ಹೊಸಪೇಟೆ :
ಬಡ ಹಾಗು ಮಧ್ಯಮ ವರ್ಗದವರಿಗೆ ಶುದ್ದ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ನಗರದ ನಾನಾ ಭಾಗಗಳಲ್ಲಿ ನಮ್ಮ ಸಂಘದಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಘಟಕಗಳು ಬಂದ್ ಆಗಿ ಶುದ್ದ ನೀರು ಸಿಗದೇ ಜನ ಪರದಾಡುವಂತಾಗಿದೆ ಎಂದು ಸರ್ವಧರ್ಮ ಕ್ರಿಯಾಶೀಲ ಸಮಾಜ ಸೇವಕರ ಸಂಘದ ಅಧ್ಯಕ್ಷ ಡಾ.ವಿ.ಸಿ.ಮಂಟೂರಮಠ ಹಾಗು ಗೌರವಾಧ್ಯಕ್ಷ ಕಾಸಿಟ್ಟಿ ಉಮಾಪತಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ನಗರದ ಹಲವು ಭಾಗಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಏಕಾಏಕಿ ಹೀಗೆ ಬಂದ್ ಮಾಡಿದರೆ ಹೇಗೆ ? ಎಂದ ಅವರು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೀರಿನ ಘಟಕಗಳನ್ನು ತೆರೆಯಲಾಗಿತ್ತು. ಆದರೆ ಅಧಿಕಾರಿಗಳು ವಿನಾಕಾರಣ ಬಂದ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರದ ನೀತಿ ನಿಯಮಗಳ ಪ್ರಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಕೆಲವು ಪಟ್ಟಭದ್ರರು ಘಟಕಗಳನ್ನು ನಡೆಸದಂತೆ ಕುಮ್ಮಕ್ಕು ನೀಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತವು ಸಾರ್ವಜನಿಕರ ಹಿತಾಸಕ್ತಿ ಅನುಗುಣವಾಗಿ ನೀರಿನ ಘಟಕಗಳನ್ನು ತೆರೆಯಲು ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.ಸಂಘದ ಪದಾಧಿಕಾರಿಗಳಾದ ದಾದಾವಲಿ, ಅಜಯ್ ಹಿರೇಮಠ, ಗುರುರಾಜ್, ಬಸವರಾಜ, ಮದನಸಿಂಗ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
