ಡಿಸಿಎಂ ಎದುರು ಜೆಸಿಎಂ ಅಬ್ಬರ : ಬಹುತೇಕ ಚಿ.ನಾ.ಹಳ್ಳಿಗೆ ಸೀಮಿತವಾದ ಚರ್ಚೆ

0
31

ತುಮಕೂರು:

        ಬೇಜವಾಬ್ದಾರಿತನ ಮತ್ತು ಉಪಮುಖ್ಯಮಂತ್ರಿಗಳು ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಗೆ ಅನಧಿಕೃತ ಗೈರುಹಾಜರಿಯಾದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಅಬಕಾರಿ ಡಿಸಿ ಗಿರಿಯವರನ್ನು ಅಮಾನತ್ತಿನಲ್ಲಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚಿಸಿದರು. ಅವರು ತುಮಕೂರು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ 2018-19 ನೇ ಸಾಲಿನ ಸೆಪ್ಟಂಬರ್ 2018 ರ ಮಾಹೆಯ ಅಂತ್ಯಕ್ಕಿದ್ದಂತೆ ಎರಡನೇ ತ್ರೈಮಾಸಿಕ ಕೆ.ಡಿ.ಪಿ.ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.

         ತುಮಕೂರು ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಈ ದಂಧೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಕುರಿತು ಕ್ರಮಕ್ಕೆ ಮುಂದಾಗುವಂತೆ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾಗೂ ಮಧುಗಿರಿ ಶಾಸಕ ವೀರಭಧ್ರಯ್ಯನವರು ಸಭೆಯಲ್ಲಿ ಆಗ್ರಹಿಸಿದರು. ಈ ಸಮಯದಲ್ಲಿ ಅಬಕಾರಿ ಜಿಲ್ಲಾಧಿಕಾರಿಗಳು ಉತ್ತರ ನೀಡುವಂತೆ ಸಂಸದ ಮುದ್ದಹನುಮೇಗೌಡ ಸೂಚಿಸಿದರು ಆದರೆ ಅಬ್ಕಾರಿ ಡಿಸಿಯವರ ಬದಲಿಗೆ ಅವರ ಸಿಬ್ಬಂದಿ ಉತ್ತರನೀಡಿ ರಜೆಯಲ್ಲಿರುವ ವಿಷಯವನ್ನು ಪ್ರಸ್ತಾಪಿಸಿದರು.

       ಅಬಕಾರಿ ಜಿಲ್ಲಾಧಿಕಾರಿ ಗಿರಿಯವರನ್ನು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ನಾನು ನೋಡಿದ್ದೇನೆ. ಸಚಿವರ ಸಭೆಗೂ ಅವರು ಹಾಜರಾಗಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮಾಧ್ಯಮದವರ ಬಳಿ ಇವೆ.ಬೇಕಾದರೆ ತರಿಸುತ್ತೇವೆ. ಹೀಗಿದ್ದರೂ ಈ ರೀತಿಯ ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ..

         ಎಂದು ಅಬ್ಕಾರಿ ಸಿಬ್ಬಂದಿಯ ಮೇಲೆ ಅಬ್ಬರಿಸಿದ ಮುದ್ದಹನುಮೇಗೌಡರು ಉಪಮುಖ್ಯಮಂತ್ರಿಗಳು ಕರೆದಿರುವ ಸಭೆಗೆ ಹಾಜರಾಗದಷ್ಟು ದಾಷ್ಟ್ರ್ಯತನ ತೋರಿದ ಇವರನ್ನು ಸಸ್ಪೆಂಡ್ ಮಾಡಲೇಬೇಕು..ಎಂದು ಉಪಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.ಇದಕ್ಕೆ ಕಾರ್ಮಿಕ ಸಚಿವ ವೆಂಕಟರವಣಪ್ಪ ಮತ್ತು ಇತರೆ ಎಲ್ಲಾ ಶಾಸಕರೂ ದನಿಗೂಡಿಸಿದರು. ಹಾಗಾಗಿ ಕೂಡಲೇ ಅಮಾನತ್ತು ಮಾಡುವ ಬಗ್ಗೆ ಸರ್ಕಾರಕ್ಕೆ ಬರೆಯುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್ ಅವರಿಗೆ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದರು.

