ತುಮಕೂರು
ಹೈಕೋರ್ಟ್ ಆದೇಶದಂತೆ ಕನಿಷ್ಟ ಕೂಲಿ ನೀಡಬೇಕು, ಸ್ಕೀಂ ನೌಕರರಾದ ಅಂಗವಾಡಿ, ಬಿಸಿಯೂಟ, ಆಶಾ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಹಮಾಲರು, ಟೈಲರ್‍ಗಳು, ಮೆಕಾನಿಕ್‍ಗಳು, ಮನೆಗೆಲಸಗಾರರು, ಚಿಂದಿ ಆಯುವವರು, ಕ್ಷೌರಿಕರು ಮತ್ತು ಪುರಿಭಟ್ಟಿ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ನೀಡಬೇಕು ಸ್ಕಾಟ್ ಗಾರ್ಮೆಂಟ್ ಕಾರ್ಮಿಕರಿಗೆ ಸಿಗಬೇಕಾದ ಕೂಲಿ ಮತ್ತಿತರೆ ಸೌಲಭ್ಯಗಳನ್ನು ನೀಡುವಂತೆ ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೇ 14ರಂದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕನಿಷ್ಟ ವೇತನ ಕಾಯ್ದೆಯಡಿ ಸರ್ಕಾರ ನಿಗದಿಪಡಿಸಿರುವ 37 ರಂಗದ ಕೈಗಾರಿಕೆ, ಕಾಯಂ, ಗುತ್ತಿ, ಹೊರಗುತ್ತಿಗೆ, ಬದಲಿ ಹೊರಗುತ್ತಿಗೆ ಕಾರ್ಮಿಕರೆಲ್ಲರೂ ಮೂಲ ವೇತನ ಹೆಚ್ಚಳ ಪಡೆಯಲು ಅರ್ಹರಾಗಿದ್ದು ಇದರ ಜಾರಿಗೆ ಒತ್ತಾಯಿಸುತ್ತೇವೆ. ಎಂದರು.
ಜಿಲ್ಲೆಯಲ್ಲಿರುವ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ನರ್ಸಿಂಗ್‍ಹೋಂಗಳಲ್ಲಿ ಕನಿಷ್ಠ ವೇತನ ಜಾರಿಗೆ ಕ್ರಮ ವಹಿಸಬೇಕು. ಕಾರ್ಮಿಕರ ಕನಿಷ್ಟ ಕೂಲಿಯನ್ನು ಬಾಕಿ ಸಮೇತ 6ರ ಬಡ್ಡಿ ಜೊತೆ ಎಂಟು ವಾರದೊಳಗೆ ನೀಡಬೇಕು. ಹೈಕೋರ್ಟ್‍ನ ಆದೇಶವನ್ನು ಜಾರಿ ಮಾಡಲು ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಸಂಬಂಧ ಕನಿಷ್ಠ ವೇತನ ಜಾರಿ ಮಾಡಿಸುವ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗಬೇಕು. ತಪ್ಪಿದ್ದಲ್ಲಿ ನ್ಯಾಯಾಂಗ ನಿಂದನೆ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಸಿದರು.
ಸರ್ಕಾರಗಳು ಜಿಲ್ಲೆಯಲ್ಲಿ ಹೂಡಿಕೆ ಸಂಬಂಧ ಸಾಕಷ್ಟು ಆಸಕ್ತಿ ವಹಿಸಿರುವುದು ಸರಿಯಷ್ಟೆ. ಈ ಬಗ್ಗೆ ಕಾರ್ಮಿಕರ ವೇತನ ಮತ್ತಿತರ ಸೌಲಭ್ಯಗಳ ಸಂಬಂಧ ಜಿಲ್ಲಾಡಳಿತ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ಖಾಲಿ ಇರುವ ಕಾರ್ಮಿಕ ಅಧಿಕಾರಿಗಳ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿರುವ ಬೀಡಿ ಕಾರ್ಮಿಕರಿಗೆ ಸರ್ಕಾರಿ ಅಧಿಸೂಚಿತ ಕನಿಷ್ಟ ವೇತನ ಹಾಗೂ 2015 ರಿಂದ 2018ರವರೆಗೆ ಬಾಕಿ ಇರುವ ತುಟ್ಟಿಭತ್ಯೆ ನೀಡುವಂತೆ ಕ್ರಮ ವಹಿಸಬೇಕು. ಸಾವಿರಾರು ಮಹಿಳೆಯರ ಮೂರು ತಿಂಗಳ ವೇತನ, ಬೋನಸ್, ಪಿಎಫ್, ಮತ್ತಿತರೆ ಕಾನೂನುಬದ್ದ ಬಾಕಿಗಳನ್ನು ನೀಡದೆ ಏಕಾಏಕಿ ಸ್ಕಾಟ್ ಗಾರ್ಮೆಂಟ್‍ನ್ನು ಮುಚ್ಚಿರುವ ಮಾಲಿಕನ ಮೇಲೆ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯಸಮ್ಮತ ಬಾಕಿಗಳನ್ನು ಕೊಡಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತ ನೌಕರ ತಿಮ್ಮೇಗೌಡ ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಪೂರ್ಣಪ್ರಮಾಣದ ಕಾರ್ಮಿಕ ಅಧಿಕಾರಿಗಳು ಇಲ್ಲದೆ ಉಪಧನ ಮೊಕದ್ದಮೆಗಳು ನಡೆಸದ ಕಳೆದ ನಾಲ್ಕೈದು ವರ್ಷಗಳಿಂದ ಬಾಕಿ ಇವೆ. ಹಾಗಾಗಿ ಶೀಘ್ರ ವಿಲೇವಾರಿ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕ್ರಮ ವಹಿಸಬೇಕು ಎಂದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೇಶ್ ಮಾತನಾಡಿ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು ಹತ್ತು ರೂಪಾಯಿಂದ ಏಕಾಏಕಿ 1 ಸಾವಿರ ರೂಪಾಯಿಗೆ ಹೆಚ್ಚಿಸಿರುವ ಸರ್ಕಾರದ ಕ್ರಮ ಖಂಡಿಸಿ ಹೆಚ್ಚಳ ಮಾಡಿರುವುದನ್ನು ವಾಪಸ್ ಪಡೆಯಬೇಕು. ಬೆಲೆ ಏರಿಕೆ ಲೆಕ್ಕಹಾಕುವಾಗ ಸಗಟು ಮಾರುಕಟ್ಟೆಯ ಬೆಲೆಗಳನ್ನಾಧರಿಸದೆ ಕಾರ್ಮಿಕರು ದಿನನಿತ್ಯ ಕಕೊಳ್ಳುವ ಚಿಲ್ಲರೆ ಮಾರುಕಟ್ಟೆ ಬೆಲೆಗಳನ್ನು ಪರಿಗಣಿಸಬೇಕು ಎಂದು ಹೇಳಿದರು.
