ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಕಾಣಲು ಸಾಧ್ಯ

ತುರುವೇಕೆರೆ

    ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡಿದಲ್ಲಿ ಬ್ಯಾಂಕ್ ಅಭಿವೃದ್ಧಿ ಹೊಂದಲಿದೆ. ಸರ್ಕಾರದ ಸಾಲಮನ್ನಾ ಯೋಜನೆಗಳು ಅನುಷ್ಠಾನಗೊಂಡಲ್ಲಿ ಅವುಗಳನ್ನು ರೈತರಿಗೆ ತಲುಪಿಸಲಾಗುತ್ತದೆ. ರೈತರು ಸರ್ಕಾರದ ಯೋಜನೆಗಳನ್ನು ಕಾಯದೆ ಸಕಾಲದಲ್ಲಿ ಹಣ ಮರುಪಾವತಿ ಮಾಡಿದಲ್ಲಿ ಹಳೆ ಸಾಲಗಳನ್ನು ನವೀಕರಿಸಿ ಹೊಸ ಸಾಲ ಪಡೆಯಲು ಸಾಧ್ಯವಾಗುತ್ತದೆ ಎಂದು ಬ್ಯಾಂಕಿನ ವಿಶೇಷ ಆಡಳಿತಾಧಿಕಾರಿ ಕೆ.ಆರ್.ರಾಜು ತಿಳಿಸಿದರು.

     ಅವರು ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತುರುವೇಕೆರೆ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ನಡೆದ 2017-18 ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

       ಸರ್ಕಾರಿ ಸಬ್ಸಿಡಿ ದರದ ಶೇ.3 ರ ರಿಯಾಯಿತಿ ಸೆಪ್ಟೆಂಬರ್ ಅಂತ್ಯದವರೆಗೆ ಅವಕಾಶವಿದ್ದು ಗಡುವು ಮೀರಿದಲ್ಲಿ ಶೇ.14 ಬಡ್ಡಿಯಂತೆ ರೈತರು ಕಟ್ಟಬೇಕಾಗುತ್ತದೆ. ಆದ್ದರಿಂದ ಸಕಾಲದಲ್ಲಿ ರೈತರು ಸಾಲ ಮರುಪಾವತಿಸಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಿ ಎಂದು ಕಿವಿ ಮಾತು ಹೇಳಿದರು.

       ಬ್ಯಾಂಕ್ ವ್ಯವಸ್ಥಾಪಕ ಸುರೇಶ್ 2017-18 ರ ಸಭಾನಡಾವಳಿ, ಆಯವ್ಯಯ ಮಂಡಿಸಿ ಮುಂದಿನ ಸಾಲಿನ ಬಜೆಟ್ ಅನುಮೋದನೆ ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಕೆಲ ಸದಸ್ಯರ ಆರೋಪ ಪ್ರತ್ಯಾರೋಪಗಳು ಚರ್ಚೆಯಾದವು. ನಂತರ ಚುನಾವಣೆ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಾಗಿ ಮುಂದಿನ ಬಾರಿ ಹೋಬಳಿವಾರು ಚುನಾವಣೆಯಲ್ಲಿ ಕಸಬಾ ಕ್ಕೆ 6, ದಬ್ಬೇಘಟ್ಟ 3, ದಂಡಿನಶಿವರ ಹಾಗೂ ಮಾಯಸಂದ್ರಕ್ಕೆ ತಲಾ 2 ಸ್ಥಾನಗಳು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬ ಆಯ್ಕೆ ಸೇರಿದಂತೆ ಒಟ್ಟು 14 ಸದಸ್ಯರ ಆಯ್ಕೆಗೆ ಅವಕಾಶವಿದ್ದು, ಪ್ರಸ್ತುತ ಅನಿರೀಕ್ಷಿತ ಆಡಳಿತ ಮಂಡಳಿ ರದ್ದಾಗಿರುವ ಕಾರಣ ನೂತನ ಆಡಳಿತ ಮಂಡಳಿ ಚುನಾವಣೆ ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಇರಿಸಲಾಗಿದೆ ಎಂದರು.

       ಈ ಸಂದರ್ಭದಲ್ಲಿ ಸಹಾಯಕ ನಿಬಂಧಕ ಕಾವಲೀಗೌಡ, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರುಗಳಾದ ವಿಶ್ವೇಶ್ವರಯ್ಯ, ಟಿ.ಎಸ್.ದಾನಿಗೌಡ , ಟಿ.ಎಸ್.ಬೋರೇಗೌಡ, ಪ್ರಸನ್ನಕುಮಾರ್, ಕೊಳಾಲ ನಾಗರಾಜು, ಉಗ್ರೇಗೌಡ, ಕೆಂಪರಾಜು, ರಾಮಯ್ಯ, ಬ್ಯಾಂಕ್ ಸಿಬ್ಬಂದಿಗಳಾದ ನೇತ್ರ, ದಿವಾಕರ್, ಶಿವಕುಮಾರ್, ಭಾಸ್ಕರ್, ಬಸವರಾಜು, ರವಿಕುಮಾರ್, ಲಕ್ಷ್ಮೀ, ಚೇತನ್ ಸೇರಿದಂತೆ ನೂರಾರು ಷೇರುದಾರರು ಪಾಲ್ಗೊಂಡಿದ್ದರು

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link