ಪಾವಗಡ
ತಾಲ್ಲೂಕಿನ ಬಿ.ಕೆ.ಹಳ್ಳಿ ಗ್ರಾಮದ ವಿಎಸ್‍ಎಸ್‍ಎನ್ ಕಾರ್ಯದರ್ಶಿ ಸುಬ್ರಹ್ಮಣ್ಯರಿಗೆ ರೈತ ಸಂಘದ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಕೆಲ ದಿನಗಳ ಹಿಂದೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕೇಂದು ಬಿ.ಕೆ.ಹಳ್ಳಿ ಗ್ರಾಮಸ್ಥರು ಹಾಗೂ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರುಗಳು ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ಘಟನೆ ಜರುಗಿದೆ.
ಮುತ್ತಿಗೆಯ ನೇತೃತ್ವ ವಹಿಸಿದ್ದ ತಾ. ಹಸಿರುಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ತಾಲ್ಲೂಕಿನ ರೈತ ಸಂಘದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ವಿಎಸ್‍ಎಸ್‍ಎನ್ ಕಾರ್ಯದರ್ಶಿ ಸುಬಹ್ಮಣ್ಯರಿಗೆ ಪ್ರಾಣ ಬೆದರಿಕೆ ಹಾಕಿರುವುದು ಸರಿಯಲ್ಲ. ಗ್ರಾಮದಲ್ಲಿ ಕೆಲ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತವೆ. ಇದನ್ನೆ ಮಾನದಂಡವಾಗಿಸಿ ಕಾರ್ಯದರ್ಶಿಗೆ ಯಾರೊ ಪ್ರಾಣ ಬೆದರಿಕೆ ಹಾಕಿರುತ್ತಾರೆ. ತಾಲ್ಲೂಕಿನ ವಿಎಸ್‍ಎಸ್‍ಎನ್ ಕಾರ್ಯದರ್ಶಿ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುತ್ತಿದ್ದಾರೆಯೆ, ಇಲ್ಲವೇ ಎಂಬುದನ್ನು ಆಹಾರ ಇಲಾಖಾಧಿಕಾರಿಗಳು ಸಭೆಯನ್ನು ಕರೆದು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್‍ರಲ್ಲಿ ಒತ್ತಾಯಿಸಿ, ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ತಹಸೀಲ್ದಾರ್ ವರದರಾಜು ಮಾತನಾಡಿ, ಈ ಬಗ್ಗೆ ಆಹಾರ ಇಲಾಖೆಯಿಂದ ಸಮರ್ಪಕವಾದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮುತ್ತಿಗೆಯಲ್ಲಿ ಗ್ರಾಮಸ್ಥರಾದ ತಿಮ್ಮಪ್ಪ, ವೆಂಕಟರೆಡ್ಡಿ, ಪಿ.ಮಲ್ಲಯ್ಯ, ಅಶ್ವತ್ಥಪ್ಪ, ಶಿವಕುಮಾರ್, ಪಕೀರಪ್ಪ, ಗೋವಿಂದಪ್ಪ, ರಾಮಾಂಜಪ್ಪ, ಈರಣ್ಣ, ಪಿ.ಕುಮಾರ್, ಶೇಷಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