ಶಿರಾ:
ಸಿರಾ ಅನ್ನುವ ಹೆಸರು ಕೇಸರಿಬಾತಿನಷ್ಟು ಎಷ್ಟು ಸಿಹಿಯಾಗಿದೆಯೋ ಈ ಸಿರಾ ಅನ್ನುವ ನಗರದ ಮೂಲ ಸಮಸ್ಯೆಗಳು ಮಾತ್ರಾ ಅಷ್ಟೇ ಕಹಿಯಾಗಿ ಜನ ಸಾಮಾನ್ಯರನ್ನು ಕಿತ್ತು ತಿನ್ನುವಂತಹ ಪರಿಸ್ಥಿತಿ ಕಳೆದೊಂದು ವರ್ಷದಿಂದ ನಡೆಯುತ್ತಲೇ ಇದೆ.ಇಲ್ಲೊಂದು ನಗರಸಭೆ, ನಗರಸಭೆಗೊಂದು 31 ಮಂದಿ ಸದಸ್ಯರು ಇದ್ದರಾದರೂ ಕಳೆದೊಂದು ವರ್ಷದಿಂದ ಇದ್ದ ಸದಸ್ಯರು ಇದೀಗ ಮಾಜಿಯಾಗಿದ್ದು ಇಡೀ ನಗರಸಭೆಯ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ.
ಮಾಜಿ ಅನ್ನಿಸಿಕೊಂಡವರನೇಕರು ಮನೆಯಲ್ಲಿ ಕೂತು ನಗರಸಭೆಯ ಸಂಬಂಧಗಳನ್ನೇ ಕಳೆದುಕೊಂಡಂತೆ ಮೈಮರೆತು ಕೂತಿದ್ದಾರೆ. ಮುಂದಿನ ಚುನಾವಣೆಯ ಆಸೆ ಇರುವ ಕೆಲ ಮಂದಿ ನಗರಸಭೆಯಲ್ಲಿ ತಮ್ಮ ಬೇಳೆ ಬೇಯದಿದ್ದರೂ ಭಂಡತನದಿಂದ ಕೆಲಸ ಮಾಡಿಸಿಕೊಡುವ ನಾಟಕೀಯತೆ ಮೆರೆಯುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿನ ನಗರಸಭೆಗಳ ಪೈಕಿ ಶಿರಾ ನಗರಸಭೆಗೆ ಸ್ವಚ್ಚತೆಯ ಹಿನ್ನೆಲೆಯಲ್ಲಿ ಪ್ರಶಂಸೆಯ ಪತ್ರಗಳು ಲಭ್ಯವಾಗಿದ್ದು ನಿಜಕ್ಕೂ ಅಚ್ಚರಿಯಷ್ಟೇ ಅಲ್ಲದೆ ಇದು ಸತ್ಯವೂ ಕೂಡಾ ಆಗಿತ್ತು. ಸ್ವಚ್ಚತೆ ಕಾಪಾಡಿಕೊಂಡ ಬಗ್ಗೆ ಇಲ್ಲಿನ ನಗರಸಭೆಗೆ ಹಿರಿಮೆಯ ಗರಿಯೂ ಮೂಡಿತ್ತು.
ಈ ಹಿಂದೆ ರಂಗಸ್ವಾಮಯ್ಯ ಎಂಬ ಆಯುಕ್ತರು ದಿನವಿಡೀ ನಗರದಲ್ಲಿ ಓಡಾಡುತ್ತಾ ತಮ್ಮ ಇಲಾಖೆಯ ಸಿಬ್ಬಂಧಿಯನ್ನು ಬಳಸಿಕೊಂಡು ನಗರದ ಸ್ವಚ್ಚತೆಯತ್ತ ತೀವ್ರ ಗಮನಹರಿಸಿದ್ದನ್ನು ನಗರದ ಜನ ಈಗಲೂ ಸ್ಮರಿಸುತ್ತಾರೆ.ತಮ್ಮ ವಾರ್ಡುಗಳ ಸುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಮಂದಿ ನಗರಸಭಾ ಸದಸ್ಯರು ವಿಶೇಷ ಕಾಳಜಿ ವಹಿಸುತ್ತಾ ಆಯುಕ್ತರು ಮತ್ತು ಸಿಬ್ಬಂಧಿಯ ಬೆನ್ನು ಹತ್ತಿ ಮತ ಹಾಕಿಸಿಕೊಂಡ ಮತದಾರರಿಂದ ಮರ್ಯಾದೆ ಉಳಿಸಿಕೊಳ್ಳಲು ಕಸರತ್ತು ನಡೆಸುವುದು ಸಾಮಾನ್ಯವಾಗಿದೆ.
