ಕೊರಟಗೆರೆ :
ತಾಲ್ಲೂಕಿನ ಗ್ರಾಮೀಣ ಜನರು ಕೊರೋನಾ ಲಸಿಕೆ ಸಿಗದೆ ಪರದಾಡುತ್ತಿದ್ದರೆ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದು, ಶ್ರೀಮಂತ ಕುಟುಂಬಗಳು ತಾಲ್ಲೂಕಿನ ಆಸ್ಪತ್ರೆಗಳಲ್ಲಿ ನಿರಾಯಾಸವಾಗಿ ಲಸಿಕೆ ಪಡೆಯುತ್ತಿರುವುದು ದೌಭ್ರ್ಲಾಗ್ಯದ ಸಂಗತಿಯಾಗಿದೆ
ರಾಜ್ಯ ಸರ್ಕಾರ ಅಂಧವಾಗಿ ಆನ್ ಲೈನ್ ಮುಖಾಂತರ 18 ರಿಂದ 45 ವರ್ಷದ ಒಳಗೆ ನೋಂದಣಿಗೆ ಅವಕಾಶ ನೀಡಿದೆ. ಆದರೆ ಇದರಲ್ಲಿ ರಾಜ್ಯದ ಯಾವುದೇ ವ್ಯಕ್ತಿ ಯಾವುದೆ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆಯಲು ಅವಕಾಶವಿದ್ದು, ಮೇ 9 ರಂದು ಈ ನೋಂದಣಿ ವೆಬ್‍ಸೈಟ್ ಆರಂಭವಾದ ತಕ್ಷಣ ಮೊದಲ ಹಂತದ ಲಸಿಕೆಯ ಶೇ.95 ರಷ್ಟು ಬೆಂಗಳೂರು ಮತ್ತು ಸುತ್ತಮುತ್ತಲಿನ ಜನರು ಎರಡೇ ಗಂಟೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇದರ ಅರಿವೇ ಇಲ್ಲದೆ, ಲಸಿಕೆಗಾಗಿ ದಿನವೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಅಲೆದಾಡುತ್ತಿದ್ದಾರೆ.
ದಿನವೂ 18 ವರ್ಷದ ಮೇಲಿನ ವಯಸ್ಸಿನವರು ಕೊರೋನಾ ಲಸಿಕೆಯನ್ನು ಬೆಂಗಳೂರು, ಆನೇಕಲ್, ರಾಮನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಐಶಾರಾಮಿ ಕಾರುಗಳಲ್ಲಿ ಬಂದು ಲಸಿಕೆ ಪಡೆದು ಹೋಗುತ್ತಿದ್ದಾರೆ. ಮೇ 13 ರಂದು ಸರ್ಕಾರವು ಲಸಿಕೆ ನಿಲ್ಲಿಸಿರುವುದಾಗಿ ತಿಳಿಸಿದ್ದರೂ ಸಹ, ಕೊರಟಗೆರೆ ಆರೋಗ್ಯ ಕೇಂದ್ರಕ್ಕೆ ಲಸಿಕೆ ಪಡೆಯಲು ಬೆಂಗಳೂರಿನಿಂದ ಸುಮಾರು 30 ಕ್ಕೂ ಹೆಚ್ಚು ಕಾರುಗಳಲ್ಲಿ ಬಂದು ಆಸ್ಪತ್ರೆಯ ಮುಂದೆ ಮತ್ತು ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಎಲ್ಲರೂ ಲಸಿಕೆಗಾಗಿ ಸರಿದಿ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿತು. ಇವರಲ್ಲಿ ಶೇ. 60 ರಷ್ಟು ಮಂದಿ 20 ರಿಂದ 30 ವರ್ಷದ ವಯಸ್ಸಿನವರಾಗಿದ್ದರು.
ಆದರೆ ತಾಲ್ಲೂಕಿನಲ್ಲಿ 40 ರಿಂದ 45 ವರ್ಷದ ಒಳಗಿನ ಸಾವಿರಾರು ಮಂದಿ ಈ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡು, ದಿನಾಂಕಕ್ಕಾಗಿ ಕಾಯುತ್ತಿದ್ದರೂ ಪ್ರಯೋಜನವಾಗಿಲ್ಲ. ಕೆಲವೊಮ್ಮೆ 45 ವರ್ಷ ಮೇಲ್ಪಟ್ಟವರಿಗೂ ಸಹ ಲಸಿಕೆ ಕೊರತೆಯಿಂದ ವಾಪಸ್ ಕಳುಹಿಸಲಾಗುತ್ತಿದೆ ಎಂದು ದೂರುಗಳು ಬರುತ್ತಿವೆ. ಕೊರೋನ ಲಸಿಕೆ ನೀಡುವಿಕೆಯಲ್ಲೂ ಸಹ ಸರ್ಕಾರ ಮತ್ತು ಇಲಾಖಾ ಆದಿಕಾರಿಗಳು ನಗರ ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಿರುವುದು ದುರಾದೃಷ್ಟಕರವಾಗಿದೆ. ಕೊರೋನಾ ವಾರಿಯರ್ಸ್‍ಗೆ ಲಸಿಕೆ ನೀಡಲು ಅಡ್ಡಿ ಪಡಿಸುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ಈ ಗೋಲ್‍ಮಾಲ್ ಕಾಣದೆ ಜಾಣ ಕುರುಡಾಗಿದ್ದಾರೆ. ಇಲ್ಲವೇ ಇಲಾಖೆಯವರು ಸಹ ಇದರಲ್ಲಿ ಕೈ ಜೋಡಿಸಿದ್ದಾರೇನೊ ತಿಳಿಯದಾಗಿದೆ. ಒಟ್ಟಾರೆ ಇದರಿಂದ ತೊಂದರೆ ಅನುಭವಿಸುತ್ತಿರುವುದು ಮಾತ್ರ ಗ್ರಾಮೀಣ ಪ್ರದೇಶದ ಜನರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
