ಮಳೆ ಇಳೆಗೆ ಇಳಿಯಲಿಲ್ಲ ಖುಷಿಯಿಂದ ಇಟ್ಟ ಬೆಳೆ ಕೈಗೆ ಬರೋದಿಲ್ಲ ಸಾಲ ಮಾಡೊದು ತಪ್ಪಲಿಲ್ಲ..?

ಮಧುಗಿರಿ:

       ಈಗಾಗಲೇ ಮಧುಗಿರಿ ತಾಲ್ಲೂಕಿನ ಐದು ಹೋಬಳಿಗಳು ಬರದ ಛಾಯೆಯಲ್ಲಿ ಮುಳುಗಿವೆ. ರಾಜ್ಯ ಸರಕಾರದ ಬರದ ಪಟ್ಟಿಯಲ್ಲಿ ತಾಲ್ಲೂಕು ಮತ್ತೆ ಸ್ಥಾನ ಪಡೆದುಕೊಂಡಿದ್ದರೂ ಸಹ ಯಾವುದೇ ಶಾಶ್ವತ ನೀರಾವರಿ ಯೋಜನೆ ತಾಲ್ಲೂಕಿನಲ್ಲಿ ಜಾರಿಯಾಗದ ಹೊರತು ರೈತರ ಬದುಕು ಹಸನಾಗಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

        ಈ ಬಾರಿ ವಾಡಿಕೆಯ ಮಳೆಗಿಂತ ಕಡಿಮೆ ಮಳೆಯಾಗಿದೆ. ಕೈಕೊಟ್ಟ ಮಳೆಯಿಂದಾಗಿ ಮಧುಗಿರಿ ತಾಲ್ಲೂಕಿನಲ್ಲಿ ಮಳೆಗಾಲದಲ್ಲೇ ಬಿಸಿಲಿನ ಉಷ್ಣತೆ 38 ಡಿಗ್ರಿ ದಾಟಿದೆ. ಅತಿ ಹೆಚ್ಚಾಗಿ ತಾಲ್ಲೂಕು ಮಳೆಯಾಧಾರಿತ ಪ್ರದೇಶ ಹಾಗೂ ಕಡಿಮೆ ನೀರಾವರಿ ಆಶ್ರಿತ ಪ್ರದೇಶಗಳನ್ನು ಒಳಗೊಂಡಿದ್ದು, ಈಗ ಮಳೆ ಇಳೆಗೆ ಇಳಿದಿಲ್ಲ. ಆದರೆ ಇಟ್ಟ ಬೆಳೆ ಕೈಗೆಟುಕುತ್ತಿಲ್ಲ. ಬಡ ರೈತನ ಪಾಲಿಗೆ ಯಾರು ವರವಾಗುತ್ತಾರೋ ಇಲ್ಲವೊ ಗೊತ್ತಿಲ್ಲ.

       ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಅಂರ್ತಜಲ ಮಟ್ಟ ಕುಸಿದು, ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮುಂದಿನ ಬೇಸಿಗೆಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಜನತೆ ಆತಂಕಗೊಂಡಿದ್ದು, ಒಂದು ರೀತಿ ಬರಡು ಭೂಮಿಯಾಗುವತ್ತ್ತ ತಾಲ್ಲೂಕು ಹೆಜ್ಜೆ ಹಾಕುತ್ತಿದೆ.

      ಕಳೆದ ವರ್ಷ ಈ ವೇಳೆಗಾಗಲೇ ಸಿದ್ದಾಪುರ, ಚೋಳೇನಹಳ್ಳಿ ಕೆರೆಗಳು ತುಂಬಿ ತಾಲ್ಲೂಕಿನ ದೊಡ್ಡ ಕೆರೆಯಾದ ಬಿಜವರದ ಕೆರೆ ತುಂಬಿ ಹರಿಯಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಮಾತ್ರ ಸಂಗ್ರಹವಾಗಿದ್ದು, ಮುಂದಿನ ಬೇಸಿಗೆಯ ವೇಳೆಗೆ ಜಲಕ್ಷಾಮ ತಲೆದೋರಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ.

       2015 ರಲ್ಲಿ ಉತ್ತಮ ಮಳೆಯಾಗಿ ತಾಲ್ಲೂಕಿನ 17 ಕೆರೆಗಳು ಮತ್ತು 2017 ರಲ್ಲಿ 10 ಕೆರೆಗಳು ತುಂಬಿದ್ದವು. ಈಗ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದ್ದು, ಈ ಬಾರಿಯ ಬೇಸಿಗೆಯಲ್ಲಿ ನೀರಿನ ಅಭಾವ ಶೋಚನೀಯವಾಗಲಿದೆ. ಆದರೆ ಬರುವ ದಿನಗಳಲ್ಲಿ ಮಳೆಯಾಗದಿದ್ದಲ್ಲಿ ಬಹಳಷ್ಟು ಸಮಸ್ಯೆಯಾಗಲಿದೆ.