ಶಿರಾ ನಗರದ ದೊಡ್ಡ ಕೆರೆಯಲ್ಲಿ ಹೇಮಾವತಿಯ ನೀರಿದ್ದು ಸದರಿ ನೀರಿನ ಪೂರೈಕೆಯೂ ಆಗುತ್ತಿದೆ. ಇದರೊಟ್ಟಿಗೆ ಒಂದಷ್ಟು ನೂತನ ಕೊಳವೆ ಬಾವಿಗಳನ್ನೂ ಕೊರೆಸಲಾಗಿದ್ದು ಕೆಲವು ವಿಫಲಗೊಂಡರೆ ಮತ್ತಲವು ಹನಿ ನೀರು ಸಿಗದೆ ವಿಫಲಗೊಂಡಿವೆ. ಇಷ್ಟೆಲ್ಲಾ ಆದರೂ ನೀರಿನ ಸಮಸ್ಯೆಯಂತೂ ಕೆಲವು ವಾರ್ಡುಗಳಲ್ಲಿ ಇನ್ನೂ ಬಗೆಹರಿದೇ ಇಲ್ಲ. 10-15 ದಿನಕ್ಕೊಮ್ಮೆ ಕೊಳಾಯಿ ನೀರು ಬಿಡುವ ಪರಿಪಾಠವಂತೂ ಇನ್ನೂ ತಪ್ಪಿಲ್ಲ.
ನಿವೇಶನಗಳ ಹಕ್ಕು ಪತ್ರಗಳಿಗಾಗಿ, ಬೀದಿ ನಲ್ಲಿಯ ನೀರಿಗಾಗಿ, ಖಾತೆ ಬದಲಾವಣೆಗಾಗಿ, ವಿದ್ಯುತ್ ಕಂಬದಲ್ಲಿನ ವಿದ್ಯುತ್ ಸಮಸ್ಯೆ, ಚರಂಡಿ ಸಮಸ್ಯೆ, ಸ್ವಚ್ಚತೆಯೂ ಸೇರಿದಂತೆ ಹಂತ ಹಂತವಾಗಿ ನೂರಾರು ಸಮಸ್ಯೆಗಳ ಹಿಂಡಿಗಂಟನ್ನಿಡಿದು ದಿನ ನಿತ್ಯವೂ ಜನ ಸಾಮಾನ್ಯರು ನಗರಸಭೆಗೆ ಎಡತಾಕುತ್ತಿದ್ದಾರೆಯೇ ಹೊರತು ಜನರ ಬವಣೆಯನ್ನು ಅರ್ಥ ಮಾಡಿಕೊಳ್ಳುವ ಇಚ್ಚಾಶಕ್ತಿಯಂತೂ ನಗರಸಭೆಯ ಅಧಿಕಾರಿಗಳಿಗೆ ಇಲ್ಲವಾಗಿದೆ.
ಇಂತಹ ಬೆಟ್ಟದಷ್ಟು ಸಮಸ್ಯೆಗಳು ಕಿಂಚಿತ್ತೂ ನಿವಾರಣೆಯಾಗುತ್ತಿಲ್ಲ ಎಂಬುದಕ್ಕೆ ಪ್ರಮುಖ ಕಾರಣವೂ ಇದೆ. ಕಳೆದ 2019 ರ ಆಗಸ್ಟ್ ತಿಂಗಳಲ್ಲಿಯೇ ಶಿರಾ ನಗರಸಭೆಯ 31 ವಾರ್ಡುಗಳ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಆಗ ಅಧ್ಯಕ್ಷಸ್ಥಾನವು ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನವು ಪ.ಜಾತಿ ಮಹಿಳೆಗೂ ಮೀಸಲಾಗಿತ್ತು. ವಾರ್ಡುಗಳ ಸದಸ್ಯರ ಮೀಸಲಾತಿ ಪಟ್ಟಿ ಪ್ರಕಟಗೊಂಡ ನಂತರ ರಾಜಕೀಯ ಮೇಲಾಟದಲ್ಲಿ ಕೆಲವು ವಾರ್ಡುಗಳ ಮೀಸಲಾತಿ ಬದಲಾವಣೆಯಾದ ಪರಿಣಾಮ ಸದಸ್ಯತ್ವದ ಆಕಾಂಕ್ಷಿಗಳ ಪೈಕಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಚುನಾವಣೆಯ ಕನಸು ಕಂಡವರಿಗೆ ನಿರಾಸೆಯಾಗಿತ್ತು.
ಅಲ್ಲಿಂದ ಈಚೆಗೆ ಸಂಸತ್ ಚುನಾವಣೆ, ರಾಜ್ಯ ವಿಧಾನಸಭೆಯ ಉಪ ಚುನಾವಣೆಯೂ ಸೇರಿದಂತೆ ವಿವಿಧ ಕಾರಣಗಳ ನೆಪದಲ್ಲಿ ರಾಜ್ಯದ ಅನೇಕ ನಗರಸಭೆ, ಪಟ್ಟಣ ಪಂಚಾಯ್ತಿಗಳ ಚುನಾವಣೆಯೂ ನೆನೆಗುದಿಗೆ ಬಿತ್ತು. ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನ್ಯಾಯಾಲಯದ ತೀರ್ಪು ಇತ್ಯರ್ಥಗೊಂಡು ನಡೆದರೂ ರಾಜ್ಯದ 6 ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾತ್ರಾ ಹೈಕೋರ್ಟ್‍ನಲ್ಲಿನ ವ್ಯಾಜ್ಯದಿಂದ ನಡೆಯಲೇ ಇಲ್ಲ. ಈ 6 ಸ್ಥಳೀಯ ಸಂಸ್ಥೆಗಳ ಪೈಕಿ ಶಿರಾ ನಗರಸಭೆ ಕೂಡಾ ಒಂದಾಗಿರುವುದು ಸದರಿ ನಗರದ ಜನತೆಯ ದೌರ್ಭಾಗ್ಯವೇ ಸರಿ.
ಕಳೆದ ಕೆಲವು ದಿನಗಳ ಹಿಂದಷ್ಟೆ ರಾಜ್ಯದ ಎಲ್ಲಾ ನಗರಸಭೆ, ಮಹಾ ನಗರ ಪಾಲಿಕೆ ಹಾಗೂ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿತು. ಅಧ್ಯಕ್ಷ ಸ್ಥಾನ ಪ.ಜಾತಿಗೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಮೀಸಲಾಯಿತು. ಸದರಿ ಮೀಸಲಾತಿ ಪ್ರಕಟಣೆಯ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಕಾತುರರಾಗಿದ್ದವರಿಗೆ ಮುಳುಗುತ್ತಿದ್ದವರಿಗೆ ಹುಲ್ಲುಗರಿಕೆಯ ಆಸರೆಯಾದಂತೆ ಚುನಾವಣೆ ಸಮೀಪಿಸಿತು ಅನ್ನಿಸಿತಾದರೂ ಅದು ಕ್ಷಣಿಕವಷ್ಟೆ ಅನ್ನಿಸಿತು. ಸದರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೂ ರಾಜ್ಯದ ಕೆಲವು ಕಡೆ ಹೈಕೋರ್ಟ್ ಮೆಟ್ಟಿಲು ಏರಲಾಗಿ ಮತ್ತೊಮ್ಮೆ ಚುನಾವಣಾ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು.
ಒಟ್ಟಾರೆ ಶಿರಾ ನಗರಸಭೆಯ ಚುನಾವಣಾ ಪ್ರಕ್ರಿಯೆಯೂ ಕಳೆದ ಒಂದು ವರ್ಷದ ಹಿಂದೆಯೇ ಮುಗಿದು ಇಷ್ಟೊತ್ತಿಗೆ ಆಡಳಿತಾರೂಢ ಸದಸ್ಯರು ನಗರಸಭೆಯಲ್ಲಿ ಕೂರಬೇಕಿತ್ತು ಆದರೆ ಇಲ್ಲಿ ಸದಸ್ಯರೂ ಇಲ್ಲಾ, ಅಧ್ಯಕ್ಷ-ಉಪಾಧ್ಯಕ್ಷರೂ ಇಲ್ಲ. ನಗರಸಭೆಯ ಆಡಳಿತಾಧಿಕಾರಿಗಳು, ಆಯುಕ್ತರು ಹಾಗೂ ಸಿಬ್ಬಂಧಿಗಳಲ್ಲದ್ದೇ ಇಲ್ಲಿ ಕಾರುಬಾರು….!.
