ಬಜೆಟ್ : ಎತ್ತಿನ ಹೊಳೆಗೆ ಹೆಚ್ಚು ಹಣಕ್ಕೆ ಮನವಿ

ಕೊರಟಗೆರೆ :

      ನೂತನ ಮುಖ್ಯಮುಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುವ ಆಯ-ವ್ಯಯದಲ್ಲಿ ಬಯಲು ಸೀಮೆಯ ಮಹತ್ತರ ಎತ್ತಿನ ಹೊಳೆ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಗೊಳಿಸುವಂತೆ ಮನವಿ ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

      ಅವರು ಕೊರಟಗೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ಕೆಆರ್‍ಡಿಎಲ್ ಮತ್ತು ಜಿಲ್ಲಾ ಪಂಚಾಯತ್ ಇಲಾಖೆಗಳ ಅಡಿಯಲ್ಲಿ ಕೋರಾ ಹೋಬಳಿಯ ಬೆಳಧರ ಗ್ರಾಮದಲ್ಲಿ ಚನ್ನರಾಯನದುರ್ಗ ಹೋಬಳಿಯ ಅಗ್ರಹಾರ, ದಾಸಾಲುಕುಂಟೆ, ಕುರಿಹಳ್ಳಿ, ಗೌಜುಗಲ್ಲು, ಮಲ್ಲೇಕಾವು, ಗೊಂದಿಹಳ್ಳಿ, ಸೀಗರನಹಟ್ಟಿ ಗ್ರಾಮಗಳಲ್ಲಿ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ, ಹೊಳವನಹಳ್ಳಿ, ಲಿಂಗಾಪುರ, ಬುಡಮಾರನಹಳ್ಳಿ ಎಚ್.ವಿ.ಪಾಳ್ಯ, ತೊಗರಿಘಟ್ಟ, ಬಿ.ಡಿ.ಪುರ ಕಸಬಾ ಹೋಬಳಿಯ ಬುರುಗನಹಳ್ಳಿ, ಪಟ್ಟಣದ ಸಾದರ ಸಮುದಾಯದ ಬಳಿ ವಿವಿಧ ಅಭಿವೃದ್ದಿ ಮತ್ತು ಲಿಂಕ್ ರಸ್ತೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು.

      ತಮ್ಮ ಅಧಿಕಾರಾವಧಿಯಲ್ಲಿ ಚನ್ನರಾಯನದುರ್ಗ ಹೋಬಳಿ ಸೇರಿದಂತೆ ಕ್ಷೇತ್ರದ ಹೋಬಳಿಗಳಲ್ಲಿ ತಲಾ 100 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಬಹುತೇಕ ವಸತಿ ಶಾಲೆಗಳ ನಿರ್ಮಾಣಗಳಿಗೆ 30 ರಿಂದ 40 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಅಲ್ಲಿನ ಪರಿಸರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇಂತಹ ಮಹತ್ತರ ಯೋಜನೆಗಳನ್ನು ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿದೆ. ಹೆಚ್ಚು ಬಡತನ ಹೊಂದಿರುವ ಕುಟುಂಬದವರು ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದ ಮುಖ್ಯ ಭೂಮಿಕೆಗೆ ಬರುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ತರಲಾಗುತ್ತಿದೆ. ಈಗಾಗಲೇ ಹೇಮಾವತಿ ಕುಡಿಯುವ ನೀರಿನ ಯೋಜನೆಯನ್ನು ಕ್ಷೇತ್ರಕ್ಕೆ ತರಲಾಗಿದ್ದು, ಕೆಲವು ತಾಂತ್ರಿಕ ತೊಂದರೆಗಳಿಂದ ಇದೇ ಯೋಜನೆಯಲ್ಲಿ 18 ಗ್ರಾಮಗಳಿಗೆ ಹರಿಯಬೇಕಿದ್ದ ಹೇಮಾವತಿ ನೀರು ಸ್ವಲ್ಪ ನಿಧಾನವಾಗಿತ್ತು. ಈ ಹಿಂದೆ ನಾನು ಮತ್ತು ಜಿಲ್ಲೆಯ ಲೋಕಸಭಾ ಸದಸ್ಯರಾದ ಬಸವರಾಜು ಒಟ್ಟುಗೂಡಿ 10 ಹಳ್ಳಿಗಳಿಗೆ ಹೇಮಾವತಿ ನೀರನ್ನು ಹರಿಸಿದ್ದೆವು. ಉಳಿದ 8 ಗ್ರಾಮಗಳಿಗೆ ಕೊರಟಗೆರೆ ಪಟ್ಟಣ ಪಂಚಾಯ್ತಿಯೊಂದಿಗೆ ಸಮಾಲೋಚಿಸಿ ನೀರು ಹರಿಸಲಾಗಿದೆ ಎಂದರು.

ಈ ಭಾಗದಲ್ಲಿ ಹಲವು ನೀರಾವರಿ ಯೋಜನೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದ್ದು, ಈಗಾಗಲೆ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿ ಸಾಗುತ್ತಿದ್ದು, ಕಳೆದ ಆಯ-ವ್ಯಯದಲ್ಲಿ ಈ ಯೋಜನೆಗೆ ಕೇವಲ 500 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಅದು ಯಾವ ಕಾಮಗಾರಿಗೂ ಸಾಲದಿದ್ದು, ನೂತನ ಮುಖ್ಯ ಮಂತ್ರಿಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗುವುದು. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಪ್ರತಿ ಗ್ರಾಮಪಂಚಾಯ್ತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರೊಂದಿಗೆ ಸಾಮಾನ್ಯ ವರ್ಗಕ್ಕೂ ನೂರು ಮನೆಗಳು, ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಮಾಡಲಾಗುವುದು. ಈಗಾಗಲೆ ಸಿದ್ದರಬೆಟ್ಟಕ್ಕೆ ಒಂದು ಕೋಟಿ ರೂ.ಗಳಲ್ಲಿ ಮೆಟ್ಟಿಲು ಕಾಮಗಾರಿಯನ್ನೂ ಸಹ ಪ್ರಾರಂಭಿಸಲಾಗುವುದು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿ, ಸಾರ್ವಜನಿಕರೊಂದಿಗೆ ಸೇರಿ ಮುನ್ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಹಿದಾ ಜಮ್‍ಜಮ್, ಇಓ ಶಿವಪ್ರಕಾಶ್, ಎಇಇಗಳಾದ ಮಂಜುನಾಥ್, ನಾಗಯ್ಯ, ಮಲ್ಲಣ್ಣ, ಎಇ ಹನುಮಂತರಾಯಪ್ಪ, ಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮಹಿಳಾ ಅಧ್ಯಕ್ಷರುಗಳಾದ ಜಯಮ್ಮ, ಶೈಲಜ, ಜಿಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷರುಗಳಾದ ರೇಖಾ, ವಿನೋದಮ್ಮ, ವೆಂಕಟಲಕ್ಷ್ಮಮ್ಮ, ಮುಖಂಡರುಗಳಾದ ಗೊಂದಿಹಳ್ಳಿ ರಂಗರಾಜು, ರಾಮಸ್ವಾಮಿ, ಎಸ್‍ಎಲ್‍ಎನ್ ಸ್ವಾಮಿ, ಗಿರೀಶ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap