ಕೊರಟಗೆರೆ
ವಚನಕಾರರ ವಚನಾಮೃತವನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಧುನಿಕ ವಚನಕಾರ ರುದ್ರಮೂರ್ತಿ ಎಲೆರಾಂಪುರ ತಿಳಿಸಿದರು.
ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊರಟಗೆರೆ ಶರಣ ಸಾಹಿತ್ಯ ಪರಿಷತ್ತು, ಡಿ.ಎನ್ ಫೌಂಡೇಷನ್, ರುಷಿತಾ ಸ್ಕೂಲ್ ಆಫ್ ಕರಾಟೆ, ಫ್ರೆಂಡ್ಸ್ ಗ್ರೂಪ್, ವರಸಿದ್ಧಿ ವಿನಾಯಕ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಸಹಯೋಗದೊಂದಿಗೆ ಪರಿಷತ್ತಿನ ಸಂಸ್ಥಾಪಕ ಸುತ್ತೂರು ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ ಜನ್ಮದಿನ ಅಂಗವಾಗಿ ಶನಿವಾರ ಪಟ್ಟಣದ ರುಷಿತ ಸ್ಕೂಲ್ ಆಫ್ ಕರಾಟೆಯಲ್ಲಿ ನಡೆದ ‘ವಚನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದ್ದೂರಿಯಾಗಿ ಪೂಜೆಯನ್ನು ಮಾಡಿದರೆ ಅದು ದೇವರಿಗೆ ಸಲ್ಲುವುದಿಲ್ಲ. ನಿಜ ಅರ್ಥದಲ್ಲಿ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇದನ್ನು ಎಲ್ಲರೂ ಅನುಸರಿಸಬೇಕು. ಇದನ್ನು 800 ವರ್ಷಗಳ ಹಿಂದೆ ಮಾಡಿದ ವಚನಕಾರರು ಇಂದಿಗೂ ಜೀವಂತವಾಗಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಡಿ.ಎಂ ರಾಘವೇಂದ್ರ ಮಾತನಾಡಿ, ವಚನಕಾರರು ಕೇವಲ ಒಂದು ಸಮುದಾಯ, ಜಾತಿಗೆ ಸೀಮಿತವಾದವರಲ್ಲ. ಇವರು ಸಮಾಜದ ಪ್ರವರ್ತಕರು, ಇವರ ಆದರ್ಶಯುತ ಜೀವನ ಇಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪದ್ಮಾರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿದರು.
ವಚನ ದಿನದ ಅಂಗವಾಗಿ ಪ್ರೌಢಶಾಳಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆಸಿದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ದಯಾನಂದಸ್ವಾಮಿ, ಸಂಘಟನಾ ಕಾರ್ಯದರ್ಶಿ ಲೋಕೇಶ್, ರುಚಿತ ಸ್ಕೂಲ್ ಆಫ್ ಕರಾಟೆ ವ್ಯವಸ್ಥಾಪಕಿ ವಿಜಯಲಕ್ಷ್ಮಿ ವಿಶ್ವನಾಥ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಜಗ್ಗೇಶ್ ಅಭಿಮಾನಿಗಳ ಜಿಲ್ಲಾಧ್ಯಕ್ಷ ಡಿ.ಎಲ್ ಮಲ್ಲಯ್ಯ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಕೆ.ಸಿ ಶಿವಕುಮಾರ್, ಕಾರ್ಯದರ್ಶಿ ಕೆ.ಆರ್ ಕಿರಣ್, ಕಾರ್ಯಾಧ್ಯಕ್ಷ ಆದಿನಾರಾಯಣ, ನಿರ್ದೇಶಕ ಡೇರಿ ಸದಾಶಿವಯ್ಯ, ಶಿಕ್ಷಕಿಯರಾದ ಚೈತನ್ಯ, ಉಮಾ, ರಾಧಾ, ಭಾರತಿ, ದಿವ್ಯಶ್ರೀ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