(ಪುಟ 3 ಕ್ಕೆ)
ಇಲ್ಲಿನ ನಗರಸಭೆಯಲ್ಲೀಗ ಮಾಜಿ ಸದಸ್ಯರದ್ದು ಎಳ್ಳಷ್ಟೂ ನಡೆಯುತ್ತಿಲ್ಲ. ಅಧಿಕಾರ ಕಳೆದುಕೊಂಡವರನ್ನು ವಾರ್ಡುಗಳ ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವಂತೆಯೂ ಇಲ್ಲ. ಇಲ್ಲಿನ ಆಯುಕ್ತರು, ಸಿಬ್ಬಂಧಿ ಹಾಗೂ ಇಂಜಿನಿಯರ್‍ಗಳದ್ದೇ ಇಲ್ಲಿ ಸಂಪೂರ್ಣ ಆಡಳಿತ ಯಂತ್ರವಾಗಿದ್ದು ಅರ್ಹ ಫಲಾನುಭವಿಗಳಾಗಲಿ, ಜನ ಸಾಮಾನ್ಯರಾಗಲಿ ತುಟಿ ಎರಡು ಮಾಡದಂತಾಗಿದೆ. ಕಾರಣ ಕೇಳಿದರೆ ಆಗುವ ಕೆಲಸಗಳು ತಡವಾಗುವ ಸಂಭವದಿಂದ ಜನತೆಯೂ ಕೂಡಾ ಕೈ ಚೆಲ್ಲಿ ಕೂರುವಂತಾಗಿದೆ.
ಕಳೆದ ಎರಡು ತಿಂಗಳಲ್ಲಿ ನಗರದ ಅನೇಕ ಭಾಗಗಳಲ್ಲಿ ಹಲವು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಎಷ್ಟರಲ್ಲಿ ನೀರು ಕಂಡಿದೆ?, ಎಷ್ಟು ಕೊಳವೆ ಬಾವಿಗಳಿಗೆ ಮೋಟಾರು ಪಂಪ್ ಬಿಡಲಾಗಿದೆ?, ಎಷ್ಟು ಅಡಿ ಕೊಳವೆ ಬಾವಿ ಕೊರೆಯಲಾಗಿದೆ?….ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸುವ ಅಧಿಕಾರಿಗಳೇ ನಗರಸಭೆಯಲ್ಲಿ ಇಲ್ಲವಾಗಿದ್ದಾರೆ.
ಕಳೆದ ಬೇಸಿಗೆಯ ಸಂದರ್ಬದಲ್ಲಿ ಹಲವು ಗುತ್ತಿಗೆದಾರರು ಟ್ಯಾಂಕರ್‍ಗಳಲ್ಲಿ ಬಡಾವಣೆಗಳಿಗೆ ಕುಡಿಯುವ ನೀರನ್ನು ಪೂರೈಸಿದ ಬಾಬ್ತಿನ ಹಣವನ್ನೂ ಇಲ್ಲಿನ ನಗರಸಭೆಗೆ ಇನ್ನೂ ನೀಡಲಾಗುತ್ತಿಲ್ಲವೆಂದರೆ ಇಲ್ಲಿನ ಆಡಳಿತ ವೈಖರಿಯನ್ನು ನಿಜಕ್ಕೂ ಆ ದೇವರೇ ಮೆಚ್ಚಬೇಕು. ಗುತ್ತಿಗೆದಾರರು ನಡೆಸಿದ ಚರಂಡಿ ಕಾಮಗಾರಿಗಳು, ಕೊಳವೆ ಬಾವಿ ಕೊರೆದ ಬಿಲ್‍ಗಳು, ಮೋಟಾರು ಪಂಪ್ ಖರೀದಿ ಮಾಡಿದ ಬಿಲ್‍ಗಳು ಸಾರಾಗವಾಗಿ ಪಾಸಾಗಿ ಬಿಲ್ ಕೂಡಾ ಆಗಿಬಿಡುತ್ತವೆಯಾದರೂ ಜನ ಸಾಮಾನ್ಯರ ಮೂಲ ಸಮಸ್ಯೆಗಳು ಮಾತ್ರಾ ನೀಗುತ್ತಲೇ ಇಲ್ಲ.
