ಮೊದಲಿಗಿಂತಲೂ ತೀವ್ರವಾಗುತ್ತಿದೆ ಕೊರೊನಾ ಎರಡನೇ ಅಲೆ ಅಬ್ಬರ

 ತುಮಕೂರು:

     ಆಸ್ಪತ್ರೆಗಳಿಗೆ ಎಡತಾಕಿ ಚಿಕಿತ್ಸೆ ಸಿಗದೆ ಸಾವು-ನೋವು ಸಂಭವಿಸಿರುವ ಉದಾಹರಣೆಗಳು ರಾಜ್ಯದ ಅಲ್ಲಲ್ಲಿ ವರದಿಯಾಗಿದ್ದು, ತುಮಕೂರಿನಲ್ಲಿಯೂ ಇದೇ ಪರಿಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.   

      ಕಳೆದ ಒಂದು ವಾರದಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುಮುಖವಾಗಿಯೇ ಇದ್ದು, ಪ್ರತಿದಿನವೂ ವರದಿಯಾಗುತ್ತಿರುವ ಈ ಸಂಖ್ಯೆಗಳನ್ನು ಗಮನಿಸಿದರೆ ಎರಡನೇ ಅಲೆಯ ತೀವ್ರತೆ ಎಷ್ಟೆಂಬುದರ ಅರಿವಾಗುತ್ತದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಂದಿಳಿದಿದ್ದ ಪ್ರಕರಣಗಳು ಒಂದು ತಿಂಗಳ ಅವಧಿಯಲ್ಲಿ ದಿಢೀರ್ ಏರಿಕೆಯಾಗಿರುವುದು ಆತಂಕಕ್ಕೂ ಕಾರಣವಾಗಿದೆ.

      ಯುಗಾದಿ ಹಬ್ಬದ ದಿನ ಹಾಗೂ ಅದರ ಮಾರನೆಯ ದಿನ ಎರಡೇ ದಿನಕ್ಕೆ 545 ಮಂದಿಗೆ ಸೋಂಕು ತಗುಲಿತು. ಏಪ್ರಿಲ್ 16 ರಂದು ಒಂದೇ ದಿನ ಜಿಲ್ಲೆಯಲ್ಲಿ 340 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಸಾವಿನ ಸಂಖ್ಯೆಗಳು ವರದಿಯಾಗುತ್ತಿವೆ. ಹೀಗೆ ದ್ವಿಶತಕ, ತ್ರಿಶತಕ ದಾಟಿ ಕೊರೊನಾ ಮುನ್ನುಗ್ಗುತ್ತಿದ್ದು, ಇಳಿಕೆ ಕಾಣುವ ಲಕ್ಷಣಗಳೇ ನಮ್ಮ ಮುಂದಿಲ್ಲ. ಮುಂದಿನ ದಿನಗಳ ಭೀಕರತೆಯೂ ಈಗ ಎದುರಾಗತೊಡಗಿದೆ. ಅದರಲ್ಲಿ ಮುಖ್ಯವಾಗಿರುವುದು ಆರೋಗ್ಯದ ಸಮಸ್ಯೆ.

      ಕೊರೊನಾ ಹೆಚ್ಚಳದ ಹಿಂದೆಯೇ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್‍ಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಪ್ರಕರಣಗಳು ಹೆಚ್ಚಿದಂತೆಲ್ಲಾ ಖಾಸಗಿ ಆಮ್ಲಜನಕ ಬ್ಯಾಂಕ್ ಮತ್ತು ಆಸ್ಪತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಸತ್ಯ. ಆಮ್ಲಜನಕದ ಶುದ್ಧತ್ವ ಮಟ್ಟವು ಶೇ.92ಕ್ಕಿಂತ ಕಡಿಮೆಯಾದರೆ ಆಗ ಆಕ್ಸಿಜನ್ ಬೆಂಬಲ ಅಗತ್ಯವಾಗಿರುತ್ತದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಿಲೆಂಡರ್‍ಗಳ ಬೆಲೆ 5000 ರೂ.ಗಳಿಂದ 6000 ರೂ.ಗಳವರೆಗೂ ಇರುತ್ತದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ ಆಕ್ಸಿಜನ್ ಕೊರತೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.

