನನ್ನನ್ನು ವಿಧಾನಸಭೆಗೆ ಆಯ್ಕೆ ಮಾಡಲು ಸಹಕರಿಸಿದ ತಾಲ್ಲೂಕಿನ ಜನತೆಗೂ ನನ್ನ ಅಭಿನಂದನೆಗಳು ಎಂದರು.

      ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಂಬಂಧ ಪಟ್ಟಂತೆ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನವಾಗಲು ರೈತರು ಸಹಕರಿಸಿದ್ದಾರೆ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ರೈತರಿಗೆ ಪರಿಹಾರ ದೊರೆಯದಿದ್ದರೂ ಕ್ಷೇತ್ರದ ರೈತರು ಮೊದಲು ನೀರು ಬರಲಿ ಎಂದು ಜಮೀನು ಬಿಟ್ಟುಕೊಟ್ಟು ಸಹಕರಿಸಿದ್ದಾರೆ ಎಂದರಲ್ಲದೆ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸಿಗೇಬಾಗಿ, ಭಟ್ಟರಹಳ್ಳಿ ಹಾಗೂ ತಿಮ್ಮನಹಳ್ಳಿ ಭಾಗಗಳಿಗೂ ನೀರು ಹರಿಯಲಿದೆ, ಹೊನ್ನೆಬಾಗಿ ಹಳ್ಳ, ಕಂದಿಕೆರೆ ನಾಗತಿಹಳ್ಳಿ ಕೆರೆ ಗಳಿಗೆ ನೀರು ಹರಿಯಲು 250 ಕೋಟಿ ಯೋಜನೆಯ ಹಣ ಮಂಜೂರಾಗಲಿದೆ, ಒಟ್ಟಿನಲ್ಲಿ ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಯೋಜನೆಗಳ ಮೂಲಕ ತಾಲ್ಲೂಕಿನ 122 ಕೆರೆಗಳು ತುಂಬಲಿವೆ ಎಂದರು.

      ಎಪಿಎಂಸಿ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, ಈ ಮೊದಲು ಜಮೀನು ಬಿಟ್ಟುಕೊಡದ ಸಮಯದಲ್ಲಿ ಮಾಧುಸ್ವಾಮಿಯವರ ಬಗ್ಗೆ ವಿರೋಧ ಪಕ್ಷದವರು ಹಲವು ರೀತಿ ಮಾತನಾಡುತ್ತಿದ್ದರು ಆದರೆ ಸಚಿವರು ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರದ ಕೊಡಿಸಿದ್ದರಿಂದ ಸಾಕಷ್ಟು ರೈತರಿಗೆ ಅನುಕೂಲವಾಯಿತು ಇದರಿಂದ ಬಿಳಿಗೆರೆಯಿಂದ ಸಾಸಲು ಕೆರೆ ನಂತರ ಹಳ್ಳಿ ಭಾಗಗಳಿಗೂ ನೀರು ಹರಿಯಿತು ಎಂದರು.
ಜಿ.ಪಂ.ಸದಸ್ಯೆ ಮಂಜುಳ ಮಾತನಾಡಿ, ಹಳ್ಳಿಯಲ್ಲಿ ಜೀವನ ನಡೆಸಿ ರೈತರ ಕಷ್ಠಸುಖಗಳನ್ನು ತಿಳಿದುಕೊಂಡು ಅವರ ಪರವಾಗಿರುವ ಜೆ.ಸಿ.ಮಾಧುಸ್ವಾಮಿಯವರು ಮುಂದಿನ ಬಾರಿಗೂ ಆಯ್ಕೆಯಾಗಬೇಕು ಅವರ ಆಯ್ಕೆಯಿಂದ ಇನ್ನೂ ಹೆಚ್ಚಿನ ನೀರು ತಾಲ್ಲೂಕಿನಾದ್ಯಂತ ಹರಿಯಲಿದೆ ಎಂದರು.

