ತುಮಕೂರು

ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಆಶಾ ಕಾಯಕರ್ತೆಯರ ಸಮಸ್ಯೆಗಳ ನಿವಾರಣೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಟಿಯುಸಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಆಶಾ ಕಾರ್ಯಕರ್ತೆಯರು ಜಿ.ಪಂ ಆವರಣದಲ್ಲಿ ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯದ ಆರೋಗ್ಯ ಇಲಾಖೆಯಡಿ ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಆರೋಗ್ಯ ಇಲಾಖೆಯ ಆಯುರಾರೋಗ್ಯವೇ ಆಗಿದ್ದಾರೆ. ಸದಾ ಜನತೆಯ ಮಧ್ಯೆ ಇದ್ದು, ಇಲಾಖೆಯ ಸೇವೆಗಳನ್ನು ಅಚ್ಚುಕಟ್ಟಾಗಿ ತಲುಪಿಸುವ ಕಾರ್ಯವನ್ನು ಚಾಚೂತಪ್ಪದೇ ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದ ವಹಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಇವರು ಇಲಾಖೆಯ ಪ್ರಗತಿಗೆ ಆಧಾರ ಸ್ತಂಭಗಳಾಗಿದ್ದಾರೆ. ಹೀಗಿದ್ದರೂ ಸಹ ಆಶಾ ಕಾರ್ಯಕರ್ತೆಯರಿಗೆ ನೀಡುವ ಕೇಂದ್ರದ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧನ ವೇತನ ಮಾದರಿಯನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ವರ್ಷಕ್ಕೆ ಮೂರ್ನಾಲ್ಕು ಬಾರಿ ವೇತನ ಪಡೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಶಾಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವ ಹಿಂದಿನ ಸಚಿವರ ಭರವಸೆಯನ್ನು ಜಾರಿಗೊಳಿಸಬೇಕು. ಹಿಂದಿನ ಸರ್ಕಾರದ ಭರವಸೆಯಂತೆ ಆಶಾ ಕ್ಷೇಮಾಭಿವೃದ್ಧಿ ಸ್ಥಾಪಿಸಿ ಆಶಾಗಳ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಆಶಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಲದೆ ಆಶಾಗಳಿಗೆ ಪಿಂಚಣಿ ಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಲಹೆಗಾರ ಎಸ್.ಎನ್.ಸ್ವಾಮಿ ತಿಳಿಸಿದರು.
ಬಹುತೇಕ ಆಶಾಗಳು ತಮ್ಮ ಈ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆಶಾ ವೇತನವನ್ನು ಎಂಸಿಟಿಎಸ್ ಅಥವಾ ಆರ್‍ಸಿಎಚ್ ಪೊರ್ಟಲ್‍ಗೆ ಹೊಂದಿಸಿರುವುದರಿಂದ ತಿಂಗಳು ಪೂರ್ತಿ ಮಾಡಿದ ಕೆಲಸಕ್ಕೆ ಅರೆಬರೆ ವೇತನ ಪಡೆಯುವಂತಾಗಿದ್ದು, ಕೆಲಸ ಮಾಡಿದಷ್ಟು ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ 6 ಸಾವಿರ ರೂ. ವೇತನ ನಿಗದಿಪಡಿಸಿ, ಪ್ರತಿ ತಿಂಗಳು ನಿಯತವಾಗಿ ವೇತನ ನೀಡಬೇಕು. ಆಶಾ ಸಾಫ್ಟ್ ರದ್ದುಪಡಿಸಬೇಕು. ಆರ್‍ಸಿಎಚ್ ಪೋರ್ಟಲ್‍ಗೆ ಆಶಾ ವೇತನ ಲಿಂಕ್ ಮಾಡಿರುವುದನ್ನು ರದ್ದು ಮಾಡಿ ಆಶಾಗಳು ದುಡಿದಷ್ಟು ವೇತನವನ್ನು ಪ್ರತಿ ತಿಂಗಳು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರಲ್ಲದೆ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ನಗರ ಆಶಾಗಳಿಗೆ ನಗರ ಜೀವನ ಮಟ್ಟಕ್ಕೆ ತಕ್ಕಂತೆ ಹೆಚ್ಚಿನ ಪ್ರೋತ್ಸಾಹ ಧನ ನಿಗದಿಪಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಜಿ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಳುಹಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರುಗಳಾದ ಲತಾ, ಅಶ್ವಿನಿ, ಕಲ್ಯಾಣಿ, ರೇಖಾಪದ್ಮ ಸೇರಿದಂತೆ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
