ಮೈತ್ರಿ ಅಭ್ಯರ್ಥಿ ಪರ ಮತ ಯಾಚಿಸುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಶಾಸಕ ಮನವಿ

ಶಿರಾ

     ರಾಜ್ಯದಲ್ಲಿ ಜನಪರ ಹಾಗೂ ರೈತಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಯಾವುದೇ ಭಿನ್ನಪ್ರಾಯವಿಲ್ಲದೆ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಬಿ.ಎನ್.ಚಂದ್ರಪ್ಪ ಗೆಲುವಿಗೆ ಶ್ರಮಿಸಬೇಕು.

       ರಾಜ್ಯ ಸರ್ಕಾರ ಜಾರಿಗೆ ತಂದ ರೈತರ ಸಾಲಮನ್ನಾ, ಬೀದಿಬದಿ ವ್ಯಾಪಾರಿಗಳಿಗೆ ಸಾಲ, ಮಾತೃಪೂರ್ಣ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತ ಬರುವಂತೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ ಎಂದು ರಾಜ್ಯ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.

       ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ, ನಾರಾಯಣಪುರ, ಹುಣಸೆಹಳ್ಳಿ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಅವರು ಅಬ್ಬರದ ಪ್ರಚಾರ ನಡೆಸಿದರು.

        ರಾಜ್ಯದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಾಂಗೈ-ಜೆಡಿಎಸ್ ವರಿಷ್ಠರು ಮಹತ್ವದ ತೀರ್ಮಾನ ಕೈಗೊಂಡು, ಮೈತ್ರಿ ಅಭ್ಯರ್ಥಿಯನ್ನು ಚಿತ್ರದುರ್ಗ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದು, ಅವರನ್ನು ಬಹುಮತಗಳಿಂದ ಆರಿಸಿ ಕಳಿಸುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ನಿಷ್ಠೆಯಿಂದ ಮಾಡಬೇಕು ಎಂದರು.

       ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನರೇಂದ್ರ ಮೋದಿಯ ಸರ್ವಧಿಕಾರಿ ದೋರಣೆ ಅಂತ್ಯಗೊಳ್ಳಬೇಕಿದ್ದು, ರಾಷ್ಟ್ರದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಕೋಮುವಾದಿ ಬಿಜೆಪಿ ಪಕ್ಷ ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರದಂತೆ ತಡೆಯುವ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷದೊಂದಿಗೆ ಇತರೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಮತ ನೀಡುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತದಾರರಲ್ಲಿ ಮನವಿ ಮಾಡಿದರು.

      ದೇಶದಲ್ಲಿ ಮೋದಿ ಪರ ಅಲೆ ಇದೆ ಎಂಬುದು ಭ್ರಮೆ, 60 ವರ್ಷ ದೇಶದಲ್ಲಿ ಸುಭದ್ರ ಸರ್ಕಾರ ನೀಡಿದ ಕಾಂಗ್ರೆಸ್ ಬಡತನ ನಿರ್ಮೂಲನೆ ಮಾಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು ಕಾಂಗ್ರೆಸ್ ವಿನಹ, ಕೋಮುವಾದಿ ಪಕ್ಷವಲ್ಲ. ಮೈತ್ರಿ ಅಭ್ಯರ್ಥಿ ಬೆಂಬಲಿಸಿ ದೇಶವನ್ನು ಕೋಮುವಾದದಿಂದ ರಕ್ಷಿಸಬೇಕು ಎಂದು ಜಯಚಂದ್ರ ತಿಳಿಸಿದರು.

        ಮಾಜಿ ಶಾಸಕ ಸಾ ಲಿಂಗಯ್ಯ, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು, ಎಪಿಎಂಸಿ ಅಧ್ಯಕ್ಷ ನರಸಿಂಹೆಗೌಡ, ಕೃಷಿಕ ಸಮಾಜದ ಕೃಷ್ಣೆಗೌಡ, ಬೆಸ್ಕಾಂ ಕೃಷ್ಣಪ್ಪ, ಎನ್.ಸಿ.ದೊಡ್ಡಯ್ಯ, ತಾಪಂ ಸದಸ್ಯೆ ರೇಣುಕಮ್ಮ, ಭೂವನಹಳ್ಳಿ ಸತ್ಯನಾರಾಯಣ, ಜಯರಾಮಯ್ಯ, ಶಾಂತಮ್ಮ ಗುರುದತ್ತಾತ್ರೇಯ, ಭಾನುಪ್ರಕಾಶ್, ಗೋವಿಂದಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link