ಸಿರಾ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ನಿಸಾರ್ ಅಹಮದ್ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ, ತುಟ್ಟಿಭತ್ಯೆ ಬಾಕಿ ಜಾರಿಗೊಳಿಸಬೇಕು ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಬೆಲೆ ಏರಿಕೆ ಸೂಚ್ಯಂಕದಲ್ಲಿ ಆಗಿರುವ ಮೋಸದಾಟವನ್ನು ಸರಿಪಡಿಸಬೇಕು. ಕನಿಷ್ಠ ಕೂಲಿಯನ್ನು ಲೆಕ್ಕಹಾಕುವಾಗ ಸರ್ಕಾರ ಅನುಸರಿಸುತ್ತಿರುವ ಮೂರು ಘಟಕಗಳಿಗೆ ಬದಲಾಗಿ ತಂದೆ ತಾಯಿಯರ ಪಾಲನೆ ಪೋಷಣೆ, ಮಕ್ಕಳ ಮೇಲೆ ಕಡ್ಡಾಯಗೊಳಿಸಿರುವ ಕಾನೂನಿನ ಹಿನ್ನೆಲೆಯಲ್ಲಿ ಐದು ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ನಿಗದಿಪಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಾರ್ಮಿಕ ಮುಖಂಡ ಟಿ.ಜಿ.ಶಿವಲಿಂಗಯ್ಯ, ರೈತ ಸಂಘದ ಮುಖಂಡ ಮೂಡ್ಲಗಿರಿಯ್ಯ, ರಾಜಣ್ಣ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಿಮ್ಮೇಗೌಡ, ಪಿಟ್‍ವೆಲ್ ಕಾರ್ಮಿಕ ಸಂಘಟನೆಯ ಶಶಿ, ಕಟ್ಟಡ ಕಾರ್ಮಿಕ ಸಂಘಟನೆಯ ಖಲೀಲ್, ಮನೆಗೆಲಸಗಾರರ ಸಂಘದ ರೀಟಾ, ಕಾಂತಮ್ಮ, ಶಶಿಕಲ, ಅನಸೂಯ, ದಿವ್ಯಹರ್ಷಿತ, ಭಾನುಮತಿ, ಶಾಹೀನ ಉನ್ನೀಸ, ದಾಸಪ್ಪ, ಶ್ರೀನಿವಾಸ್ ನರಸಮ್ಮ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಿದ ಆಫೀಸ್ ಅಸಿಸ್ಟೆಂಟ್ ನಂಜುಂಡಪ್ಪ ಈ ಮನವಿಯನ್ನು ಸರ್ಕಾರಕ್ಕೆ ಕಳಿಸಿಕೊಟ್ಟು ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಿಗದಿ ಮಾಡುವುದಾಗಿ ಭರವಸೆ ನೀಡಿದರು. ಕಾರ್ಮಿಕ ನಿರೀಕ್ಷಕ ಜಯಪ್ರಕಾಶ್ ಮನವಿ ಸ್ವೀಕರಿಸಿ ಮಾತನಾಡಿ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಕನಿಷ್ಠ ವೇತನ ಜಾರಿ ಮಾಡುವ ಸಂಬಂಧ ಮುಂದಾಗುತ್ತೇವೆ ಎಂದು ತಿಳಿಸಿದರು. ಕಾರ್ಖಾನೆಗಳ ನಿರೀಕ್ಷಕ ನರಸಿಂಹಮೂರ್ತಿ ಮಾತನಾಡಿ, ಸ್ಕಾಟ್ ಗಾರ್ಮೆಂಟ್ ಕಾರ್ಮಿಕರಿಗೆ ಬರಬೇಕಾದ ಕೂಲಿ ಮತ್ತಿತರೆ ಸೌಲಭ್ಯಗಳ ಸಂಬಂಧ ಈಗಾಗಲೇ ಮೊಕದ್ದಮೆ ಹೂಡಿದೆ. ಕಾರ್ಮಿಕರಿಗೆ ಬರಬೇಕಾದ ಸೌಲಭ್ಯಗಳನ್ನು ಕೊಡಿಸುವುದಲ್ಲದೆ ಈ ಸಂಬಂಧ ಕಾನೂನಾತ್ಮಕವಾಗಿ ಮುಂದಾಗುವುದಾಗಿ ತಿಳಿಸಿದರು.