ರೆವಿನ್ಯೂ ಆಸ್ತಿಗೂ ಖಾತೆಗಾಗಿ ಧರಣಿ

ತುಮಕೂರು
   ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರೆವಿನ್ಯೂ ಆಸ್ತಿಗಳಿಗೂ ಖಾತೆ ಮಾಡಿಕೊಟ್ಟು, ನಮೂನೆ-3 ನ್ನು ನೀಡಬೇಕು ಎಂದು ಆಗ್ರಹಿಸಿ ಪಾಲಿಕೆಯ ಸದಸ್ಯರು ಸಭೆಯಲ್ಲಿ ಧರಣಿ ನಡೆಸಿದ ಅಪರೂಪದ ಪ್ರಸಂಗ ನಡೆಯಿತು.ಮೇಯರ್ ಲಲಿತಾ ರವೀಶ್ (ಜೆಡಿಎಸ್) ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪಾಲಿಕೆಯ ಮುಂದುವರೆದ ಐದನೇ ದಿನದ ಸಾಮಾನ್ಯ ಸಭೆಯು ರಾತ್ರಿ ಅಂತ್ಯಗೊಳ್ಳುವ ಸಮಯದಲ್ಲಿ ಅನಿರೀಕ್ಷಿತವಾಗಿ ಈ ವಿಷಯ ಪ್ರಸ್ತಾಪಗೊಂಡು ಈ ಬೆಳವಣಿಗೆ ಉಂಟಾಯಿತು.
   ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ (ಕಾಂಗ್ರೆಸ್-8ನೇ ವಾರ್ಡ್) ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಈ ಹಿಂದೆ ಪಾಲಿಕೆಗೆ ಆಗಿನ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಬಂದಿದ್ದಾಗ ಹಾಗೂ ಹಿಂದಿನ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರಸ್ತುತ ಸಭೆಯ ಮೊದಲನೇ ದಿನವೂ ಪ್ರಸ್ತಾಪಿಸಿದ್ದ ಅವರು ಇದೀಗ ಮತ್ತೊಮ್ಮೆ ವಿಷಯವನ್ನು ಚರ್ಚೆಗೆ ತಂದರು.
ಪಾಲಿಕೆ ವ್ಯಾಪ್ತಿಗೆ 22 ಹಳ್ಳಿಗಳು ಬರುತ್ತವೆ. ಆದರೆ ಇಂದು ಅಲ್ಲಿನ ಬಡವರು ಅತಂತ್ರ ಸ್ಥಿತಿಯಲ್ಲಿದ್ದಾರೆ.
   ಅವರ ವಾಸದ ಮನೆಗಳಿಗೆ ಖಾತೆ ಆಗುತ್ತಿಲ್ಲ. ನಮೂನೆ-3 ಸಿಗುತ್ತಿಲ್ಲ. ಇದರಿಂದ ಆ ಆಸ್ತಿಯನ್ನು ಅವರು ಮಾರಲಾಗದೆ, ತುರ್ತು ಸಂದರ್ಭಗಳಲ್ಲಿ ತೊಂದರೆಗೆ ಸಿಲುಕುವಂತಾಗುತ್ತಿದೆ. ಈ ಬಗ್ಗೆ ನಾವು ಅನೇಕ ಬಾರಿ ಸಭೆಗಳಲ್ಲಿ ಆಗ್ರಹಿಸಿದರೂ, ಪ್ರಯೋಜನವಾಗುತ್ತಿಲ್ಲ. ಸದರಿ ಆಸ್ತಿಗಳಿಗೆ ಒಂದು ಅವಧಿಗೆ ಮಾತ್ರ ದುಪ್ಪಟ್ಟು ದಂಡ ಕಟ್ಟಿಸಿಕೊಂಡು, ಖಾತೆ ಮಾಡಿಕೊಟ್ಟು, ನಮೂನೆ-3ನ್ನು ಕೊಡಬೇಕು ಎಂಬ ಬೇಡಿಕೆಯನ್ನು ಸೈಯದ್ ನಯಾಜ್ ಮುಂದಿಟ್ಟಾಗ, ಇತರೆ ಹಲವು ಸದಸ್ಯರುಗಳೂ ದನಿಗೂಡಿಸಿದರು.
    ನಯಾಜ್ ಸೇರಿದಂತೆ ಸಭೆಯಲ್ಲಿದ್ದ ಸುಮಾರು 15 ಸದಸ್ಯರುಗಳು ಮೇಯರ್ ಆಸನದ ಮುಂದಿನ ವೇದಿಕೆಯಲ್ಲೇ ಕುಳಿತು ಧರಣಿ ಆರಂಭಿಸಿದರು.ಪಾಲಿಕೆಯ ಪ್ರಭಾರ ಆಯುಕ್ತ ಯೋಗಾನಂದ್ ಇದಕ್ಕೆ ಉತ್ತರಿಸುತ್ತ, ತಾವು ಈಗ ಇಲ್ಲಿ ಪ್ರಭಾರ ಇರುವುದರಿಂದ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ಮೂರು ದಿನಗಳಲ್ಲಿ ಇಲ್ಲಿಗೆ ಹೊಸ ಆಯುಕ್ತರು ಬರುವುದರಿಂದ, ಅವರು ಬಂದ ಬಳಿಕ ಈ ವಿಷಯದಲ್ಲಿ ನಿರ್ಧರಿಸುತ್ತಾರೆ ಎಂದರು. 
 
   ಕಂದಾಯ ವಿಭಾಗದ ಅಧಿಕಾರಿಗಳೂ ಇದಕ್ಕೆ ಪ್ರತಿಕ್ರಿಯಿಸುತ್ತ, ರೆವಿನ್ಯೂ ಆಸ್ತಿಗಳಿಗೆ ನಮೂನೆ-3 ಕೊಡಲು ಸಾಧ್ಯವಿಲ್ಲ. ಕಾರಣ ಸರ್ಕಾರಿ ಸುತ್ತೋಲೆ, ನಿಯಮಾವಳಿಗಳು ಇದಕ್ಕೆ ನಿರ್ಬಂಧ ವಿಧಿಸಿವೆ. ಆದ್ದರಿಂದ ನಿಮ್ಮ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಿದ್ದು, ಸರ್ಕಾರದಿಂದ ಬರುವ ನಿರ್ದೇಶನ ಅನುಸರಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದಷ್ಟೇ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಸದಸ್ಯರ ಧರಣಿ ಹಾಗೂ ಸಭೆಯು ಮುಕ್ತಾಯಗೊಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link