ಕಳೆದ ಎರಡು ವರ್ಷದ ಹಿಂದೆಯೇ ನಗರಸಭಾ ವ್ಯಾಪ್ತಿಯಲ್ಲಿ ಅರ್ಹರಿಗೆ ನಿವೇಶನ ನೀಡಲು ಜಮೀನುಗಳನ್ನು ಗುರ್ತಿಸಲಾಗಿದ್ದು ಅರ್ಹರಿಂದ ಅರ್ಜಿಗಳನ್ನು ಈ ಹಿಂದೆಯೇ ಸ್ವೀಕಾರಿಸಲಾಗಿದ್ದು 300 ನಿವೇಶನಗಳಿಗೆ 3,000ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಹರನ್ನು ಗುರ್ತಿಸುವ ಕೆಲಸವೂ ಆಗಿದೆಯಾದರೂ ಈ ಪೈಕಿ ಅನರ್ಹರಿಗೂ ಕೂಡಾ ನಿವೇಶನ ಲಭಿಸುವ ಆತಂಕ ಜನ ಸಾಮಾನ್ಯರಲ್ಲಿದ್ದು ಸದ್ಯಕ್ಕಂತೂ ನಿವೇಶನ ನೀಡುವಂತೆ ಕಾಣುತ್ತಿಲ್ಲ.
ನಗರದ ಕಾಳಿದಾಸ ನಗರ, ಬಾಲಾಜಿ ನಗರ, ಸಂತೇಪೇಟೆ, ಖರಾದಿ ಮೊಹಲ್ಲಾ, ಬೇಗಂ ಮೊಹಲ್ಲಾ, ಬನ್ನಿ ನಗರ, ಲಾಡಪುರ, ವಿದ್ಯಾನಗರ, ಜ್ಯೋತಿ ನಗರ, ರಂಗಪ್ಪನಪಾಳ್ಯ, ಸಪ್ತಗಿರಿ ಬಡಾವಣೆ ಸೇರಿದಂತೆ ನಗರದ ಬಹುತೇಕ ವಾರ್ಡುಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ಕೊಳಚೆ ನೀರು ಹೊರ ಹೋಗದಂತಹ ವಾತಾವರಣ ನಿರ್ಮಾಣಗೊಂಡಿದೆ. ಇದು ರೋಗ ರುಜಿನಗಳಿಗೂ ಕಾರಣವಾಗಿದೆ. ನಗರಸಭೆಯಲ್ಲಿ ಪೌರ ಕಾರ್ಮಿಕ ಸಿಬ್ಬಂಧಿಯ ಕೊರತೆಯೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ನಗರದ ಬಾಲಾಜಿ ನಗರ ಸೇರಿದಂತೆ ಕೆಲವೆಡೆ ಪುಟ್‍ಬಾತ್ ರಸ್ತೆಗೆ ಕಳೆದ ಕೆಲ ದಿನಗಳಿಂದ ಸಿಮೆಂಟ್ ಇಟ್ಟಿಗೆಗಳ ನೆಲಹಾಸು ಹಾಕಲಾಗುತ್ತಿದ್ದು ಹಾಕಿದ ನೆಲಹಾಸುಗಳು ಕಳಪೆ ಗುಣಮಟ್ಟದ್ದಾಗಿದ್ದು ಒಂದೆರಡು ದಿನಗಳಲ್ಲಿಯೇ
ರಸ್ತೆಗಳೇ ಕಿತ್ತು ಹೋಗುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರಾ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಹಂದಿಗಳ ಹಾವಳಿಯೂ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಸ್ವಚ್ಚತೆಯ ಕೊರತೆ ಎದ್ದು ಕಾಣುತ್ತಿದ್ದರೂ ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲದಂತಾಗಿದೆ.
