ಶಿರಾ
ಕೊರೋನಾ ವೈರಸ್ ನಿಯಂತ್ರಣದ ಸಂಬಂಧ ದೇಶದ ಪ್ರಧಾನಿ ಒಂದು ದಿನದ ಮಟ್ಟಿಗೆ ಕರೆ ನೀಡಿದ್ದ ಜನತಾ ಕಫ್ರ್ಯೂ ಶಿರಾ ನಗರದಲ್ಲಿ ಸಂಪೂರ್ಣವಾಗಿ ಯಶಸ್ಸು ಕಂಡಿದೆ.ಬೆಳಗ್ಗೆ 5 ಗಂಟೆಯಿಂದಲೂ ಶಿರಾ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ಯಾವುದೇ ಖಾಸಗಿ ಬಸ್ ಸಂಚಾರವಾಗಲಿ, ಸಾರಿಗೆ ಬಸ್‍ಗಳ ಸಂಚಾರವಾಗಲಿ ಇರಲಿಲ್ಲ.
ನಗರದ ವಿವಿಧ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಬೆಳಗ್ಗೆ 5.30ರಿಂದ ಕೆಲವೆಡೆ ನಿತ್ಯ ಬಳಕೆಯ ಹಾಲು, ಪತ್ರಿಕೆಗಳು ಲಭ್ಯವಾಗಿದ್ದನ್ನು ಬಿಟ್ಟರೆ ಇಡೀ ಶಿರಾ ನಗರ ಸಂಪೂರ್ಣ ಬಂದ್‍ನಂತೆ ಗೋಚರಿಸಿತು. ಜಿಲ್ಲಾಧಿಕಾರಿಗಳು ವಿಧಿಸಿದ್ದ 144 ಸೆಕ್ಷನ್ ಜಾರಿಗೆ ಜನರೂ ಕೂಡ ತಲೆ ಬಾಗಿದಂತಿತ್ತು.
ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ಸಾರಿಗೆ ಬಸ್ ನಿಲ್ದಾಣಗಳು ಸಾರ್ವಜನಿಕರ ಓಡಾಟವಿಲ್ಲದೆ ಬಿಕೋ ಅನ್ನುತ್ತಿದ್ದವು. ನಗರದ ಕೆಲವು ಔಷಧಿ ಅಂಗಡಿಗಳು ಮಾತ್ರ ತೆರೆಯಲ್ಪಟ್ಟಿದ್ದು ಅಗತ್ಯ ಔಷಧಿಗಳನ್ನು ಕೊಳ್ಳುವವರ ಸಂಖ್ಯೆಯೂ ಕಡಿಮೆ ಇತ್ತು. ಈ ಹಿಂದೆ ಶಿರಾ ನಗರದಲ್ಲಿ ಶೇಂಗಾ ಬೆಲೆ ಕುಸಿದಿದ್ದಾಗ ನಡೆದ ಗೋಲಿಬಾರ್ ಸಂದರ್ಭದಲ್ಲಿ ಜಾರಿಯಾಗಿದ್ದ 144 ಸೆಕ್ಷನ್ ಸಂದರ್ಭದಲ್ಲಿ ಇಡೀ ನಗರ ಸ್ತಬ್ದಗೊಂಡಿದ್ದಂತಹ ವಾತಾವರಣ ಮಾ.22 ರಂದು ಶಿರಾ ನಗರದಲ್ಲಿ ಕಂಡು ಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