ಚಿಕ್ಕನಾಯಕನಹಳ್ಳಿ
ಕಳೆದ ಎರಡ್ಮೂರು ದಿನಗಳಿಂದ ಸೂರ್ಯನ ಬಿಸಿಲು ಆಗಾಗ್ಗೆ ಕಾಣುತ್ತಿದೆ, ಉಳಿದಂತೆ ಮೋಡ ಕವಿದ ವಾತಾವರಣವೇ ಹೆಚ್ಚು. ಸೋನೆ ಮಳೆಯೂ ನಿಂತಿದೆ, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಬಿದ್ದ ಮಳೆಗೆ ತಾಲ್ಲೂಕಿನಲ್ಲಿ ಒಟ್ಟು 39800 ಹೆಕ್ಟೇರ್ ಕೃಷಿ ಭೂಮಿ ಇದ್ದು, ಇದರಲ್ಲಿ 28800 ಹೆಕ್ಟೇರ್ ಬಿತ್ತನೆಯಾಗಿದೆ.
ಇದರಲ್ಲಿ ರಾಗಿ ಬೆಳೆಯೇ ಶೇ.69.8ರಷ್ಟು ಬಿತ್ತನೆಯಾಗಿದ್ದು ಮಳೆ ಪ್ರಮಾಣ ಇದೇ ರೀತಿ ಮುಂದುವರೆದರೆ ಇನ್ನಷ್ಟು ಹೆಚ್ಚಾಗಬಹುದು. ಆಗಸ್ಟ್ ಅಂತ್ಯದವರೆಗೂ ರಾಗಿ ಬಿತ್ತನೆ ಮಾಡಬಹುದಾಗಿದೆ. ಬಿತ್ತನೆ ಬೀಜದ ದಾಸ್ತಾನು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ದಾಖಲೆಗಳ ಪ್ರಕಾರ ರಾಗಿ ಬೆಳೆಯು 26020 ಹೆಕ್ಟೇರ್‍ಗೆ 18170 ಹೆಕ್ಟೇರ್ ಬಿತ್ತನೆಯಾಗಿದೆ, ಕಸಬಾ: 2000 ಹೆಕ್ಟೇರ್, ಶೆಟ್ಟಿಕೆರೆ:3000, ಕಂದಿಕೆರೆ:3120, ಹಂದನಕೆರೆ: 5250 ಹಾಗೂ ಹುಳಿಯಾರು ಹೋಬಳಿಯಲ್ಲಿ 4800 ಹೆಕ್ಟೆರ್ ಬಿತ್ತನೆ ಆಗಿದೆ.
ಪೂರ್ವ ಮುಂಗಾರು ಪ್ರಮುಖ ಬೆಳೆಯಾದ ಹೆಸರು 4500 ಹೆಕ್ಟೇರ್‍ಗೆ 545 ಹೆಕ್ಟೇರ್ ಬಿತ್ತನೆಯಾಗಿದೆ. ಕಸಬಾ : 110 ಹೆಕ್ಟೇರ್, ಶೆಟ್ಟಿಕೆರೆ : 50 ಹೆಕ್ಟೇರ್, ಕಂದಿಕೆರೆ : 105 ಹೆಕ್ಟೇರ್, ಹಂದನಕೆರೆ : 170 ಹಕ್ಟೇರ್, ಹುಳಿಯಾರು : 110 ಹೆಕ್ಟೇರ್ ಆಗಿದೆ ಹಾಗೂ ಅಲಸಂದೆ ಬೆಳೆ 850 ಹೆಕ್ಟೇರ್‍ಗೆ 170 ಹೆಕ್ಟರ್ ಬಿತ್ತನೆಯಾಗಿದೆ.
ನಿರಂತರ ಬರಗಾಲ ಹಾಗೂ ಮಳೆ ಕೊರತೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೃಷಿ ಚಟುವಟಿಕೆಯಲ್ಲಿ ಕುಂಠಿತ ಕಂಡುಬಂದಿತ್ತು, ಕಳೆದ ವಾರದಿಂದೀಚಿಗೆ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಕೃಷಿ ಇಲಾಖೆಯ ದಾಖಲೆ ಹೇಳುವಂತೆ ಒಟ್ಟು ಬಿತ್ತನೆ ಆಗಸ್ಟ್ 8 ರವರೆಗೆ 52.72ರಷ್ಟು ಬಿತ್ತನೆಯಾಗಿದೆ.
ಉಳುಮೆ ರಾಸುಗಳನ್ನು ಕಾಪಾಡಿಕೊಂಡಿರುವ ಸಾಂಪ್ರದಾಯಿಕ ರೈತರುಗಳು ಹೊಲಗಳತ್ತ ಮುಖಮಾಡಿದ್ದು ಕಳೆದ ಒಂದು ವಾರದಿಂದ ಉಳುಮೆಗೆ ಮುಂದಾಗಿದ್ದಾರೆ. ಸೋಮವಾರ ಸಾಮಾನ್ಯವಾಗಿ ನಮ್ಮ ಭಾಗದಲ್ಲಿ ಉಳುಮೆ ಮಾಡುವುದಿಲ್ಲ, ಭಾನುವಾರ ಸಹ ತಾಲ್ಲೂಕಿನ ಅಲ್ಲಲ್ಲಿ ಬಿತ್ತನೆ ದೃಶ್ಯಗಳು ಕಂಡು ಬಂದವು.