ಹುಳಿಯಾರು :
ಸಾರ್ವಜನಿಕ ರಸ್ತೆಗೆ ಕಲ್ಲು, ಮುಳ್ಳು ಹಾಕಿ ಓಡಾಟಕ್ಕೆ ತೊಂದರೆ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ ಕೈ ಗೊಳ್ಳಬೇಕಾಗುತ್ತದೆ ಎಂದು ಹುಳಿಯಾರು ಹೋಬಳಿಯ ಕಂಪನಹಳ್ಳಿಯ ಕೆಲ ನಿವಾಸಿಗಳಿಗೆ ಗಾಣಧಾಳು ಗ್ರಾಪಂ ಪಿಡಿಓ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 150 ಎ ಯಿಂದ ಕುರಿಹಟ್ಟಿ, ತೋಟದಮನೆಗಳಿಗೆ ಓಡಾಡಲು ಕಂಪನಹಳ್ಳಿ ಗ್ರಾಮದೊಳಗಿನಿಂದ ಸಾರ್ವಜನಿಕ ರಸ್ತೆಯಿದ್ದು, ಅನೇಕ ದಶಕಗಳಿಂದ ಸಾರ್ವಜನಿಕ ಬಳಕೆಗಿದ್ದ ಈ ರಸ್ತೆಗೆ ಕೆಲವರು ಕಲ್ಲು, ಮುಳ್ಳು ಹಾಕಿ ಬಂದ್ ಮಾಡಿದ್ದರು. ಇದರಿಂದ ತೊಂದರೆಗೊಳಗಾದ ಹೈನುಗಾರರು, ಶಾಲಾ ವಿದ್ಯಾರ್ಥಿಗಳು, ತೋಟದಮನೆ ನಿವಾಸಿಗಳು ಗಾಣಧಾಳು ಪಂಚಾಯ್ತಿಗೆ ರಸ್ತೆಗೆ ಹಾಕಿದ್ದ ಕಲ್ಲು, ಮುಳ್ಳು ತೆರವು ಮಾಡುವಂತೆ ಮನವಿ ಸಲ್ಲಿಸಿದ್ದರು.
ಪರಿಣಾಮ ಗ್ರಾಪಂ ಅಧ್ಯಕ್ಷೆಯ ಪತಿ ನಾಗರಾಜು ಹಾಗೂ ಗ್ರಾಪಂ ಸದಸ್ಯ ಪ್ರಕಾಶ್ ಅವರೊಂದಿಗೆ ಪಿಡಿಓ ನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅಚ್ಚರಿ ಎನ್ನುವಂತೆ ಈ ಗ್ರಾಮ ಅರ್ಧ ಕೆಂಕೆರೆ ಪಂಚಾಯ್ತಿಗೂ ಇನ್ನರ್ಧ ಗಾಣಧಾಳು ಪಂಚಾಯ್ತಿಗೂ ಸೇರುತ್ತದೆ. ಅಲ್ಲದೆ ಇಲ್ಲಿನ ಬಹುತೇಕ ಮನೆಗಳನ್ನು ಆಶ್ರಯ ಯೋಜನೆಯಲ್ಲಿ ಮಂಜೂರು ಮಾಡಿದ್ದಾರೆ. ಹಾಗಾಗಿ ಯಾವುದೇ ಅಳತೆಯಿಲ್ಲದೆ ಎಲ್ಲೆಂದರಲ್ಲಿ ಎಷ್ಟುಬೇಕೋ ಅಷ್ಟು ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದು ಕಂಡುಬಂದಿತು.
