ತುಮಕೂರು
ಸಮಾಜಸೇವೆ ಮಾಡುವವರನ್ನು ಪ್ರೋತ್ಸಾಹಿಸಬೇಕು. ಇಂತಹ ಸೇವೆಗಳು ಇತರರಿಗೆ ಪ್ರೇರಣೆಯಾಗಿ ಹೆಚ್ಚು ಜನ ಸೇವಾಕಾರ್ಯಗಳಲ್ಲಿ ತೊಡಗುವಂತಾಗಬೇಕು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಜೈನ ಮಿಲನ್ ಸಂಸ್ಥೆಯ ನೂರನೇ ತಿಂಗಳ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಿಬಿರದ ಶತಮಾಸೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಜೈನ ಸಮುದಾಯದವರು ಶುದ್ಧ ಶಾಖಾಹಾರಿಗಳು, ಅಹಿಂಸಾ ಪರಿಪಾಲಕರು, ತಮ್ಮ ವ್ಯವಹಾರದ ಜೊತೆಗೆ ಸಮಾಜ ಸೇವೆಯನ್ನೂ ರೂಢಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಬಡವರಿಗೆ ನೇತ್ರ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತದೆ, ಅಂತಹವರಿಗಾಗಿ ಉಚಿತವಾಗಿ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡುತ್ತಿರುವ ಉತ್ತಮ ಕೆಲಸ ಮಾಡುತ್ತಿರುವ ಜೈನ್ ಮಿಲನ್ ಸಂಘಟನೆ ಕಾರ್ಯ ಉತ್ತಮವಾದು. ಸತತ ನೂರು ತಿಂಗಳಿನಿಂದ ಇಂತಹ ಶಿಬಿರ ಆಯೋಜಿಸಿ ಸಾವಿರಾರು ಜನರಿಗೆ ನೆರವಾಗಿದ್ದಾರೆ. ಇವರ ಸೇವೆ ಯುವಜನರಿಗೆ ಪ್ರೇರಣೆಯಾಗಬೇಕು, ಮಾಧ್ಯಮಗಳು ಕೂಡಾ ಇಂತಹ ಸದಭಿರುಚಿ, ಸಮಾಜಸ್ಪರ್ಶಿ ಸೇವಾಕಾರ್ಯಗಳಿಗೆ ಹೆಚ್ಚು ಪ್ರಚಾರ ನೀಡಿ ಸಂಘಟಕರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಣ್ಣು ಜ್ಞಾನೇಂದ್ರಿಯಾಗಳಲ್ಲಿ ಮುಖ್ಯವಾದ ಅಂಗ. ಕಣ್ಣು ಸಾಯುವುದಿಲ್ಲ, ಅದನ್ನು ದಾನ ಮಾಡಿದರೆ ಇನ್ನೊಬ್ಬರಿಗೆ ಕಣ್ಣಾಗುತ್ತದೆ. ಕುರುಡುತನದಿಂದ ಬಳುವವರಿಗೆ ಬೆಳಕಾಗುತ್ತದೆ ಎಂದು ಹೇಳಿದ ಸ್ವಾಮೀಜಿ, ಮೂರು ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ದಾಖಲೆ ಮಾಡಿರುವ ಡಾ. ನರಪತ್ ಸೋಲಂಕಿಯವರ ಸೇವೆ ಸಮಾಜ ಮೆಚ್ಚುವಂತಾದ್ದು ಎಂದು ಅಭಿನಂದಿಸಿದರು.
ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್. ನಾಗಣ್ಣನವರು ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿರುವ ಜೈನ ಸಮಾಜದವರು ನೇತ್ರ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವ ಮೂಲಕ ಬಡವರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ, ಸತತ ನೂರು ತಿಂಗಳು ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸುವ ಮುಖೇನ ದಾಖಲೆಯ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಠಿಣ ವ್ರತ ಆಚರಿಸುವ ಜೈನ ಸಮಾಜದವರು ಅಂದುಕೊಂಡಿದ್ದನ್ನು ಎಷ್ಟೇ ಕಠಿಣವಾಗಿದ್ದರೂ ಮಾಡಿ ಯಶಸ್ವಿಯಾಗುತ್ತಾರೆ. ತಮ್ಮ ವ್ಯವಹಾರದ ಲಾಭದಲ್ಲಿ ಒಂದು ಪಾಲನ್ನು ಸಮಾಜ ಸೇವೆಗಾಗಿ ಮುಡುಪಾಗಿಟ್ಟು, ಸಾಮಾಜಿಕ, ಧಾರ್ಮಿಕ ಸೇವಾಕಾರ್ಯ ಮಾಡುತ್ತಾ ಮಾದರಿಯಾಗಿದ್ದಾರೆ. ಪಂಪನಿಂದ ಈವರೆಗೆ ಅನೇಕ ಜೈನ ಸಮುದಾಯದವರು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ತುಮಕೂರಿನಲ್ಲಿ ಕಣ್ಣಿನ ಆಸ್ಪತ್ರೆಯ ಅಗತ್ಯವಿದೆ ಜೈನ ಸಮುದಾಯದವರು ಈ ಬಗ್ಗೆ ಚಿಂತನೆ ನಡೆಸಿ ಆಸ್ಪತ್ರೆ ಸ್ಥಾಪನೆಗೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು. ಸೇವೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಒಂದು ವರ್ಷದಲ್ಲಿ 40 ಸಾವಿರ ಲೀಟರ್ ರಕ್ತ ಸಂಗ್ರಹಿಸಿ ಆಸ್ಪತ್ರೆಗಳಿಗೆ ನೀಡಿದೆ ಎಂದು ಹೇಳಿದರು.
ನೇತ್ರಜ್ಞ ಡಾ. ನರಪತ್ ಸೋಲಂಕಿ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ಅನೇಕರಿಗೆ ಚಿಕಿತ್ಸೆ ಪಡೆಯಲು ಹಣ ಇರುವುದಿಲ್ಲ, ಅಂತಹವರ ಚಿಕಿತ್ಸೆಗಾಗಿ ಜೈನ್ ಮಿಲನ್‍ನವರು ಶಿಬಿರಗಳನ್ನು ಮುಂದುವರೆಸಿ ಎಂದು ಮನವಿ ಮಾಡಿ, ತುಮಕೂರಿನಲ್ಲಿ ಜಾಗದ ನೀಡಿದರೆ ತಾವು ಕಣ್ಣಿನ ತಪಾಸಣೆ, ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಜೈನ್ ಮಿಲನ್ ಅಧ್ಯಕ್ಷರಾದ ಪಿ. ಪಾರಸ್ ಮಲ್, ಮಾಂಗಿ ಲಾಲ್, ಭಾರತೀಯ ಜೈನ ಮಿಲನ್‍ನ ಮಾಜಿ ವಲಯ ಅಧ್ಯಕ್ಷ ಎಂ. ಎಸ್. ಮೃತ್ಯುಂಜಯ, ದಿಗಂಬರ ಜೈನ ಸಮಾಜದ ಮಾಜಿ ಅಧ್ಯಕ್ಷ ಎಂ. ಪಿ. ಸನ್ಮತಿಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಬ್ರಹ್ಮಯ್ಯ, ಮುಖಂಡರಾದ ಜಯಕೀರ್ತಿ, ಉಮೇಶ್, ಹೊನ್ಮಪ್ಪ, ಅಶೋಕ್‍ಕುಮಾರ್, ಟಿ. ಪಿ. ಸುನಿಲ್ ಮೊದಲಾದವರು ಭಾಗವಹಿಸಿದ್ದರು.ಈ ವೇಳೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಕಣ್ಣಿನ ದೋಷವಿರುವ ಹಲವಾರು ಜನ ತಪಾಸಣೆ ಮಾಡಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