       ಇಂದು ನಡೆದ ಕೆಡಿಪಿ ಸಭೆಯಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಜೆಸಿ ಮಾಧುಸ್ವಾಮಿಯವರದ್ದೇ ಕಾರುಬಾರು..ಪ್ರತಿಯೊಂದು ಇಲಾಖೆಯ ಅಂಕಿಅಂಶಗಳನ್ನು ಯಥಾವತ್ತಾಗಿ ಅಧಿಕಾರಿಗಳ ಮುಂದೆ ಮಂಡನೆ ಮಾಡಿ ಅವರನ್ನು ತಬ್ಬಿಬ್ಬಾಗಿಸುತ್ತಿದ್ದ ಸಾಕಷ್ಟು ಪ್ರಸಂಗಗಳು ನಡೆದವು. ಜೆಸಿಎಂ ಅವರ ಪ್ರಶ್ನೆಗಳ ಸುರಿಮಳೆಗೆ ಪ್ರಗತಿ ಪರಿಶೀಲನೆ ಚಿಕ್ಕನಾಯನಹಳ್ಳಿ ತಾಲ್ಲೂಕಿಗೆ ಎಷ್ಟೋ ಸಾರಿ ಸೀಮಿತವಾದಂತೆ ಕಾಣುತ್ತಿತ್ತು. ಉಳಿದ ಶಾಸಕರಲ್ಲಿ ಡಾ.ರಂಗನಾಥ್ ಮತ್ತು ನಾಗೇಶ್ ಸ್ವಲ್ಪಮಟ್ಟಿಗಿನ ಚರ್ಚೆಗಳಲ್ಲಿ ಪಾಲ್ಗೊಂಡರು. ಉಪಮುಖ್ಯಮಂತ್ರಿಗಳು ಪ್ರತಿಯೊಂದು ಇಲಾಖೆಯ ಪ್ರಗತಿ ವರದಿಯನ್ನು ಅತ್ಯಂತ ಕೂಲಂಕುಷವಾಗಿ ಚರ್ಚಿಸುತ್ತಾ, ಪ್ರಮುಖ ಅಂಶಗಳನ್ನು ಗುರ್ತು ಹಾಕಿಕೊಳ್ಳುತ್ತಾ ಮತ್ತು ಸ್ಥಳದಲ್ಲಿಯೇ ಅನೇಕ ನಿರ್ಧಾರಗಳನ್ನು ಕೂಡಾ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು. ಡಿಸಿ ಮತ್ತು ಸಿಇಒಗೆ ಡಿಸಿಎಂ ತಾಕೀತು.

      ವಸತಿ ಯೋಜನೆಯೂ ಒಳಗೊಂಡಂತೆ, ಬಹುತೇಕ ಬಡವರ ಪರವಾದ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯು ಹಿಂದುಳಿದಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು. ಇಡೀ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದರ ಸಂಪೂರ್ಣ ಹೊರೆ ಹೊರಬೇಕಾಗುತ್ತದೆ. ಹಾಗೂ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಜಿಲ್ಲೆಯನ್ನು ಪ್ರಗತಿ ಪಥದತ್ತ ಕೊಂಡೊಯ್ಯಬೇಕಿದೆ. ಇಲ್ಲವಾದರೆ ಇವರಿಬ್ಬರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ತಾಕೀತು ಮಾಡಿದರು.

