ಸ್ಲಂ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ…!!!

0
7

ತುಮಕೂರು

        ನಗರದ ಮಾರಿಯಮ್ಮನಗರದಲ್ಲಿ ವಸತಿ ಸಂಕೀರ್ಣ ನಿರ್ಮಾಣ ಮಾಡಲು ವಿರೋಧಿಸುತ್ತಿರುವ ದಲಿತ ವಿರೋಧಿಗಳ ವಿರುದ್ಧ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ ಧಿಕ್ಕಾರ ಕೂಗಿದರು.

        ನಗರದ ಪಾಲಿಕೆ ಕಚೇರಿಯಲ್ಲಿ ಜಮಾವಣೆಗೊಂಡಿದ್ದ ಸ್ಲಂ ನಿವಾಸಿಗಳು ಪಾಲಿಕೆ ಆಯಕ್ತರಿಗೆ ಮನವಿ ಸಲ್ಲಿಸಿದರು. ನಂತರ ಟೌನ್‍ಹಾಲ್ ವೃತ್ತದಲ್ಲಿ ಮಾನವ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

        ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ನಗರದ 14ನೇ ವಾರ್ಡ್‍ನಲ್ಲಿರುವ ಮಾರಿಯಮ್ಮ ನಗರದ ನಿವಾಸಿಗಳಿಗೆ ಸ್ಮಾರ್ಟ್‍ಸಿಟಿ ಯೋಜನೆಯಿಂದ 87 ಕುಟುಂಬಗಳಿಗೆ ವಸತಿ ಕಲ್ಪಿಸಲು ಸಮೀಕ್ಷೆ ನಿರ್ಮಾಣ ಮಾಡಲಿಕ್ಕೆ 10 ಕೋಟಿ ಮೀಸಲಿಟ್ಟು ಈ ಬಗ್ಗೆ ಟೆಂಡರ್ ನಡೆದು ಅನುಮೋದನೆ ಕೂಡ ಆಗಿದೆ. ಆದರೆ ಈ ಅನುಮೋದನೆಯನ್ನು ತಡೆಯಬೇಕು ಎಂದು ಪಾಲಿಕೆ ಸದಸ್ಯರ ಸಂಬಂಧಿಯೊಬ್ಬರು ಹಣದ ಬೇಡಿಕೆಯನ್ನಿಟ್ಟು ಜನರಿಗೆ ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡಲಿಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ. ಇದನ್ನು ಕೈಬಿಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

         ದಿಬ್ಬೂರು ವಸತಿ ಸಮುಚ್ಛಯದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, 1200 ಮನೆಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ. ಕುಡಿಯುವ ನೀರು ಸಿಗದೆ ಜನ ಪರದಾಡುತ್ತಿದ್ದಾರೆ. ನೀರಿನ ಸಮಸ್ಯೆ ನೀಗಿಸಲು 2 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಬೇಕು. ದಿನನಿತ್ಯದ ಬಳಕೆಗೆ ಅಗತ್ಯವಾದ ನೀರು ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ಮಕ್ಕಳ ಸಮಗ್ರ ಬೆಳವಣಿಗೆಗೆ ಅಂಗನವಾಡಿಗಳು ಅಗತ್ಯವಿದ್ದು, ಇಲ್ಲಿನ ಜನಸಂಖ್ಯೆಗನುಗುಣವಾಗಿ ಅಂಗನವಾಡಿಗಳನ್ನು ಪ್ರಾರಂಭ ಮಾಡಬೇಕು. ದಿಬ್ಬೂರು ವಸತಿ ಸಮುಚ್ಛಯಗಳಿಂದ ಶಾಲಾ ಕಾಲೇಜುಗಳಿಗೆ ಹಾಗೂ ದಿನನಿತ್ಯ ಕೆಲಸಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು ನಗರ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸಬೇಕು.

        ವಸತಿ ಸಮುಚ್ಛಯದಲ್ಲ ಯುಜಿಡಿ ಸಮಸ್ಯೆ ಉದ್ಭವವಾಗಿದ್ದು, ಅಲ್ಲಿ ಜನರು ವಾಸ ಮಾಡಲು, ಓಡಾಡಲು ಆಗದೆ ತುಂಬಾ ತೊಂದರೆಯಾಗಿದೆ. ಜತೆಗೆ ದೇವರಾಜು ಅರಸು ಬಡಾವಣೆಯ ಸಮೀಪದಲ್ಲಿ ಯಾವುದೇ ವೈದ್ಯಕೀಯ ಕೇಂದ್ರಗಳು ಇಲ್ಲದೆ ಇರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾದಾಗ ತುಮಕೂರು ನಗರ ಕೇಂದ್ರಕ್ಕೆ ಬರಬೇಕಾಗಿದೆ. ಈ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆಯಿದ್ದು, ಪಾಲಿಕೆ ಅನುದಾನದಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವಂತೆ ಒತ್ತಾಯಮಾಡಿದ್ದಾರೆ.ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಕೊಳಗೇರು ಸಮಿತಿಯ ಉಪಾಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ ಸೇರಿದಂತೆ ನೂರಾರು ಮಂದಿ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here