ಪ್ರತಿ ಕಾಲೇಜಿನಲ್ಲೂ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಿ : ಸಿಇಓ

ತುಮಕೂರು
 
     ಜಿಲ್ಲೆಯ ಎಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ “ಮತದಾರರ ಸಾಕ್ಷರತಾ ಸಂಘ”ಗಳನ್ನು ಸ್ಥಾಪಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ವಿವಿಧ ಕಾಲೇಜುಗಳ ಪ್ರಾಚಾರ್ಯರಿಗೆ ಸೂಚನೆ ನೀಡಿದರು. 
      ನಗರದ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿಂದು ಪ್ರಾಚಾರ್ಯರ ಸಭೆ ನಡೆಸಿ ಮಾತನಾಡಿದ ಅವರು, ಭಾರತ ಸಂವಿಧಾನದ 326ನೇ ವಿಧಿಯ ಪ್ರಕಾರ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತಪಟ್ಟಿಯಲ್ಲಿ ತಪ್ಪದೆ ನೋಂದಾಯಿಸಿಕೊಳ್ಳಬೇಕು.  
 
      ಭಾರತ ಚುನಾವಣಾ ಆಯೋಗ ನೀಡಿದ ಮಾಹಿತಿಯನ್ವಯ ಶೇ. 20ರಷ್ಟು  ಮಾತ್ರ 18-19 ವರ್ಷ ವಯಸ್ಸಿನವರು ಮತಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ. ಯುವಜನರ ನೋಂದಣಿ ಪ್ರಮಾಣ ಶೇ.100ರಷ್ಟಾಗಬೇಕು. ಒಂದೊಂದು ಮತವೂ ಸಹ ಎಷ್ಟು ವ್ಯತ್ಯಾಸವನ್ನು ಕೊಡುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತು.
 
     ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕತೆಯ ಮತದಾನ, ಸಾಮಾಜಿಕ ಜವಾಬ್ದಾರಿ, ಮತ ಚಲಾಯಿಸುವ ಬಗ್ಗೆ  ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಲ್ಲದೆ, ಮತಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಹಾಗೂ ಮತದಾನ ಮಾಡುವ ಮಹತ್ವದ ಬಗ್ಗೆ ಯುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಪ್ರಾಚಾರ್ಯರಿಗೆ ತಿಳಿಸಿದರು. 
    ಮುಂದಿನ ದಿನಗಳಲ್ಲಿ ಕಾಲೇಜು ಬಿಟ್ಟ ಮಕ್ಕಳಿಗೂ ಮತಪಟ್ಟಿಗೆ ನೋಂದಾಯಿಸಿಕೊಳ್ಳುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನದ ಶೇಕಡಾವಾರು ಪ್ರಮಾಣ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚಳವಾಗಿದೆ.
   ಮತದಾನ ಪ್ರಮಾಣ ಹೆಚ್ಚಳವಾಗಲು ಸಹಕರಿಸಿದ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲೆಯಲ್ಲಿ ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಿದ್ದು ದಿನಾಂಕ 1-1-2020ಕ್ಕೆ 18 ವರ್ಷ ಪೂರ್ಣಗೊಳ್ಳುವ ಅರ್ಹರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
   ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೋಧಕರ ಮಾತನ್ನು ಬಹುಬೇಗ ಗ್ರಹಿಸಿ ಪಾಲನೆ ಮಾಡುವುದರಿಂದ ಪದವಿಪೂರ್ವ ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಕುರಿತು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತಹ ಕಾರ್ಯನಿರ್ವಹಿಸಬೇಕೆಂದು ಪ್ರಾಚಾರ್ಯರು ಬೋಧಕ ಸಿಬ್ಬಂದಿಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದರು. 
   ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಯಿಂದ ಪದವಿ ಹಂತದವರೆಗಿನ ವ್ಯಾಸಂಗಕ್ಕೆ ಧನ ಸಹಾಯ ನೀಡಲು ಬೆಂಗಳೂರಿನ ಸ್ವಾಧ ಫೌಂಡೇಶನ್ ಮುಂದೆ ಬಂದಿದ್ದು, ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಪ್ರಾಚಾರ್ಯರು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
   ಸ್ವಾಧ ಫೌಂಡೇಶನ್‍ನ ಪ್ರತಿನಿಧಿ ರಾಜೇಶ್ ಮಾತನಾಡಿ, ಧನ ಸಹಾಯ ಸೌಲಭ್ಯಕ್ಕಾಗಿ  ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.  ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಿಇಟಿ ಶುಲ್ಕ, ಮೂಲಭೂತ ಸೌಲಭ್ಯ, ವಿದ್ಯಾರ್ಥಿನಿಲಯ ಸೌಲಭ್ಯ, ವ್ಯಾಸಂಗ ಶುಲ್ಕ, ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸುಮಾರು 5 ವರ್ಷಗಳ ಕಾಲ ಶಿಕ್ಷಣದೊಂದಿಗೆ ಫೌಂಡೇಶನ್ ವತಿಯಿಂದ ಕೌಶಲ್ಯ ತರಬೇತಿಯನ್ನು ನೀಡಲಾಗುವುದು.
    ಕುಟುಂಬದ  ವಾರ್ಷಿಕ ವರಮಾನ 1.5ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಹಾಗೂ 10ನೇ ತರಗತಿಯಲ್ಲಿ ಶೇ.80ರಷ್ಟು ಅಂಕ ಪಡೆದಿರುವ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಬೋಧಕರು ತಮ್ಮ ವಿದ್ಯಾರ್ಥಿಗಳಿಗೆ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡುವ ಮೂಲಕ ಬಡತನ ರೇಖೆಗಿಂತ ಮೇಲೆ ಬರಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು. 
     ಸಭೆಯಲ್ಲಿ ಬೆಂಗಳೂರು ಉತ್ತರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತ ಕುಮಾರಿ, ಶ್ರೀನಿವಾಸ್, ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷ ಶಂಕರ್, ವಿವಿಧ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು. ಸಿದ್ಧಗಂಗಾ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಬಸವರಾಜು ಸ್ವಾಗತಿಸಿದರು.  ವಿದ್ಯಾರ್ಥಿನಿಯರಾದ ಸಾಕ್ಷಿ ಹಾಗೂ ಸಂಗೀತ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. 
.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link