ನರೇಗಾದಲ್ಲಿ ಜೆಸಿಬಿ ಬಳಕೆ

         ಸಭೆಯ ಪ್ರಾರಂಭದಲ್ಲಿಯೇ ಚಿನಾಹಳ್ಳಿ ಶಾಸಕ ಜೆಸಿಮಾಧುಸ್ವಾಮಿ ಉದ್ಯೋಗ ಖಾತ್ರಿ ಯೋಜನೆಯ ಕೃಷಿಹೊಂಡಗಳ ಕರ್ಮಕಾಂಡದ ಕುರಿತು ಅಧಿಕಾರಿಗಳ ಮೇಲೆ ಹರಿಹಾಯ್ದರು. ಈ ಕೃಷಿಹೊಂಡಗಳಿಂದ ಒಂದೇ ಒಂದು ಮಾನವ ದಿನ ಸೃಜನೆಯಾಗಿಲ್ಲ. ಸುಮ್ಮನೆ ಕಥೆ ಹೇಳುತ್ತೀರಿ..ಇದನ್ನೆಲ್ಲಾ ನಾವು ಕುಳಿತು ಕೇಳಿಕೊಂಡು ಹೋಗಬೇಕೆ ಎಂದು ಜಿಲ್ಲಾಪಂಚಾಯಿತಿಯ ಉಪಕಾರ್ಯದರ್ಶಿ ಮಹಾಂಕಾಳಪ್ಪನವರನ್ನು ತರಾಟೆಗೆ ತೆಗೆದುಕೊಂಡ ಜೆಸಿ ಮಾಧುಸ್ವಾಮಿ ಅಂಕಿಅಂಶಗಳೊಂದಿಗೆ ವಿಷಯ ಮಂಡಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ಅನಿಸ್ ಕಣ್ಮಣಿ ಜಾಯ್ ಗ್ರಾಮಸಭೆಯ ನಿರ್ಧಾರದಂತೆ ಮತ್ತು ತಾಲ್ಲೂಕು ಪಂಚಾಯಿತಿಯ ಇಒ ಗಳು ಸಲ್ಲಿಸುವ ಕ್ರಿಯಾಯೋಜನೆಯನ್ನು ಅನುಮೋದಿಸುವುದಷ್ಟೇ ಜಿಲ್ಲಾಪಂಚಾಯಿತಿಯ ಕೆಲಸ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಜೆಸಿಎಂ, ನಾವು ಕೂಡಾ ಇಒ ಅವರನ್ನು ನೋಡಿದ್ದೇವೆ. ನರೇಗಾ ಯೋಜನೆಯಲ್ಲಿ ಯಾವುದೇ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಮಾನವ ದಿನಗಳ ಸೃಜನೆಯೂ ಅಗುತ್ತಿಲ್ಲ. ಯಂತ್ರಗಳಿಂದ ಕೃಷಿಹೊಂಡಗಳ ನಿರ್ಮಾಣ ಮಾಡುತ್ತಿದ್ದಾರೆ. ದನದ ಕೊಟ್ಟಿಗೆ ಮತ್ತು ಕೃಷಿ ಹೊಂಡ ಕಾಮಗಾರಿಗಳನ್ನು ಪ್ಯಾಕೇಜ್ ರೀತಿ ನೀಡುತ್ತಿದ್ದು, ತುಂಬಾ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು.

        ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುವ ಸಾಕಷ್ಟು ಕಾಮಗಾರಿಗಳಲ್ಲಿ ಕೂಲಿಗಿಂತ ಸಾಮಗ್ರಿ ವೆಚ್ಚವೇ ಜಾಸ್ತಿಯಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಸಾಮಗ್ರಿ ವೆಚ್ಚವು ಶೇಕಡಾ 60ನ್ನು ದಾಟಿರುವ ಕಾರಣ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಎಲ್ಲಾ ತಾಲ್ಲೂಕುಗಳಲ್ಲಿಯೂ ಗಮನಹರಿಸಬೇಕಿದೆ. ಈಗಾಗಲೇ ನಡೆದಿರುವ ಕಾಮಗಾರಿಗಳನ್ನು ಮೌಲ್ಯಮಾಪನ ಮಾಡಬೇಕಾದ ಅಗತ್ಯತೆಯಿದೆ ಎಂದು ತಿಪಟೂರು ಶಾಸಕ ಬಿಸಿನಾಗೇಶ್ ದೂರಿದರು

        ಇನ್ನು ಮುಂದೆ ಗ್ರಾಮಪಂಚಾಯಿತಿಯಿಂದ ಕಳುಹಿಸುವ ಕ್ರಿಯಾ ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಒಂದು ವಾರದ ಒಳಗೆ ಅನುಮೋದಿಸಿ ಕಳುಹಿಸಬೇಕು. ಹಾಗೆಯೇ ಜನಪ್ರತಿನಿಧಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ದೂರು ನೀಡಿದರೆ ಅದನ್ನು ಪರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಕ್ರಿಯಾಯೋಜನೆಯ ಬದಲಾವಣೆ ಸಲ್ಲದು ಎಂದು ಡಾ.ಜಿ.ಪರಮೇಶ್ವರ್ ಸಿಇಒ ಅವರಿಗೆ ಆದೇಶಿಸಿದರು.

