ಹುಳಿಯಾರು:
ತುಮಕೂರು ಜಿಲ್ಲಾಡಳಿತ, ಚಿಕ್ಕನಾಯಕನಹಳ್ಳಿ ತಾಲೂಕು ಆಡಳಿತ, ಹುಳಿಯಾರು ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ವ್ಯಾಕ್ಸಿನ್ ಮೇಳ ಯಶಸ್ವಿಯಾಗಿ ನಡೆಯಿತು.
ಹುಳಿಯಾರು ಪಟ್ಟಣ ಪಂಚಾಯ್ತಿಗೆ ಇಲ್ಲಿಯವರೆವಿಗೂ ಗರಿಷ್ಠ ಎಂದರೂ 300 ವಾಕ್ಸಿನ್ ಸರಬರಾಜು ಆಗುತ್ತಿದ್ದು ಒಂದೊಂದು ದಿನ ಒಂದೊಂದು ಬಡಾವಣೆಗಳಲ್ಲಿ ವ್ಯಾಕ್ಸಿನ್ ಶಿಬಿರ ಏರ್ಪಡಿಸಲಾಗುತ್ತಿತ್ತು. ಆದರೆ ವ್ಯಾಕ್ಸಿನ್ ಮೇಳದ ಅಂಗವಾಗಿ ಶುಕ್ರವಾರ 900 ವ್ಯಾಕ್ಸಿನ್ ನೀಡಲಾಗಿತ್ತು.
ಹಾಗಾಗಿ ಪಟ್ಟಣದ ಇಂದಿರಾ ನಗರದ ಉರ್ದು ಶಾಲೆ, ಎಂಪಿಎಸ್ ಶಾಲೆ, ಎ.ಕೆ.ಕಾಲೋನಿಯ ಅಂಗನವಾಡಿ ಹಾಗೂ ಪಪಂ ವ್ಯಾಪ್ತಿಯ ಸೋಮಜ್ಜನಪಾಳ್ಯ, ಕಾಮಶೆಟ್ಟಿಪಾಳ್ಯ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯ, ವೈ.ಎಸ್.ಪಾಳ್ಯ, ವಳಗೆರಹಳ್ಳಿ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು.
ಒಂದೇ ದಿನ 900 ಲಸಿಕೆ ಖಾಲಿ ಮಾಡುವುದೇಗೆ ಎನ್ನುವ ಚಿಂತೆ ಆಯೋಜಕರದಾಗಿತ್ತು. ಹಾಗಾಗಿಯೇ ಆಟೋ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ಮಾಡಲಾಗಿತ್ತಲ್ಲದೆ ಪಪಂ ಸದಸ್ಯರ ಮೂಲಕ ಜನ ಕರೆಸುವ ಚಿಂತನೆ ಮಾಡಿಕೊಂಡಿದ್ದರು. ಅಚ್ಚರಿ ಎನ್ನುವಂತೆ ಬೆಳಗ್ಗೆಯಿಂದಲೇ ಪ್ರತಿ ವ್ಯಾಕ್ಸಿನ್ ಕೇಂದ್ರದಲ್ಲೂ ಜನರ ನೂಕು ನುಗ್ಗಲು ಏರ್ಪಟ್ಟಿತ್ತು.
ಮಧ್ಯಾಹ್ನ 1 ಗಂಟೆಯಷ್ಟರಲ್ಲಿ ಪಪಂ ವ್ಯಾಪ್ತಿಗೆ ಬಂದಿದ್ದ 900 ವ್ಯಾಕ್ಸಿನ್‍ಗಳೂ ಖಾಲಿಯಾಗಿದ್ದರೂ ಜನರು ಮಾತ್ರ ಖಾಲಿಯಾಗಲಿಲ್ಲ. ದೂರದಿಂದ ಬಂದಿದ್ದೇವೆ ಆಟೋ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ ವ್ಯಾಕ್ಸಿನ್ ತರಿಸಿ ಕೊಡಿ ಎಂದು ಜನರು ಪಟ್ಟು ಹಿಡಿದರು. ಮುಖ್ಯಾಧಿಕಾರಿಗಳು ಮೇಲಧಿಕಾರಿಗಳಿಗೆ ತಿಳಿಸಿದರಾದರೂ ಪುನಃ ವ್ಯಾಕ್ಸಿನ್ ಬಾರದೆ ಜನರು ನಿರಾಸೆಯಿಂದ ಮನೆಗಳಿಗೆ ಹಿಂದಿರುಗಿದರು.
ಶಿಬಿರದ ಯಶಸ್ಸಿಗೆ ಪಪಂ ಸದಸ್ಯರು, ಸಿಬ್ಬಂದಿಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಶ್ರಮಿಸಿದರು.
