ತುಮಕೂರು
ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಬಿಜೆಪಿ ಪಕ್ಷದ ರೆಬೆಲ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಡಾ. ಹಾಲನೂರು ಎಸ್.ಲೇಪಾಕ್ಷ ಎಚ್ಚರಿಸಿದರು.
ನಗರದ ಎಸ್‍ಆರ್‍ಎಸ್ ಕಾಲೇಜಿನಲ್ಲಿ ಬೆಂಬಲಿಗರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ನನ್ನನ್ನು ಅಧಿಕೃತ ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿತ್ತು. ಇದರಿಂದ ನಾನು 8 ತಿಂಗಳ ಕಾಲ 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಿ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆನು.
ಆ ಸಮಯದಲ್ಲಿ ಹೆಬ್ಬಾಳದಲ್ಲಿ ಪರಾಭವಗೊಂಡ ವೈ.ಎ.ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಿ, ಜಿ.ಎಸ್. ಬಸವರಾಜು ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಧಾನ ನಡೆಸಿ ನಾಮಿನೇಷನ್ ಹಾಕದಂತೆ ಮಾಡಿ ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಪ್ರಸ್ತುತ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬೇರೊಬ್ಬರಿಗೆ ಟಿಕೆಟ್ ನೀಡಿ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಕ್ಕೆ ಯಾವುದೆ ಕೊಡುಗೆ ನೀಡದ, ನಿನ್ನೆ ಮೊನ್ನೆವರೆಗೂ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿರುವ ಜೆಡಿಎಸ್‍ನಿಂದ ಟಿಕೆಟ್ ಸಿಗದಿದ್ದಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದ್ದವರಿಗೆ, ಜೆಡಿಎಸ್ ನಾಯಕರ ಜೊತೆಗೆ ಸಂಪರ್ಕವಿಟ್ಟುಕೊಂಡಿರುವ ಶಿರಾ ಕ್ಷೇತ್ರದ ಚಿದಾನಂದಗೌಡರಿಗೆ ಬಿಜೆಪಿ ಟಿಕೆಟ್ ನೀಡಿ, ಬಿಜೆಪಿಯಲ್ಲಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಅಭ್ಯರ್ಥಿಯಾದ ನನ್ನನ್ನು ಕಡೆಗಣಿಸಿರುವುದು ಖಂಡನೀಯ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಲೆ ಗಮನ ಹರಿಸಿ, ಚರ್ಚಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಃಸಿದ್ಧ.
ಈಗಾಗಲೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಬುಧವಾರ ಬೆಳಗ್ಗೆ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಬಂದಿದ್ದು, ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಾಮಿನೇಷನ್ ಹಾಕುವವರೆಗೂ ಕಾಯುತ್ತೇನೆ. ಯಾವುದೇ ಪ್ರತಿಕ್ರಿಯೆ ಕೊಡದಿದ್ದರೆ ಬಿಜೆಪಿ ಪಕ್ಷದ ರೆಬೆಲ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಪ್ರಕಾಶ್, ಶ್ರೀನಿವಾಸ್, ಆರ್.ಬಸವರಾಜು, ಬಂಡೆಪಾಳ್ಯ ನಾಗರಾಜು, ಎಸ್.ಸಿದ್ಧಪ್ಪ, ಹೊಸದುರ್ಗ ಪ್ರಕಾಶ್, ತಿಪಟೂರು ಚಂದ್ರಶೇಖರ್, ಶಿರಾ ಸುರೇಶ್, ಪಾವಗಡ ಮಂಜುನಾಥ್, ಚಿತ್ರದುರ್ಗ ಶಿವಣ್ಣ, ಚಳ್ಳಕೆರೆ ನಾಗರಾಜ್ ಸೇರಿದಂತೆ ನೂರಾರು ಬೆಂಬಲಿಗರು ಭಾಗವಹಿಸಿದ್ದರು.
ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಅಭ್ಯರ್ಥಿ ಪರ ತುಮಕೂರಿಗೆ ಪ್ರಚಾರಕ್ಕಾಗಿ ಆಗಮಿಸಿದಾಗ ಸಮಾರಂಭದಲ್ಲಿ ಹಾಲನೂರು ಲೇಪಾಕ್ಷ್ ಅವರಿಗೆ ಅನ್ಯಾಯವಾಗಿದೆ. ಅವರನ್ನು ಕೈಬಿಡುವುದಿಲ್ಲ, ಅವರ ಕೈ ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದರು, ಅಂದು ಮಾಧ್ಯಮಗಳಲ್ಲೂ ಭಿತ್ತರಗೊಂಡಿತು.
ಆದರೂ ಸಹ ನಾನು ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಸುಮಾರು 15 ವರ್ಷಗಳಿಂದಲೂ ಬಿಜೆಪಿ ಕಟ್ಟಾಳಾಗಿ ಕಾರ್ಯಕರ್ತನಾಗಿ ಜಿಲ್ಲಾ ಬಿಜೆಪಿ ವಕ್ತಾರನಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು, ಈಗ ನನಗೆ ಟಿಕೇಟ್ ನೀಡದೆ ಅನ್ಯಾಯ ಮಾಡಿದ್ದಾರೆ.
ಡಾ.ಹಾಲನೂರು ಎಸ್. ಲೇಪಾಕ್ಷ್, ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