ಗುತ್ತಿಗೆದಾರರನನ್ನು ಕಪ್ಪುಪಟ್ಟಿಗೆ ಸೇರಿಸಿ

       ತುಮಕೂರು ಜಿಲ್ಲೆಯಲ್ಲಿ ಬಹಳ ವರ್ಷಗಳಿಂದಲೂ ವಿದ್ಯುತ್ ಇಲಾಖೆಯ ಗುತ್ತಿಗೆಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರ ಮಹಾಲಿಂಗಯ್ಯ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕಾರ್ಮಿಕ ಸಚಿವ ವೆಂಕಟರವಣಪ್ಪ ಆಗ್ರಹಿಸಿದರು. ಪಾವಗಡ ತಾಲ್ಲೂಕಿನ ಪಂಪುಸೆಟ್ಟುಗಳ ಅಕ್ರಮ ಸಕ್ರಮಕ್ಕೆ ಸಂಬಂದಿಸಿದಂತೆ 2015 ರಿಂದಲೂ ಅವ್ಯವಹಾರವನ್ನು ಈ ಗುತ್ತಿಗೆದಾರರು ಎಸಗಿದ್ದು, ದೂರವಾಣಿ ಕರೆಗೂ ಸಿಗದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬೆಸ್ಕಾಂ ಮತ್ತು ಕೆಇಬಿಯ ಅಧಿಕಾರಿಗಳು ಈ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಕಾರ್ಮಿಕ ಸಚಿವರ ಜೊತೆ ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಕೂಡಾ ಶಿರಾ ತಾಲ್ಲೂಕಿನಲ್ಲಿ ಗುತ್ತಿಗೆದಾರರ ಅವ್ಯವಹಾರಗಳ ಕಂತೆಯನ್ನೇ ಸಭೆಯ ಮುಂದೆ ಬಿಚ್ಚಿಟ್ಟು, ಕೂಡಲೇ ಸದರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.

       ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಈಗ ಹಾಲಿ ನೀಡಿರುವ ಗುತ್ತಿಗೆ ಮತ್ತು ಕಾಮಗಾರಿಗಳನ್ನು ಅವರೇ ನಿರ್ವಹಿಸಲಿ ಆದರೆ ಕಾಲಮಿತಿಯೊಳಗೆ ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶಿದರು. ಇನ್ನುಮುಂದೆ ಯಾವುದೇ ಗುತ್ತಿಗೆಗಳನ್ನು ಮಹಾಲಿಂಗಪ್ಪನವರಿಗೆ ಕೊಡದೆ ಇರುವ ಬಗ್ಗೆ ಗಮನಹರಿಸುವಂತೆ ಬೆಸ್ಕಾ ಅಧಿಕಾರಿಗಳಿಗೆ ಸೂಚಿಸಿದರು.
ಬಾರಪ್ಪಾ ಮಹಾರಾಜಾ…

        ನೀನಂತೂ ಕೈಗೂ ಸಿಕ್ಕಲ್ಲ. ಕಣ್ಣಿಗೂ ಕಾಣಲ್ಲ..ನೀವಂತು ಅದೆಲ್ಲಿ ಕೆಲಸಾ ಮಾಡ್ತೀರೋ..ಏನು ಕಥೇನೋ..ನಿಮ್ಮ ಮುಖಾ ನೋಡಿ ಎಷ್ಟೋ ದಿನಾ ಆಗೋಗೈತೆ ಎಂದು ಭೂಸೇನಾ ನಿಗಮದ ಅಧಿಕಾರಿಗಳನ್ನು ಕಾರ್ಮಿಕಸಚಿವ ವೆಂಕಟರವಣಪ್ಪ ಗೇಲಿ ಮಾಡಿದರು. ಈ ಲ್ಯಾಂಡ್ ಆರ್ಮಿನೋರು ಯಾವ ತಾಲ್ಲೂಕಿಗೂ ಹೋಗೊಲ್ಲ..ಆಫೀಸಿನಲ್ಲಿಯೇ ಕುಳಿತು ಎಲ್ಲಾ ವ್ಯವಹಾರ ಮುಗಿಸಿಬಿಡ್ತಾರೆ.