     ತುಮಕೂರು ಜಿಲ್ಲೆಯ ಪರಿಸ್ಥಿತಿಯೂ ಬಿಗಡಾಯಿಸುತ್ತಿದೆ. ಈ ಬಾರಿ ಮತ್ತೆ ತುಮಕೂರು ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ತುಮಕೂರು ನಗರ ಮತ್ತು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನಕ್ಕೆ ದಾಪುಗಾಲು ಹಾಕಿದ್ದು ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಭೀತಿ ಇದೆ. ಇದು ಒಟ್ಟಾರೆ ಆರೋಗ್ಯ ಮತ್ತು ಜನಜೀವನದ ಮೇಲೆ ಪರಿಣಾಮವನ್ನಂತೂ ಬೀರದೆ ಇರದು.

      ತುಮಕೂರು ಜಿಲ್ಲಾಸ್ಪತ್ರೆಯನ್ನು ಈ ಹಿಂದೆ ಕೋವಿಡ್ ಮತ್ತು ನಾನ್ ಕೋವಿಡ್ ಎಂದು ಪ್ರತ್ಯೇಕಿಸಲಾಗಿತ್ತು. ಕೋವಿಡ್ ರೋಗಿಗಳಿಗಾಗಿಯೇ 200 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಏಪ್ರಿಲ್ 16ರ ಬೆಳಗಿನ ವೇಳೆಗೆ ಇಡೀ ಹಾಸಿಗೆಗಳು ಭರ್ತಿಯಾಗಿದ್ದು, ಒಟ್ಟು 216 ಕೊರೊನಾ ಪಾಸಿಟಿವ್ ರೋಗಿಗಳ ಪೈಕಿ 13 ಮಂದಿಯನ್ನು ನಗರದ ಇತರೆ ಕೋವಿಡ್ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆಯ 200 ಬೆಡ್‍ಗಳು ಸಾಕಾಗದೆ ಹೋಗಿದ್ದು, ಹೆಚ್ಚುವರಿಯಾಗಿ ಮತ್ತಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳಿಗಾಗಿ ಬಳಸಿಕೊಳ್ಳುವ ಪ್ರಯತ್ನಗಳು ಸಾಗಿವೆ. ಇದರ ಜೊತೆಗೆ ಈಗಾಗಲೇ ಗುರುತಿಸಿರುವ ಕೋವಿಡ್ ಆಸ್ಪತ್ರೆಗಳಾದ ಶ್ರೀದೇವಿ, ಸಿದ್ಧಗಂಗಾ ಮತ್ತು ಸಿದ್ಧಾರ್ಥ ಆಸ್ಪತ್ರೆಗಳಿಗೂ ಕೊರೊನಾ ರೋಗಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಪ್ರತಿದಿನ ನೂರಾರು ರೋಗಿಗಳು ಹೆಚ್ಚುತ್ತಲೇ ಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.

      ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ವ್ಯವಸ್ಥೆಯ ಮೇಲೆ ಇಡೀ ಆಡಳಿತ ನಿಗಾವಹಿಸಬೇಕಾಗಿದೆ. ಕಳೆದ ಬಾರಿ ಸಾಕಷ್ಟು ರೋಗಿಗಳಿಗೆ ಹಾಸಿಗೆಗಳ ವ್ಯವಸ್ಥೆಯಾಗದೆ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಸಿಗದೆ ಪರದಾಡಿದ ಸಂದರ್ಭಗಳು ಉಂಟು. ಕೋವಿಡ್ ಜೊತೆಗೆ ಇತರೆ ರೋಗಗಳಿಂದ ನರಳುವವರಿಗೆ ಸೂಕ್ತ ಮತ್ತು ತುರ್ತು ಚಿಕಿತ್ಸೆಯ ಅಗತ್ಯ ಇರುತ್ತದೆ. ಇಂತಹವರಿಗೆ ಸಂದರ್ಭಾನುಸಾರ ಔಷಧೋಪಚಾರದ ವ್ಯವಸ್ಥೆಯಾಗದೆ ಹೋದರೆ ಸಾವಿನಲ್ಲಿ ಬದುಕು ಅಂತ್ಯವಾಗುವ ದುರಂತ ಸನ್ನಿವೇಶ ಎದುರಾಗಲಿದೆ. ಇಂತಹ ಸನ್ನಿವೇಶಗಳನ್ನು ಕಳೆದ ಬಾರಿ ನೋಡಿಯಾಗಿದೆ. ಇದು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಅಗತ್ಯತೆ ಜಿಲ್ಲಾಡಳಿತದ ಮೇಲಿದೆ.

      ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸುವ, ಹೆಚ್ಚಿನ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವುದು ಒಳಿತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒಂದೆರಡು ಸಭೆಗಳನ್ನು ನಡೆಸಿರುವುದು ಶ್ಲಾಘನೀಯ.
ಕೊರೊನಾ ಪಾಸಿಟಿವ್ ಲಕ್ಷಣಗಳನ್ನು ಹೊಂದಿದ ರೋಗಿಗಳನ್ನು ಪ್ರತ್ಯೇಕಿಸಿದಾಗ ಅಂತಹ ವ್ಯಕ್ತಿಗಳಿಗೆ ಏನೆಲ್ಲಾ ಔಷಧೋಪಚಾರ ಬೇಕೋ ಅದೆಲ್ಲವು ಸೂಕ್ತ ಸಮಯಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಭಯದಿಂದ, ಇತರೆ ರೋಗಗಳಿಂದ ನರಳಿ ಸಾಯುವವರ ಸಂಖ್ಯೆ ಅಧಿಕವಾಗಿದ್ದು, ಇದನ್ನು ನಿಭಾಯಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ. ಇದು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಒಂದು ಸವಾಲೇ ಸರಿ.

ಖಾಸಗಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತುಂಬಾ ಆಕ್ರೋಶವಿದೆ. 2020ರ ಅವಧಿಯಲ್ಲಿ ಓಪಿಡಿ ವ್ಯವಸ್ಥೆಯನ್ನು ಬಂದ್ ಮಾಡಿ ಚಿಕಿತ್ಸೆ ಸಿಗದೆ ಹೋದ ಸಂದರ್ಭ, ಸರ್ಕಾರಿ ವ್ಯವಸ್ಥೆಯಷ್ಟೇ ಚುರುಕಾದ ದಿನಗಳನ್ನು ಸಾರ್ವಜನಿಕರು ಮರೆತಿಲ್ಲ. ಸಾರ್ವಜನಿಕರಲ್ಲಿರುವ ಈ ಧೋರಣೆ ಹೋಗಬೇಕೆಂದರೆ ಖಾಸಗಿ ಆಸ್ಪತ್ರೆಗಳು ಇಂತಹ ಗಂಭೀರ ಸಂದರ್ಭದಲ್ಲಿ ಒಂದಷ್ಟು ಕಾಳಜಿ ತೋರುವಂತಾಗಬೇಕು. ಸರ್ಕಾರಗಳು ಸಹ ಇವರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು. ಕಳೆದ ವರ್ಷ ಕೋವಿಡ್ ಸೋಂಕಿತರಿಗೆ ಆಯುಷ್‍ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೀಡಿದ್ದ ಚಿಕಿತ್ಸೆಯು ಇನ್ನೂ ಬಂದಿಲ್ಲ ಎಂಬ ಆರೋಪಗಳಿವೆ. ಇಂತಹ ಅಸಮಾಧಾನಗಳನ್ನು ಸರ್ಕಾರ ಗಮನಿಸಬೇಕು.

      ಖಾಸಗಿ ಆಸ್ಪತ್ರೆಗಳು ಸರ್ಕಾರದತ್ತಲೇ ಬೊಟ್ಟು ಮಾಡಬಾರದು. ಪರಿಸ್ಥಿತಿ ಕೈಮೀರುವ ಮತ್ತು ಸಾಮಾಜಿಕ ಜ್ವಲಂತ ಸನ್ನಿವೇಶದ ಸಂದರ್ಭದಲ್ಲಿ ಸರ್ಕಾರದೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಅಗತ್ಯವಿದೆ. ಕೊರೊನಾ ಎರಡನೇ ಅಲೆ ಭೀಕರತೆ ಅರಿತು ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಸಂದರ್ಭಗಳಿಂದ ದೂರವಿರುವಂತಹ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದೇ ಈ ಕ್ಷಣದ ತುರ್ತು. ಕಾಯಿಲೆಗಳು ಬಾರದಂತೆ ಎಷ್ಟು ಸಾಧ್ಯವೋ ಅಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಚಿಂತಿಸಬೇಕು.
 