ಕಳೆದ ನಗರಸಭೆಯ ಚುನಾವಣೆಯಲ್ಲಿ ಗೆದ್ದು ಐದು ವರ್ಷ ಗದ್ದುಗೆಯಲ್ಲಿ ಕೂತು ಹಾಲಿ ಇದ್ದ ಸದಸ್ಯರನೇಕರು ಮಾಜಿ ಆದೊಡನೆ ವಾರ್ಡಿನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಗೆದ್ದು ಐದು ವರ್ಷ ಗದ್ದುಗೆಯಲ್ಲಿ ಕೂರುವಂತೆ ಮಾಡಿದ ವಾರ್ಡಿನ ಜನತೆಯನ್ನೇ ಕೆಲವು ಸದಸ್ಯರು ಮಾಜಿ ಅನ್ನಿಸಿಕೊಂಡಾಕ್ಷಣ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ತಮ್ಮ ವಾರ್ಡುಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕೂತವರಿಗೆ ಪಾಠ ಕಲಿಸಲು ಜನತೆ ಸಜ್ಜಾಗಿದ್ದಾರಾದರೂ ನಡೆಯದ ನಗರಸಭಾ ಚುನಾವಣೆ ಸಾರ್ವಜನಿಕರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
ವಾರ್ಡುಗಳಲ್ಲಿ ಕೆಲಸ ಮಾಡದೆ ಮಾಜಿಯಾದವರು ಈ ಬಾರಿ ಓಟು ಕೇಳಲು ಬರಲಿ ತಕ್ಕ ಶಾಸ್ತಿ ಮಾಡಬೇಕೆಂದು ವಾರ್ಡುಗಳ ಜನತೆ ಕಳೆದೊಂದು ವರ್ಷದಿಂದ ಕಾದು ಕುಳಿತಿದ್ದರೂ ನಡೆಯದ ಚುನಾವಣೆ ಮತದಾರನ ಚಿಂತನೆಯನ್ನು ಬುಡಮೇಲು ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಅರ್ಹರಿಗೆ ಮಣೆ ಹಾಕಬೇಕೆಂಬ ನಗರದ ಜನತೆಯ ಇಚ್ಚಾಶಕ್ತಿ ಸದ್ಯಕ್ಕಂತೂ ಇತ್ಯರ್ಥವಾಗುವಂತೆ ಕಾಣುತ್ತಲೇ ಇಲ್ಲ.
ಕೊರೋನಾ ಸೋಂಕಿನ ಭಯದ ವಾತಾವರಣ ಶಿರಾದಲ್ಲೂ ಕೂಡಾ ಆತಂಕವನ್ನು ಸೃಷ್ಠಿ ಮಾಡಿದೆ. ಕಾರಣ ಇಷ್ಟೆ ಕಳೆದ ಕೆಲವು ದಿನಗಳ ಹಿಂದೆ ಮೆಕ್ಕಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ ಒಟ್ಟು ನಾಲ್ಕು ಕುಟುಂಬಗಳು ಶಿರಾ ನಗರಕ್ಕೆ ಕಳೆದ ಎರಡು ದಿನಗಳ ಹಿಂದಷ್ಟೇ ಮರಳಿ ಬಂದಿದ್ದು ಸದರಿ ಕುಟುಂಬಗಳ ಮೇಲೆ ನಗರಸಭೆ ಹಾಗೂ ಆರೋಗ್ಯ ಇಲಾಖೆ ಎಷ್ಟರಮಟ್ಟಿಗೆ ನಿಗಾ ವಹಿಸಿವೆ ಎಂಬುದು ಜನ ಸಾಮಾನ್ಯರಿಗೂ ಅರ್ಥವಾಗದಂತಾಗಿದೆ.
ವಿದೇಶದಿಂದ ಮರಳಿದ ಕುಟುಂಬಗಳ ಮೇಲೆ ಆರೋಗ್ಯ ಇಲಾಖೆ ಹಾಗೂ ನಗರಸಭೆ ತೀವ್ರ ನಿಗಾವಹಿಸಬೇಕು ನಿಜ ಆದರೆ ಆರೋಗ್ಯ ಇಲಾಖೆ ಈ ಬಗ್ಗೆ ಒಂದಷ್ಟು ಜಾಗೃತಿ ವಹಿಸಿರುವ ಬಗ್ಗೆ ಮಾಹಿತಿ ಲಭ್ಯವಿದೆಯಾದರೂ ನಗರದಲ್ಲಿನ ಸ್ವಚ್ಚತೆ ಹಾಗೂ ಸೋಂಕು ಹರಡದಂತೆ ನಗರಸಭೆ ಯಾವುದೇ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡಿಲ್ಲವೆಂಬುದು ಅಷ್ಟೇ ಸತ್ಯ.