       ಇವರಿಗೆ ನೀಡಿರುವ ಕಾಮಗಾರಿಗಳನ್ನು ಅರ್ಧಂಬರ್ಧ ಮುಗಿಸಿ ಅಲ್ಲಿಂದ ಜಾಗ ಖಾಲಿ ಮಾಡ್ತಾರೆ. ಒಂದೇ ಒಂದು ಕೆಲಸ ಕೂಡಾ ಶುದ್ದವಾಗಿ ಮಾಡಲ್ಲ. ಇನ್ನುಮೇಲೆ ಇವರಿಗೆ ಒಂದೇ ಒಂದು ಕಾಮಗಾರಿಯನ್ನೂ ಕೊಡಬೇಡಿ , ನಿಮ್ಮ ಎಇಇ ಯಾವೋನ್ರೀ..ಅವನನ್ನ ನಾನು ನೋಡೇ ಇಲ್ಲ..ಸುಮ್ಮನೆ ಸುಳ್ಳು ಹೇಳಿ ನಮ್ಮ ದಿಕ್ಕು ತಪ್ಪಿಸ್ತೀರಾ..ಎಂದ ಅವರು ಒಂದು ಹಂತದಲ್ಲಿ ಲಾಂಡ್ ಆರ್ಮಿಯ ಅಧಿಕಾರಿಗಳನ್ನು ದೂರು ನೀಡಿ ಜೈಲಿಗೆ ಕಳುಹಿಸಿ ಎಂದು ಅಬ್ಬರಿಸಿದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಸಂಸದ ಮುದ್ದಹನುಮೇಗೌಡ ಲ್ಯಾಂಡ್ ಅರ್ಮಿಯವರನ್ನು ಸರ್ಕಾರಿ ಗುತ್ತಿಗೆದಾರರೆಂದು ಜರೆದ ಘಟನೆಯೂ ನಡೆಯಿತು.

ಹೊಸ ಬೋರ್ ಕೊರೆಯಲು ಅನುಮತಿಯಿಲ್ಲ..!!

      ಬರಪರಿಹಾರ ನಿಧಿಯಲ್ಲಿ ಹೊಸಾ ಬೋರ್‍ವೆಲ್ ಕೊರೆಯಲು ಅನುಮಿತಿಯಿಲ್ಲ. ಪ್ರಸ್ತಾವನೆಯನ್ನು ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ 7 ಕೋಟಿ ಅನುದಾನವನ್ನು ಬಿಡುಗಡೆಮಾಡಲಾಗುವುದು. ಪ್ರತಿ ಬರಪೀಡಿತ ತಾಲ್ಲೂಕಿಗೂ 40 ಲಕ್ಷದಂತೆ ನೀಡಲಾಗುವುದು. ಒಂದು ಕುಡಿಯುವ ನೀರಿನ ಕೊಳವೆ ಬಾವಿ ಘಟಕಕ್ಕೆ 1.5 ಲಕ್ಷ ರೂಗಳಂತೆ ಖರ್ಚುಮಾಡಬಹುದು. ಪಂಪು ಮೋಟರ್ ಖರೀದಿ, ಪೈಪ್‍ಲೈನ್ ಅಳವಡಿಕೆ ಮತ್ತು ಕೊಳವೆಬಾವಿಯ ಹೈಡ್ರೋ ಪ್ರಾಕ್ಚರ್ ಮಾಡುವಂತಹ ಕೆಲಸಗಳಿಗೆ ಇದನ್ನು ಬಳಸಬೇಕು.

      ತುಮಕೂರು ಜಿಲ್ಲೆಯಲ್ಲಿ 9 ತಾಲ್ಲೂಕುಗಳನ್ನು ಮೊದಲ ಹಂತದಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು ,ಎರಡನೇ ಪಟ್ಟಿಯಲ್ಲಿ ತುರುವೇಕೆರೆಯನ್ನು ಸೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ತಿಳಿಸಿದರು.
ಚರ್ಚೆಗಳಲ್ಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್, ತುರುವೇಕೆರೆಯ ಶಾಸಕ ಮಸಾಲೆ ಜಯರಾಂ, ಮಧುಗಿರಿಯ ಶಾಸಕ ವೀರಭದ್ರಯ್ಯ, ತಿಪಟೂರು ಶಾಸಕ ಬಿಸಿ ನಾಗೇಶ್ ಪಾಲ್ಗೊಂಡರು. ಸಭೆಯಲ್ಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪ.ಸಿಇಒ. ಅನಿಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮತ್ತು ವಿವಿಧ ಹಂತದ ಅಧಿಕಾರಿವರ್ಗದವರು ಹಾಜರಿದ್ದರು..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here