         ಈ ಹಿಂದೆ ಭದ್ರಾ ಮೇಲ್ದಂಡೆ, ನೇತ್ರಾವತಿ ತಿರುವು ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಜನಪ್ರತಿನಿಧಿಗಳು ಪ್ರತಿ ಚುನಾವಣಾ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿ ಮತ ಗಿಟ್ಟಿಸಿದ್ದು ಬಿಟ್ಟರೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಇಲ್ಲಿಯವರೆಗೂ ಆಗಲಿಲ್ಲ. ತಾಲ್ಲೂಕಿನ ಜೀವ ನದಿಗಳಾದ ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳು ಭಾರಿ ಪ್ರಮಾಣದಲ್ಲಿ ಮಳೆ ಬಂದರಷ್ಟೇ ಹರಿಯುತ್ತವೆ. ಇಲ್ಲವಾದಲ್ಲಿ ಇಲ್ಲಿನ ಭೂಮಿ ಒಣಪ್ರದೇಶವಾಗಿ ಮಾರ್ಪಟ್ಟಿದೆ.

 ಪಟ್ಟಣದಲ್ಲಿ ನೀರಿಗೆ ಬರ :      ಮಧುಗಿರಿ ಪಟ್ಟಣದಲ್ಲಿರುವ 52 ಕೊಳವೆ ಬಾವಿಗಳಲ್ಲಿ ಹಾಗೂ ಸಿದ್ದರಕಟ್ಟೆಯಲ್ಲಿ ಅಂತರ್ಜಲ ಕುಸಿದಿದ್ದು, ಚೋಳೇನಹಳ್ಳಿ ಕೆರೆ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವ್ಯದರಿಂದ, ಪಟ್ಟಣಕ್ಕೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಮಳೆಗಾಲದಲ್ಲೇ ಪರಿಸ್ಥಿತಿ ಹೀಗಾದರೆ ಬೇಸಿಗೆಯಲ್ಲಿ ನೀರಿಗಾಗಿಯೇ ಪರದಾಡುವ ಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಲಿದ್ದು ನೀರಿನ ಟ್ಯಾಂಕರ್‍ಗಳು ಸದ್ದು ಮಾಡಲಿವೆ.

 ಎತ್ತಿನಹೊಳೆ ಯೋಜನೆ :
 

  ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 12.500 ಕೋಟಿ ರೂಗಳ ವೆಚ್ಚದಲ್ಲಿ ಸಕಲೇಶಪುರದ ಬಳಿ ಕಾಮಗಾರಿ ಅನುಷ್ಠಾನಗೊಳಿಸಿದ್ದರು. ಇಲ್ಲಿಂದ ನೀರನ್ನು ಲಿಫ್ಟ್ ಮಾಡುವುದರ ಜತೆಗೆ ತಾಲ್ಲೂಕಿನ 52 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವೀಕ್ಷಿಸಲು ಹಿಂದಿನ ಶಾಸಕ ಕೆ.ಎನ್. ರಾಜಣ್ಣನವರು ನೂರಾರು ವಾಹನಗಳಲ್ಲಿ ಸಾವಿರಾರು ರೈತರನ್ನು ಕಾಮಗಾರಿ ಸ್ಥಳಕ್ಕೆ ಕರೆದೊಯ್ದು, ಕಾಮಗಾರಿ ನಡೆಯುತ್ತಿರುವುದನ್ನು ಖಾತ್ರಿ ಪಡಿಸಿ, ಎತ್ತಿನ ಹೊಳೆ ಕಾಮಗಾರಿಯ ಚಿತ್ರಣ ತಾಲ್ಲೂಕಿನ ರೈತರ ಮುಂದಿಟ್ಟಿದ್ದರು. ಇಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಯೋಜನೆಯ ಬಗ್ಗೆ ವಿರೋಧ ವ್ಯಕ್ತ ಪಡಿಸುವ ಹೇಳಿಕೆ ನೀಡಿದ್ದರಿಂದ, ಅಧಿಕಾರಿಗಳು ಇನ್ನೂ ಗೊಂದಲದಲ್ಲಿದ್ದು ಕಾಮಗಾರಿಯನ್ನು ಪೂರ್ಣಗೊಳಿಸಲು ಹಿಂದು ಮುಂದು ನೋಡುತ್ತಿದ್ದಾರೆ. ಹಿಂದಿನ ಸರಕಾರ ಜಾರಿ ಮಾಡಿದ ಅನ್ನ ಭಾಗ್ಯ ಯೋಜನೆಯಿಂದಾಗಿ ಒಪ್ಪತ್ತಿನ ಊಟಕ್ಕೇನೋ ಬರವಿಲ್ಲವಾಗಿದ್ದು, ಚುನಾವಣಾ ಸಂದರ್ಭದಲ್ಲಿ ತನ್ನ ಹಿತ ಕಾಯುತ್ತೆನೆಂದು ಹೇಳಿದ ಜನಪ್ರತಿನಿಧಿಗಳನ್ನು ಶಪಿಸಿ ಮಳೆಯಾದರೆ ಜಾನುವಾರುಗಳಿಗಾದರೂ ಹುಲ್ಲು ದೊರಕುತ್ತಾ ಎಂದು ಅನ್ನದಾತ ಚಿಂತಾಕ್ರಾಂತನಾಗಿ ಕುಳಿತಿದ್ದಾನೆ.

 

Recent Articles

spot_img

Related Stories

Share via
Copy link
Powered by Social Snap