      ತಾ.ಪಂ.ಸದಸ್ಯೆ ಶೈಲಾ ಶಶಿಧರ್ ಮಾತನಾಡಿ, ಹೇಮಾವತಿ ನೀರು ತಾಲ್ಲೂಕಿಗೆ ಹರಿದಿದ್ದರಿಂದ ಶೆಟ್ಟಿಕೆರೆ ಭಾಗದ ಹಲವರು ಸ್ವಯಂ ಕೆಲಸ ಮಾಡುತ್ತಿದ್ದಾರೆ, ಬೆಂಗಳೂರಿನಂತಹ ಕಾರ್ಖಾನೆಗಳನ್ನು ತೊರೆದು ಕೃಷಿಕರಾಗಿರುವುದು ಸಂತಸ ತಂದಿದೆ ಎಂದರು.
ತಾ.ಪಂ.ಸದಸ್ಯ ಕೇಶವಮೂರ್ತಿ ಮಾತನಾಡಿ, ಹೇಮಾವತಿ ನೀರು ಮುಂದಿನ 10 ವರ್ಷಗಳ ಕಾಲ ನಿರಂತರವಾಗಿ ಹರಿಯಬೇಕು ಎಂದರೆ ಜೆ.ಸಿ.ಮಾಧುಸ್ವಾಮಿಯವರ ಪರವಾಗಿ ನಾವೆಲ್ಲರೂ ಇರಬೇಕು ಎಂದರು.

      ಮಾಜಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಮಾತನಾಡಿ, 10 ವರ್ಷಗಳಿಂದ ತಾಲ್ಲೂಕಿನ ಜನರೆಲ್ಲೆರೂ ಹೇಮಾವತಿ ನೀರಿಗಾಗಿ ಕಾಯುತ್ತಿದ್ದರು, ಈಗ ನೀರು ಹರಿಯುತ್ತಿದೆ, ಶೆಟ್ಟಿಕೆರೆ, ಭಾಗದ ಜನರೆಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಎಲ್ಲಾ ಹೋಬಳಿಗಳಿಗೂ ನೀರು ಹರಿಯಲಿದೆ ಎಂದರು.

      ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯೆ ಲೋಹಿತಬಾಯಿ, ವಕೀಲ ಎನ್.ಎನ್.ಶ್ರೀಧರ್, ತುಮಕೂರು ಹಾಲು ಉತ್ಪಾದಕ ಮಂಡಲದ ಸದಸ್ಯ ಹಳೆಮನೆ ಶಿವನಂಜಪ್ಪ, ತಾ.ಪಂ.ಸದಸ್ಯೆ ಇಂದಿರಮ್ಮ , ರಾಜಶೇಖರ್ ಸೇರಿದಂತೆ ಹಲವರಿದ್ದರು.
 
      ನಾನು 3-6 ತಿಂಗಳಿಗೊಮ್ಮೆ ವಿವಾದಕ್ಕೆ ಬರುತ್ತೇನೆ, ಕಾರಣ ಅಭಿವೃದ್ದಿ ಕೆಲಸಗಳಾಗಲಿ ಎಂದು, ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗೆ ಹಲವು ಬಾರಿ ಕೆಲಸ ಪೂರ್ಣಗೊಂಡಿರದ ಬಗ್ಗೆ ತಿಳಿಸಿದ್ದೆ ಆದರೂ ಕ್ರಮ ಕೈಗೊಂಡಿರಲಿಲ್ಲ, ಇದರಿಂದ ಇಲಾಖೆಗೆ ಬಂದ ಅನುದಾನದ ಹಣ ವಾಪಾಸ್ ಹಿಂತಿರುಗುತ್ತದೆ, ಜನರಿಗೆ ಸಹಾಯವಾಗುವುದಿಲ್ಲ ಎಂಬ ಬೇಸರದಿಂದ ಆ ಪದ ಬಳಕೆಯಾಯಿತು.

ಜೆ.ಸಿ.ಮಾಧುಸ್ವಾಮಿ, ಸಚಿವ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