ಚರ್ಚಾಸ್ಪದವಾದ ಪಾಲಿಕೆ ಆರ್ಥಿಕ ದುಸ್ಥಿತಿ: ಮಾಜಿ ಸದಸ್ಯರಿಗೆ ‘ಗೌರವ‘ನ’ವೂ ಬಾಕಿ!

0
22

ತುಮಕೂರು

      ಸಾಮಾನ್ಯವಾಗಿ ಸಾರ್ವಜನಿಕರು ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆಂಬುದು ಯಾವಾಗಲೂ ಕೇಳಿಬರುವ ಸಂಗತಿ. ಆದರೆ ತುಮಕೂರು ಮಹಾನಗರ ಪಾಲಿಕೆಯೇ ಈಗ ಈ ಹಿಂದಿನ ಪಾಲಿಕೆ ಸದಸ್ಯರಾಗಿದ್ದವರಿಗೆ ಮಾಸಿಕ ಗೌರವಧನವನ್ನೂ ನೀಡಲಾಗದೆ ಬಾಕಿ ಉಳಿಸಿಕೊಂಡಿದೆಯೆಂಬ ಸಂಗತಿ ಬೆಳಕಿಗೆ ಬಂದಿದ್ದು, ಇದೀಗ ಸಾರ್ವಜನಿಕ ಚರ್ಚಾವಿಷಯ ಆಗಿದೆ.

      ‘ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ಚುನಾಯಿತ ಸದಸ್ಯರುಗಳು ಇರುತ್ತಾರೆ . ಸರ್ಕಾರದಿಂದ ನಾಮ ನಿರ್ದೇಶನಗೊಂಡ ಐವರು ಸದಸ್ಯರುಗಳೂ ಇರುತ್ತಾರೆ. ಇವರೆಲ್ಲರಿಗೂ ಪ್ರತಿ ತಿಂಗಳೂ ಮಹಾನಗರ ಪಾಲಿಕೆಯಿಂದ ನಿಗದಿತ ಗೌರವಧನ ಸಂದಾಯವಾಗುತ್ತದೆ. ಇದು ನಿಯಮ. ಆದರೆ ಕಳೆದ ನಾಲ್ಕೂವರೆ ತಿಂಗಳಿಂದ ಇವರ‌್ಯಾರಿಗೂ ಗೌರವ‘ನ ಲಭಿಸಿಲ್ಲ’ ಎಂಬುದೀಗ ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಚರ್ಚೆಗೆಡೆ ಮಾಡಿಕೊಟ್ಟಿದೆ.

      ‘‘ಪ್ರತಿ ಸದಸ್ಯರಿಗೂ ಮಾಸಿಕ 6000 ರೂ. ಗೌರವ‘ನವನ್ನು ಸರ್ಕಾರ ನಿಗದಿಗೊಳಿಸಿದೆ. ಮೇಯರ್ ಮತ್ತು ಉಪಮೇಯರ್ ಅವರಿಗೆ ಗೌರವ‘ನ ಅಧಿಕವಿದ್ದು ಅದನ್ನು ಪರಿಗಣಿಸದೆ ಕೇವಲ 6000 ರೂ.ಗಳಂತೆಯೇ ಲೆಕ್ಕ ಹಾಕಿದರೂ, ಒಂದು ತಿಂಗಳಿಗೆ ಒಟ್ಟು 40 ಸದಸ್ಯರುಗಳಿಂದ ಗೌರವ‘ನವು ಒಟ್ಟಾರೆ 2,40,000 ರೂ.ಗಳಾಗುತ್ತದೆ. 4 ತಿಂಗಳುಗಳಿಗೆ ಈ ಮೊತ್ತ 9 ಲಕ್ಷ 60 ಸಾವಿರ ರೂ. ಆಗುತ್ತದೆ.

       ಕಳೆದ ಚುನಾಯಿತ ಮಂಡಲಿಯ ಅಧಿಕಾರಾವಧಿಯು ಸೆಪ್ಟೆಂಬರ್ 16 ರವರೆಗೂ ಇದ್ದುದರಿಂದ ಆ 15 ದಿನಗಳಿಗೆ ಲೆಕ್ಕ ಹಾಕಿದರೆ ಈ ಮೊತ್ತ 1,20,000 ರೂ.ಗಳಾಗುತ್ತದೆ. ಇವೆಲ್ಲ ಸೇರಿದರೆ ಒಟ್ಟಾರೆ 10 ಲಕ್ಷ 80 ಸಾವಿರ ರೂ. ಆಗುತ್ತದೆ. ಅಷ್ಟು ಹಣವನ್ನು ಮಹಾನಗರ ಪಾಲಿಕೆಯು ಪಾವತಿಸದೆ ಇನ್ನೂ ಸಹ ಬಾಕಿ ಉಳಿಸಿಕೊಂಡಿದೆ’’ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ಪಾಲಿಕೆ ಸದಸ್ಯರೊಬ್ಬರು ಮಂಗಳವಾರ (ಅ.9) ಹೇಳಿದ್ದಾರೆ.