ಜಿಲ್ಲಾ ಆಸ್ಪತ್ರೆಯ ಬೆಡ್‍ಗಳು ಭರ್ತಿ

      ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗಾಗಿಯೇ ಮೀಸಲಿಡಲಾಗಿತ್ತು. ಶುಕ್ರವಾರದ ವೇಳೆಗೆ 216 ಮಂದಿ ಕೊರೊನಾ ಪಾಸಿಟಿವ್ ಪ್ರಕರಣಗಳ ವ್ಯಕ್ತಿಗಳನ್ನು ಇಲ್ಲಿ ದಾಖಲು ಮಾಡಿಕೊಳ್ಳಲಾಗಿದ್ದು, ಕೆಲವರನ್ನು ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಹಾಸಿಗೆಗಳನ್ನು, ಕೆಲವು ವಾರ್ಡ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೂ 13 ಮಂದಿಯನ್ನು ಕಳುಹಿಸಿಕೊಡಲಾಗಿದೆ. ಕೊರೊನಾ ಎರಡನೇ ಅಲೆಗೆ ಭಯ ಪಡುವುದಕ್ಕಿಂತ ಜನತೆ ಜಾಗ್ರತೆ ವಹಿಸುವುದು ಅತ್ಯವಶ್ಯಕ. ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದಿಕ್, ಡೆಂಟಲ್ ಮೊದಲಾದ ವಿಭಾಗಗಳೂ ಸೇರಿ 38 ಮಂದಿ ವೈದ್ಯರಿದ್ದೇವೆ. ಪ್ರತಿದಿನ ಇಲ್ಲಿ ಕೆಲಸ ಮಾಡುತ್ತೇವೆ. ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ಯಾನಿಟೈಸ್ ಹೀಗೆ ಮಾಡುತ್ತಿರುವುದರಿಂದ ನಾವು ನಿತ್ಯ ಕಾರ್ಯನಿರ್ವಹಿಸುವುದು ಸಾಧ್ಯವಾಗಿದೆ. ಇದೇ ರೀತಿ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಮಾರ್ಗಸೂಚಿಯನ್ನು ಪಾಲಿಸಬೇಕು. ಆಸ್ಪತ್ರೆಗೆ ಬಂದರೆ ಕೊರೊನಾ ಬರುತ್ತದೆ ಎಂದು ಹಬ್ಬಿಸುವ ಬದಲಿಗೆ ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಕೊರೊನಾ ಬರಲು ಸಾಧ್ಯವೇ ಇಲ್ಲ. ಮುಖ್ಯವಾಗಿ ವಿವಾಹ ಮತ್ತಿತರ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು.

-ಡಾ.ಸುರೇಶ್‍ಬಾಬು, ಜಿಲ್ಲಾ ಸರ್ಜನ್.

 
ಫಲಿತಾಂಶ ಬೇಗ ಬರಲಿ :

      ಕೋವಿಡ್ ಟೆಸ್ಟ್ ಫಲಿತಾಂಶ ವರದಿ ನಿಧಾನಗತಿಯಲ್ಲಿ ಸಾಗಿದೆ. ಎಷ್ಟೋ ಮಂದಿಯ ಕೋವಿಡ್ ಫಲಿತಾಂಶ ನಾಲ್ಕೈದು ದಿನಗಳಾದರೂ ಲಭ್ಯವಾಗುವುದಿಲ್ಲ. ಹೀಗಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಒಮ್ಮೆ ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿ ತಪಾಸಣೆಗೊಳಪಟ್ಟರೆ, ವರದಿ ಬರುವುದು ವಿಳಂಬವಾದರೆ ಆತ ಈ ನಾಲ್ಕೈದು ದಿನಗಳ ಅವಧಿಯಲ್ಲಿ ಎಲ್ಲೆಲ್ಲಿ ಹೋಗಿಬರುತ್ತಾರೋ, ಯಾರನ್ನು ಸಂಪರ್ಕಿಸಿರುತ್ತಾರೋ ಅವರೆಲ್ಲಾ ಆತಂಕಕ್ಕೆ ಒಳಗಾಗುವುದಲ್ಲದೆ, ಸಾಕಷ್ಟು ಜನರಿಗೆ ರೋಗ ಹರಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಫಲಿತಾಂಶವು ಸರ್ಕಾರವೇ ಹೇಳಿರುವಂತೆ 24 ಗಂಟೆಯ ಒಳಗಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಬೇಕು.

  -ಸಾ.ಚಿ.ರಾಜಕುಮಾರ

Recent Articles

spot_img

Related Stories

Share via
Copy link
Powered by Social Snap