ತುಮಕೂರು
ಸೇನೆಯನ್ನು ರಾಜಕಾರಣಗೊಳಿಸಬೇಡಿ ಎಂದು ಹೇಳುವ ಕಾಂಗ್ರೆಸ್, ಈ ಹಿಂದೆ ಸೇನೆ ವಿರುದ್ದ ಹಲವು ಆರೋಪ ಮಾಡಿ ಸೇನೆಯ ಆತ್ಮಸ್ಥೈರ್ಯ ಕುಗ್ಗಿಸಿತ್ತು. ಬಾಲಾಕೋಟ್ ದಾಳಿಯನ್ನು ಜಗತ್ತಿನ ಯಾವ ದೇಶವೂ ವಿರೋಧಿಸಲಿಲ್ಲ, ಆದರೆ ನಮ್ಮ ದೇಶದ ಪ್ರತಿ ಪಕ್ಷಗಳು ಸೇನೆಗೆ ನೈತಿಕ ಬೆಂಬಲ ನೀಡಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದರು.
ನಗರದ ಎಸ್‍ಐಟಿ ಬಿರ್ಲಾ ಸಭಾಂಗಣದಲ್ಲಿ ಭಾನುವಾರ ಸಂಜೆ ಚಿಂತಕರ ಚಾವಡಿ ಸಂಘಟನೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿರ್ಮಲಾ ಸೀತಾರಾಮ್, ದೇಶದ ರಕ್ಷಣಾ ವಿಷಯ ಲಘುವಾದ ರಾಜಕೀಯ ಚರ್ಚೆ ಆಗಬಾರದು ಎಂದರು.
ಭಯೋತ್ಪಾದನೆ ಮೆಟ್ಟಿ ನಿಲ್ಲುವುದು ನಮಗೆ ದೊಡ್ಡ ಸವಾಲಾಗಿದೆ, ಜೊತೆಗೆ ದೇಶದ ಆರ್ಥಿಕ ಸ್ಥಿತಿ ಉತ್ತಮಪಡಿಸಿ ಜಗತ್ತಿನ ಇತರ ರಾಷ್ಟ್ರಗಳೆದುರು ಘನತೆ ಮೆರೆಯುವುದು ಕೂಡಾ ಸವಾಲು, ಈ ಕಾರ್ಯವನ್ನು ಪ್ರಧಾನಿ ಮೋದಿ ಸಮರ್ಥವಾಗಿ ಮಾಡುತ್ತಿದ್ದಾರೆ, ಮುಂದಿನ ಐದು ವರ್ಷದಲ್ಲಿ ಇದನ್ನು ಪೂರ್ಣ ಸಾಧ್ಯಗೊಳಿಸಲು ಮೋದಿ ಮುಂದಾಗಿದ್ದಾರೆ, ಈ ಚುನಾವಣೆಯಲ್ಲಿ ದೇಶದ ಜನ ಮೋದಿಯವರನ್ನು ಬೆಂಬಲಿಸಿ, ಮತ್ತೊಮ್ಮೆ ಪ್ರಧಾನಿಯಾಗಲು ಆಶೀರ್ವಾದ ಮಾಡಬೇಕಾಗಿದೆ ಎಂದು ಹೇಳಿದರು.
2008ರಲ್ಲಿ ಉಗ್ರರ ವಿರುದ್ಧ ದಾಳಿ ಮಾಡಲು ಸೈನಿಕರಿಗೆ ಸ್ವಾತಂತ್ರವಿರಲಿಲ್ಲ. ಈಗ ಭಾರತದ ರಕ್ಷಣೆ ವಿಚಾರದಲ್ಲಿ ರಾಜಕೀಯ ಇಚ್ಚಾಶಕ್ತಿ ಮೂಲಕ ಸೇನೆಗೆ ಸಂಪೂರ್ಣ ಬಲ ನೀಡಲಾಗಿದೆ ಎಂದ ನಿರ್ಮಲಾ ಸೀತಾರಾಮ್, ಪುಲ್ವಾಮ ಆತ್ಮಾಹುತಿ ದಾಳಿ ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಣ್ಣಪುಟ್ಟ ಅಸಂಘಟಿತ ವಲಯದಲ್ಲಿ ಉದ್ಯೋಗಗಳು ಸೃಷ್ಠಿಯಾಗಿವೆ. ಈ ಅಂಕಿ ಅಂಶಗಳನ್ನು ಯಾರೂ ಮಾಡಿಲ್ಲ. ಮುದ್ರಾ ಯೋಜನೆಯಡಿ ನೀಡಿರುವ ಸಾಲ, ಉದ್ದಿಮೆದಾರರಿಗೆ ನೀಡಿರುವ ಸಾಲ ಇವು ಉದ್ಯೋಗಗಳಲ್ಲವೆ ಎಂದು ಹೇಳಿದರು.2014ರಲ್ಲಿ ಎನ್‍ಡಿಎ ಅಧಿಕಾರಕ್ಕೆ ಬಂದ ಮೇಲೆ ಈ ಹಿಂದಿನ ಯುಪಿಎ ಸರ್ಕಾರದ ಭ್ರಷ್ಟಾಚಾರಗಳ ತನಿಖೆ ಆಗಲಿಲ್ಲ, ಮುಂದಿನ ಐದು ವರ್ಷದಲ್ಲಿ ಇಂತಹ ಭ್ರಷ್ಟರನ್ನು ಜೈಲಿಗೆ ಅಟ್ಟಲಾಗುವುದು, ಆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಎನ್‍ಡಿಎ ಅಧಿಕಾರಕ್ಕೆ ಬರಲು ನೂರಾರು ಕಾರಣಗಳಿವೆ. ಶುದ್ಧ ಹಸ್ತದ ಪ್ರಧಾನಿ, ರಿಮೋಟ್ ಕಂಟ್ರೋಲ್ ಅಲ್ಲದ ಪ್ರಧಾನಿ, ದಣಿವರಿಯದ ನಾಯಕ, ದೇಶಕ್ಕಾಗಿ ಪೂರ್ಣಾವಧಿ, ಪಾದರಸದಂತೆ ಕಾರ್ಯನಿರ್ವಹಿಸುವ ಪ್ರಧಾನಿ, ಪ್ರಧಾನಿಯಾದರೂ ತನ್ನ ಕಾಲುಗಳು ನೆಲದ ಮೇಲೇ ಇವೆ, ಭಾರತದ ಬಗ್ಗೆ ದೂರದೃಷ್ಟಿತ್ವವುಳ್ಳ ನಾಯಕ ಹಿಗಾಗಿ ದೇಶದ ಅಭಿವೃದ್ಧಿ ಹಾಗೂ ದೇಶದ ರಕ್ಷಣೆ ಹಾಗೂ ದೇಶದ ಜನರ ಸ್ವಾವಲಂಬಿಗಳಾಗಿ ಬಾಳಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದೇಶದ ಜನ ಅವರನ್ನು ಬೆಂಬಲಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
