ಶಿರಾ:
ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರನ್ನು ಏಕವಚನದಿಂದ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಿಂಧಿಸಿರುವುದರ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಶಿರಾ ನಗರದಲ್ಲಿ ಬುಧವಾರ ದಲಿತ ಮುಖಂಡರ ಸಭೆಯನ್ನು ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು.
ದಲಿತ ರಾಜಕೀಯ ಮುಖಂಡರೊಬ್ಬರನ್ನು ತಮ್ಮದೇ ಪಕ್ಷದಲ್ಲಿದ್ದುಕೊಂಡು ಅವಹೇಳನಾಕಾರಿಯಾಗಿ ಟೀಕಿಸಿದ್ದಲ್ಲದೆ. ಪಕ್ಷದ ಕಛೇರಿಗೂ ನುಗ್ಗಿ ಗಲಾಟೆ ಮಾಡಿದ್ದು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಪಮಾನ ಮಾಡಿದ್ದಾರೆ. ಡಾ.ಪರಮೇಶ್ವರ್ ರಾಜ್ಯದ ಅದರಲ್ಲೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು ವಿನಾ ಕಾರಣ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ಕೆ.ಎನ್.ರಾಜಣ್ಣ ಹಾಗೂ ಅವರ ಪುತ್ರರಿಂದ ನಡೆದಿದ್ದು ಈ ಸಂಬಂಧ ಜಿಲ್ಲಾ ಕೇಂದ್ರದಲ್ಲಿ ನಡೆಸಲು ತೀರ್ಮಾನಿಸಿರುವ ಪ್ರತಿಭಟನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮುರುಳೀದರ ಹಾಲಪ್ಪ ಮಾತನಾಡಿ ದಲಿತ ಸಮಾಜಕ್ಕೆ ಅಪಮಾನ ತರುವಂತಹ ಹೇಳಿಕೆಗಳನ್ನು ಕೆ.ಎನ್.ರಾಜಣ್ಣ ನೀಡುತ್ತಿದ್ದು ಅವರ ವಿರುದ್ಧ ಜೂನ್ 11 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಸುವ ಪ್ರತಿಭಟನೆಗೆ ಶಿರಾ ಭಾಗದಿಂದ ಅತಿ ಹೆಚ್ಚು ಮಂದಿ ಆಗಮಿಸಬೇಕು ಎಂದರು.
ಸುದ್ದಿಗೋಷ್ಠಿ:
ದಲಿತ ಮುಖಂಡರ ಸಭೆಯ ನಂತರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಉಪಮುಖ್ಯಮಂತ್ರಿಗಳಾದ ಪರಮೇಶ್ವರ್ ಹಾಗೂ ನನ್ನ ವಿರುದ್ಧ ಕೆ.ಎನ್.ರಾಜಣ್ಣ ಅವರ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು ಅವರ ಹಾಗೂ ಅವರ ಪುತ್ರ ರಾಜೇಂದ್ರ ವಿರುದ್ಧ ಜೂನ್ 11 ರಂದು ಪ್ರತಿಭಟನೆಯನ್ನು ಪಕ್ಷಾತೀತವಾಗಿ ಕೈಗೊಳ್ಳಲಾಗಿದೆ ಎಂದರು.
ಅವರು ಮಾಡಿದ ಅಪಮಾನದ ಹೇಳಿಕೆಗಳು ಕೇವಲ ಕಾಂಗ್ರೆಸ್ ಮುಖಂಡರಿಗೆ ಮಾಡಿದ ಅಪಮಾನವಷ್ಟೇ ಅಲ್ಲ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವೂ ಆಗಿದೆ. ರಾಜೇಂದ್ರ ಅವರು ಮಹಾ ನಗರ ಪಾಲಿಯ ಚುನಾವಣೆಯಲ್ಲಿ ಹಣ ಪಡೆದು ಟಿಕೇಟ್ ನೀಡಿರುವ ಬಗ್ಗೆ ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಎಂದ ಅವರು ಈಗ ನಡೆದ ದಲಿತ ಮುಖಂಡರ ಸಭೆಯಾಗಲಿ ಹಾಗೂ ಸುದ್ದಿಗೋಷ್ಠಿಯಾಗಲಿ ಕಾಂಗ್ರಡಸ್ ಪಕ್ಷಕಕ್ಕೆ ಸೀಮಿತವಲ್ಲ. ಇಲ್ಲಿ ಎಲ್ಲಾ ಪಕ್ಷದ ದಲಿತ ಮುಖಂಡರೂ ಪಾಲ್ಗೊಂಡಿದ್ದಾರೆ ಎಂದರು.
ಕುಂಚಿಟಿಗರ ಸಂಘದ ನಿರ್ದೇಶಕ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ ರಾಜಣ್ಣ ಅವರು ಕೇವಲ ದಲಿತರನ್ನಷ್ಟೇ ಅಲ್ಲದೆ ಕುಂಚಿಟಿಗ ಸಮುದಾಯವನ್ನು ನಿಂಧಿಸಿದ್ದಾರೆ. ಅವರ ನಿಂಧನೆಯ ವಿರುದ್ಧವೂ ಕುಂಚಿಟಿಗ ಸಮಾಜ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಪ್ರತಿಭಟನೆಗೆ ಸಹಕಾರ ನೀಡಲಿದ್ದು ಶಿರಾ ಭಾಗದ ಕುಂಚಿಟಿಗ ಸಮಾಜದ ಬಂಧುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಕೊಂಡವಾಡಿ ಚಂದ್ರಶೇಖರ್, ಮದಲೂರು ನರಸಿಂಹಮೂರ್ತಿ, ಕೋಟೆ ಲೋಕೇಶ್, ಶಶಿಧರಗೌಡ, ಆರ್.ವಿ.ಪುಟ್ಟಕಾಮಣ್ಣ, ಪಿ.ಬಿ.ನರಸಿಂಹಯ್ಯ, ಚಂದ್ರಶೇಖರಗೌಡ, ನರಸೀಯಪ್ಪ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