       ‘‘ಒಬ್ಬ ಸದಸ್ಯನಿಗೆ 6000 ರೂ.ಗಳಂತೆ 4 ತಿಂಗಳಿಗೆ 24,000 ರೂ.ಗಳಾಗುತ್ತದೆ. ಇನ್ನು 15 ದಿನಗಳಿಗೆ 3,000 ರೂ.ಗಳಾಗುತ್ತದೆ. ಅಂದರೆ ಒಟ್ಟು 27,000 ರೂ.ಗಳನ್ನು ಪಾಲಿಕೆಯು ಪ್ರತಿ ಸದಸ್ಯರಿಗೂ ಬಾಕಿ ಉಳಿಸಿಕೊಂಡಂತಾಗಿದೆ. ಮೇ ತಿಂಗಳಿನಿಂದ ಈ ಮೊತ್ತ ಬಾಕಿ ಇದೆ’’ ಎಂದು ಅವರು ಲೆಕ್ಕಹಾಕಿ ತಿಳಿಸಿದರು.

         ‘‘ಹಿಂದಿನ ನಗರ ಸಭೆಯಲ್ಲಿ ಗೌರವ‘ನವನ್ನು ನಗದು ರೂಪದಲ್ಲಿ ಸದಸ್ಯರ ಕೈಗೆ ಕೊಡುವ ಪದ್ಧತಿ ಇತ್ತು. ಆದರೆ ಕಾಲಾನಂತರದಲ್ಲಿ ಸದಸ್ಯರ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಜಮೆ ಮಾಡುವ ಪದ್ಧತಿ ಜಾರಿಗೆ ಬಂತು’’ ಎಂದು ತಿಳಿಸಿರುವ ಅವರು, ‘‘ಪಾಲಿಕೆಯೇ ಈಗ ಸದಸ್ಯರಿಗೆ ಈ ರೀತಿ ಬಾಕಿ ಉಳಿಸಿಕೊಂಡಿರುವುದು ವಿಚಿತ್ರವಾಗಿದೆ’’ ಎಂದು ವಿಷಾದದಿಂದ ಉದ್ಗರಿಸಿದರು.

          ಇದು ಮಾಜಿ ಆಗಿರುವ ಸದಸ್ಯರ ಕಥೆ ಆದರೆ, ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಮುಂದುವರೆದಿರುವ ಐವರು ಸದಸ್ಯರಿಗೆ ಸಹ ಈವರೆಗೆ ಗೌರವಧನ ಜಮೆ ಆಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಒಟ್ಟಾರೆ ಪಾಲಿಕೆಯು ಆರ್ಥಿಕವಾಗಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಅದರ ಪರಿಣಾಮವೇ ಇದೆಂದು ಬಣ್ಣಿಸಲಾಗುತ್ತಿದೆ.

          ತೀರಾ ಇತ್ತೀಚೆಗಷ್ಟೇ ನಾಲ್ಕು ತಿಂಗಳುಗಳಿಂದ ವೇತನ ಆಗಿಲ್ಲವೆಂದು ಕಸವಿಲೇವಾರಿ ವಾಹನಗಳ ಚಾಲಕರುಗಳು ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸಿದ್ದರು. ಆಗ ನಡೆದ ಮಾತುಕತೆ ಸಂದ‘ರ್ದಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಗೆ 5 ಕೋಟಿ 40 ಲಕ್ಷ ರೂ. ಬಾಕಿ ಇದೆಯೆಂಬ ಸಂಗತಿ ಬೆಳಕಿಗೆ ಬಂತು. ಕೊನೆಗೆ ಅವರಿಗೆ ತಕ್ಷಣಕ್ಕೆ 50 ಲಕ್ಷ ರೂಗಳನ್ನು ಜಮೆ ಮಾಡುವ ನಿರ್ಧಾರಕ್ಕೆ ಬರಲಾಯಿತಾದರೂ, ಕೇವಲ 20 ಲಕ್ಷ ರೂ.ಗಳನ್ನು ಮಾತ್ರ ಅಂದು ಜಮೆ ಮಾಡಲು ಪಾಲಿಕೆಗೆ ಸಾಧ್ಯವಾಯಿತು ಎಂದು ವಿವಿಧ ಮೂಲಗಳಲ್ಲಿ ಹೇಳಲಾಗುತ್ತಿದ್ದು, ಪಾಲಿಕೆಯ ಆರ್ಥಿಕ ದುಸ್ಥಿತಿಯು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

LEAVE A REPLY

Please enter your comment!
Please enter your name here