ತಕ್ಷಣ ಪಿಡಿಓ ಗಾಣಧಾಳು ಪಂಚಾಯ್ತಿಗೆ ಸೇರಿದ ನಕ್ಷೆಯನ್ನು ತರಿಸಿ ಪರಿಶೀಲಿಸಿದಾಗ ಕೆಲ ನಿವಾಸಿಗಳು ಒತ್ತುವರಿ ಮಾಡಿರುವುದು ಕಂಡು ಬಂದಿತು. ಅಲ್ಲದೆ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳು ಹಾಕಿರುವುದು ಸ್ಪಷ್ಟವಾಯಿತು. ತಕ್ಷಣ ರಸ್ತೆಗೆ ಹಾಕಿರುವ ಕಲ್ಲು, ಮುಳ್ಳು ತೆರವು ಮಾಡುವಂತೆ ಸೂಚಿಸಿದರಲ್ಲದೆ ಇನ್ನೆರಡು ದಿನಗಳಲ್ಲಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿರುವ ಹಿತ್ತಲನ್ನು ತೆರವು ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳೇ ಒಬ್ಬರ ಮೇಲೊಬ್ಬರು ಒತ್ತುವರಿ ಮಾಡಿರುವ ಬಗ್ಗೆ ದೂರು ನೀಡಿದರು. ಅಲ್ಲದೆ ಮಂಜೂರಾದ ವಿಸ್ತೀರ್ಣದಲ್ಲಿ ಮನೆ ಕಟ್ಟಿದ್ದು, ಇಲ್ಲಿ ದಾರಿಯೇ ಇಲ್ಲ ಎನ್ನುವ ವಾದ ಸಹ ಮಾಡಿದರು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಮಾಡಿದರೆ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಡಿಓ ಎಚ್ಚರಿಸಿದರಲ್ಲದೆ ಮುಂದಿನ ವಾರ ಕೆಂಕೆರೆ ಪಂಚಾಯ್ತಿ ಪಿಡಿಓ ಅವರೊಂದಿಗೆ ಆಗಮಿಸಿ ಇಲ್ಲಿ ಮಂಜೂರಾಗಿರುವ ಮನೆಗಳು ಮತ್ತು ವಿಸ್ತೀರ್ಣವನ್ನು ಅಳತೆ ಮಾಡಿ ಒತ್ತುವರಿ ತೆರವು ಮಾಡುವುದಾಗಿ ತಿಳಿಸಿದರು.
ಶಾಲಾ ಆವರಣ ಉಳಿಸಿಕೊಡಿ :
ಶಾಲಾ ಆವರಣದಲ್ಲೇ ಕೆಲವರಿಗೆ ಪಂಚಾಯ್ತಿಯಿಂದ ನಿವೇಶನ ಮಂಜೂರು ಮಾಡಿದ್ದಾರೆ. ಇಲ್ಲಿ ಮನೆಗಳನ್ನು ಕಟ್ಟಿದರೆ ನೂರಾರು ಮಕ್ಕಳಿಗೆ ಆಟವಾಡಲು ಜಾಗವೇ ಇಲ್ಲದಾಗುತ್ತದೆ. ಹಾಗಾಗಿ ನಿರಾಶ್ರಿತರಿಗೆ ಬದಲಿ ಜಾಗ ಕೊಟ್ಟು ಶಾಲಾ ಆವರಣ ಉಳಿಸಿಕೊಡುವಂತೆ ಶಾಲೆಯ ಮುಖ್ಯಶಿಕ್ಷಕ ಚಂದ್ರಪ್ಪ ಮನವಿ ಮಾಡಿದರು. ಅಲ್ಲದೆ ಶಾಲೆಯ ಸುತ್ತ ಪಂಚಾಯ್ತಿಯಿಂದ ಕಾಂಪೌಂಡ್ ಕಟ್ಟುವಂತೆ ಕೇಳಿಕೊಂಡರು. ಇದಕ್ಕೆ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದೇವಾಲಯ ಜಾಗದಲ್ಲಿ ಅಂಗಡಿ :
ಗ್ರಾಮಸ್ಥರ ಒತ್ತಾಯದ ಮೇರೆಗೆ ಕಂಪನಹಳ್ಳಿ ಊರೊಳಗೆ ಶ್ರೀರಾಮ ಮಂದಿನ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಪಂಚಾಯ್ತಿ ನಿಗಧಿ ಮಾಡಿತ್ತು. ಆದರೆ ಈ ಜಾಗದಲ್ಲಿ ಈಗ ಅನಧಿಕೃತವಾಗಿ ಗೂಡಗಂಡಿ ನಿರ್ಮಿಸಿ ಸ್ವಂತಕ್ಕೆ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಪಿಡಿಓ ನಾರಾಯಣ್ ಅಂಗಡಿ ತೆರವು ಮಾಡುವಂತೆ ಸೂಚಿಸಿದರಲ್ಲದೆ ಈ ಜಾಗ ನಿಮ್ಮದೆನ್ನುವುದಕ್ಕೆ ಸೂಕ್ತ ದಾಖಲೆಗಳಿದ್ದರೆ ಇನ್ನೆರಡು ದಿನಗಳಲ್ಲಿ ಪಂಚಾಯ್ತಿಗೆ ತಂದು ತೋರಿಸಿ ನಾವು ತೆರವು ಮಾಡಿಸುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