ಪ್ರಧಾನಿ ಮೋದಿ ಅವರ ಕರೆಯಂತೆ ಮಾ:22 ರಂದು ಜನತಾ ಕಫ್ರ್ಯೂಗೆ ಶಿರಾ ನಗರದ ಜನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರೂ ಉಳಿದ ದಿನಗಳಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲಗೊಂಡಿದೆ. ಮುಂದಿನ ದಿನಗಳಲ್ಲಾದರೂ ನಗರಸಭೆಯು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಕೊರೋನಾ ಸೋಂಕಿನ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.
ಶಿರಾ ನಗರಸಭೆಯ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಬೆಟ್ಟದಷ್ಟು ಸಮಸ್ಯೆಗಳಿದ್ದು ಕ್ಷೇತ್ರದ ಶಾಸಕರು ಮೌನವಾಗಿರುವ ಉದ್ದೇಶವಂತೂ ಸಾರ್ವಜನಿಕರಿಗೆ ಅರ್ಥವಾಗದಂತಾಗಿದೆ. ಶಾಸಕ ಬಿ.ಸತ್ಯನಾರಾಯಣ್ ಈ ಹಿಂದೆ ಪ್ರಾಮಾಣಿಕತೆಗೆ ಹೆಸರಾದವರು. ಕ್ಷೇತ್ರದ ಅಭಿವೃದ್ಧಿಗೆ ಸದಾ ಒತ್ತು ನೀಡುತ್ತಿದ್ದ ಶಾಸಕರು ಪ್ರಸಕ್ತ ವರ್ಷ ಜಿಲ್ಲೆಯ ಅಧಿಕಾರಿಗಳನ್ನು ಬೆನ್ನು ಹತ್ತಿ ಹೇಮಾವತಿ ನೀರನ್ನು ಕೆರೆಗೆ ತುಂಬಿಸಿಕೊಂಡಿದ್ದು ಶ್ಲಾಘನಾರ್ಹವಾದರೂ ಶಾಸಕರು ನಗರಸಭೆಯ ಆಡಳಿತ ವೈಫಲ್ಯದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸ್ಥಿತಿ ಕಂಡರೆ ಜನತೆಗೂ ಅಚ್ಚರಿಯ ಸಂಗತಿಯಾಗಿದೆ.
ಕಳೆದೊಂದು ವರ್ಷದಲ್ಲಿ ಬೇಸಿಗೆಯ ದಿನದಲ್ಲಿ ನೀರಿನ ಸಮಸ್ಯೆ ನೀಗಿಸಲು ಶಾಸಕರು ನಗರಸಭೆಯ ಸಭಾಂಗಣದಲ್ಲಿ ಒಂದು ಸಭೆ ಕರೆದಿದ್ದನ್ನು ಬಿಟ್ಟರೆ ಈವರೆಗೂ ನಗರಸಭೆಯ ಕಡೆ ಮುಖ ಮಾಡಿಯೇ ಇಲ್ಲ ಅನ್ನುವುದು ಮತ್ತೊಂದು ಅಚ್ಚರಿಯ ಸಂಗತಿಯೂ ಹೌದು. ನಗರಸಭೆಯ ಬಗ್ಗೆ ಶಾಸಕರಿಗೆ ಆಸಕ್ತಿ ಕುಂದಿರುವ ಕಾರಣವಂತೂ ಯಾರಿಗೂ ಅರ್ಥವಾಗದಂತಾಗಿದೆ.
ವಿದೇಶದಿಂದ ನಗರಕ್ಕೆ ಕೆಲವು ಕುಟುಂಬಗಳು ಆಗಮಿಸಿದ್ದು ಕೊರೋನಾ ಸೋಂಕಿನ ಬಗ್ಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸ್ವಚ್ಚತೆ, ಸೋಂಕು ಹರಡದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಇಲ್ಲಿನ ನಗರಸಭೆಗೆ ಶಾಸಕರು ಚುರುಕು ಮುಟ್ಟಿಸದೇ ಇದ್ದಲ್ಲಿ ನಿಜಕ್ಕೂ ನಗರದ ಜನತೆ ಕ್ಷಮಿಸಲಾರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