ಮಧುಗಿರಿ
ಒಂದೂವರೆ ವರ್ಷದ ನಂತರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲು ಪ್ರಕಟ ಮಾಡಿದೆ. ಆದರೆ ಹಾಲಿ ಪಟ್ಟಿಯು ಕೆಲ ನ್ಯೂನತೆಗಳಿಂದ ಕೂಡಿದೆ. ಶೀಘ್ರವೆ ಹೊಸ ಮೀಸಲಾತಿಯನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಅಧಿವೇಶನದಲ್ಲಿ ಜಿಲ್ಲಾ ಸಚಿವರು ಹೇಳಿದ್ದಾರೆ. ಅಂದರೆ ಮೀಸಲಾತಿ ಪಟ್ಟಿ ಬದಲಾಗಿ ಮತ್ತಷ್ಟು ತಿಂಗಳುಗಳ ಕಾಲ ಸ್ಪರ್ಧಿಗಳು ಗದ್ದುಗೆಗಾಗಿ ಕಾಯುವಂತಹ ಸಂಕಷ್ಟ ಸೃಷ್ಟಿಯಾಗಿದೆ.
ಹಾಲಿ ಮೀಸಲಾತಿಯಂತೆ ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್‍ನ 10 ನೆ ವಾರ್ಡಿನ ಸದಸ್ಯೆ ಗಿರಿಜಾ ಎಂ.ವಿ.ಮಂಜುನಾಥ್, 20ನೆ ವಾರ್ಡಿನ ಸದಸ್ಯೆ ರಾಧಿಕಾ ಆನಂದಕೃಷ್ಣ 3ನೆ ವಾರ್ಡಿನ ಸದಸ್ಯೆ ನಸೀಮಾ ಬಾನು ಸಾಧಿಕ್, 11ನೆ ವಾರ್ಡಿನ ಸದಸ್ಯೆ μÁಹಿನಾ ಕೌಸರ್ ಷಕೀಲ್, 12ನೆ ವಾರ್ಡಿನ ಸದಸ್ಯೆ ಜಿ.ಎನ್.ಶೋಭರಾಣಿ ರಾಮು, 14ನೆ ವಾರ್ಡಿನ ಸದಸ್ಯೆ ಎನ್.ಬಿ.ಗಾಯಿತ್ರಿ ಉಮೇಶ್ ಹಾಗೂ 22ನೆ ವಾರ್ಡಿನ ಸದಸ್ಯೆ ಸುಜಾತ ಎಂ.ಎಸ್.ಶಂಕರನಾರಾಯಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಉಪಾಧ್ಯಕ್ಷರ ಸ್ಥಾನ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗೆ ಮೀಸಲಾಗಿರುವುದರಿಂದ ಕಾಂಗ್ರೆಸ್‍ನ 18ನೆ ವಾರ್ಡಿನ ಸದಸ್ಯೆ ನಾಗಲತಾ ಲೋಕೇಶ್, 7ನೆ ವಾರ್ಡಿನ ಸದಸ್ಯೆ ಪುಟ್ಟಮ್ಮ ಆನಂದ್ ಆಂಕಾಕ್ಷಿಯಾಗಿದ್ದಾರೆ. 23 ಸದಸ್ಯ ಬಲದ ಪುರಸಭೆಯಲ್ಲಿ 13 ಕಾಂಗ್ರೆಸ್, 9 ಜೆಡಿಎಸ್ ಹಾಗೂ 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರೂ ಸಹ ಅಪೆಕ್ಸ್ ಅಧ್ಯಕ್ಷ ಕೆ ಎನ್ ರಾಜಣ್ಣ ಬೆಂಬಲಿತರಿಬ್ಬರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೆ ಇದೆ. ಕೆಲ ಸಮುದಾಯದವರು ಈಗಾಗಲೆ ಕಳೆದ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದವರಿಂದ ಜನ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಆರೋಪಗಳು ಅವರ ಮೇಲಿವೆ. ಈಗಲಾದರೂ ತಳ ಸಮುದಾಯದವರಿಗೆ ಅಧಿಕಾರ ನೀಡಬೇಕೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆ.ಎನ್.ರಾಜಣ್ಣನವರ ಜೊತೆಯಲ್ಲಿದ್ದ ಮಧುಗಿರಿಯ ಕೆಲ ರಾಜಕೀಯ ಮುಖಂಡರು ಮಹಾರಾಷ್ಟ್ರ ಹಾಗೂ ಕಲ್ಕತ್ತ ನಗರಗಳಿಗೆ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿಂದಲೆ ಕೆಲವರು ರಾಜಣ್ಣನವರ ಸೋಲಿಗೆ ಟೊಂಕ ಕಟ್ಟಿದ್ದರು. ಇಂದು ಅಧಿಕಾರದ ಆಸೆಗಾಗಿ ಅವರುಗಳು ರಾಜಣ್ನನವರ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಇಂತಹವರುಗಳಿಂದ ಪಟ್ಟಣದ ಅಭಿವೃಧ್ಧಿ ಸಾಧ್ಯವೆ? ವಿಧಾನ ಸಭಾ ಚುನಾವಣೆಯಲ್ಲಿ ರಾಜಣ್ಣನವರು ಗೆಲ್ಲುವ ಹಂತದಲ್ಲಿದ್ದರು. ಇಂತಹವರ ಪಿತೂರಿಯಿಂದಾಗಿ ಅವರಿಗೆ ಸೋಲಾಯಿತು. ಜೊತೆಗೆ ಮಧುಗಿರಿಯ ಅಭಿವೃದ್ಧಿಗೂ ಅಡ್ಡಗಾಲು ಹಾಕಿದರು. ಈಗ ಕೆಎನ್‍ಆರ್‍ರವರೆ ನಮಗೆ ಹೈಕಮಾಂಡ್ ಎಂದು ಹೊಸ ಹೈಡ್ರಾಮ ಆರಂಭಿಸಿದ್ದಾರೆ. ರಾಜಕೀಯ ಚತುರರಾದ ಹಾಗೂ ಅಭಿವೃದ್ಧಿಗೆ ಸಾಕಷ್ಟು ಸಾಹಸಗಳನ್ನು ಮಾಡಿ ಮಧುಗಿರಿಯನ್ನು ರಾಜ್ಯದಲ್ಲಿ ಒಂದು ವಿಭಿನ್ನ ಕ್ಷೇತ್ರವನ್ನಾಗಿ ಕಟ್ಟಲು ಸಿದ್ದವಾಗಿರುವ ರಾಜಣ್ಣನವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ನಿಗೂಡ ರಹಸ್ಯವಾಗಿದೆ.
ಜೆಡಿಎಸ್‍ನಿಂದ ಗೆದ್ದಿರುವ ತಿಮ್ಮರಾಜು, ಮಂಜುನಾಥ್ ಆಚಾರ್ ಹಾಗೂ ಲಾಲಾ ಪೇಟೆ ಮಂಜುನಾಥ್ ಪಕ್ಷೇತರ ಅಭ್ಯರ್ಥಿ ಯಾಗಿರುವ 1ನೆ ವಾರ್ಡಿನ ಆಶಿಯಾ ಬಾನು ಕೂಡ ಈಗಾಗಲೆ ರಾಜಣ್ಣನವರ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಜೆಡಿಎಸ್‍ನಲ್ಲಿರುವ ಉಳಿದ ಸದಸ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರು ವಿಪ್ ಜಾರಿ ಮಾಡಿ ಕಾನೂನು ರೀತಿಯಲ್ಲಿ ಸಮರ ಸಾರುವುದರ ಮೂಲಕ ಜೆಡಿಎಸ್ ಸದಸ್ಯರನ್ನು ಕಟ್ಟಿಹಾಕುತ್ತಾರೆಯೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆಲ ಆಕಾಂಕ್ಷಿಗಳು ಆಯಾ ಸಮುದಾಯದ ಮುಖಂಡರಿಂದ ಮನವಿ ಮಾಡಿಸಲು ತೆರೆಮರೆಯ ಕಸರತ್ತುಗಳನ್ನು ಜೋರಾಗಿಯೆ ನಡೆಸುತ್ತಿದ್ದು, ಜಿಲ್ಲಾ ಸಚಿವರ ಇತ್ತೀಚಿನ ಹೇಳಿಕೆಯಿಂದಾಗಿ ಮತ್ತೆ ಕೆಲ ತಿಂಗಳುಗಳ ಕಾಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಮುಂದೆ ಹೋದಂತಾಗಿದೆ.
ಪ್ರಸ್ತುತ ಪ್ರಕಟಗೊಂಡ ಮೀಸಲಾತಿಯ ಬಗ್ಗೆ ರಾಯಚೂರು ಜಿಲ್ಲೆಯ ಸಿಂಧೂನೂರಿನ ಆಲಂ ಬಾಷ ಎನ್ನುವವರು ಮಾ.17 ರಂದು ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಗಾಗಿ ಅರ್ಜಿ ಸಲ್ಲಿಸಿದ್ದಾರೆಂದು, ಇವರ ಮನವಿಯನ್ನು ಆಲಿಸಿದ ಘನ ನ್ಯಾಯಾಲಯವು ಪರಿಶೀಲನೆಯ ಸಮಯಾವಕಾಶಕ್ಕಾಗಿ 2020 ರ ಏಪ್ರಿಲ್ 01ರ ವರೆಗೆ ಪ್ರಕರಣವನ್ನು ಮುಂದೂಡಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಎರಡು ಪಕ್ಷಗಳಿಂದಲೂ ರಾಜಕೀಯ ಹೋರಾಟಗಳು ನಡೆಯುತ್ತಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕ ಪ್ರಕಟವಾಗುವವರೆಗೂ ರಾಜಕೀಯ ಚರ್ಚೆಗಳು ಪಟ್ಟಣದಲ್ಲಿ ಜೋರಾಗಿವೆ. ಈಗಿರುವ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ. ಪುರಸಭಾ ಗದ್ದಿಗೆಗೆ ಆನೆಯ ಸೊಂಡಿಲ ಹೂ ಮಾಲೆ ಯಾರಿಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ..!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