ಹುಳಿಯಾರು
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಮತ್ತು ದಸೂಡಿ ಗ್ರಾಮಕ್ಕೆ ಎಪಿಎಂಸಿ ವತಿಯಿಂದ ಗ್ರಾಮೀಣ ಸಂತೆ ಮಾರುಕಟ್ಟೆ ಮಾಡುವುದಾಗಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು. ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮ ಪಂಚಾಯತಿ ಕಾರ್ಯಾಲಯ ಹಾಗೂ ಪಶು ಚಿಕಿತ್ಸಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಡಿಗ್ರಾಮಗಳಿಗೆ ಬೇಕಾದ ಸವಲತ್ತು ಸಿಗದೆ ಇಲ್ಲಿನ ಜನರು ಕಷ್ಟದ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಅರಿತಿದ್ದೇನೆ. ಇಲ್ಲಿನ ಜನರ ಜೀವನ ಮಟ್ಟ ಸುಧಾರಿಸಲು ಅನೇಕ ಯೋಜನೆಗಳನ್ನು ಈ ಭಾಗದಲ್ಲಿ ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇನೆ. ಕಾರೇಹಳ್ಳಿ ಬಳಿ ಇಂಡಸ್ಟ್ರೀಯಲ್ ತರಬೇತಿ ಸೆಂಟರ್ ತೆರೆಯಲು ಉತ್ಸುಕನಾಗಿದ್ದು, ರಂಗನಾಥಸ್ವಾಮಿ ದೇಗುಲದ ಸುತ್ತಮುತ್ತ 5 ಎಕರೆ ಜಮೀನು ಕೊಡಿ ಎಂದು ಅಧಿಕಾರಿಗಳನ್ನು ಕೇಳಿದ್ದೇನೆ ಎಂದರು.
ಬರೀ ಸರ್ಕಾರಿ ಕಟ್ಟಡಗಳ ನಿರ್ಮಾಣ ಹಾಗೂ ಹೆದ್ದಾರಿ ಮಾಡುವುದರಿಂದ ಅಬೀವೃದ್ಧಿ ಸಾಧ್ಯವಿಲ್ಲ. ಮೊದಲು ರೈತರು ಅಭಿವೃದ್ಧಿ ಆಗಬೇಕು. ಅವರ ಜೀವನ ಮಟ್ಟ ಸುಧಾರಿಸಲು ಅಂತರ್ಜಲ ಹೆಚ್ಚಿಸುವ ಕೆಲಸ ಆಗಬೇಕಿದೆ. ಈ ಭಾಗದಲ್ಲಿ ಎಲ್ಲಿಯೇ ಆಗಲಿ ನೀರು ನಿಲ್ಲುವ ಯಾವುದೇ ಸ್ಥಳವನ್ನು ಪಟ್ಟಿ ಮಾಡಿಕೊಟ್ಟರೆ ಕಟ್ಟೆ, ಏರಿಗಳ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಟಿ. ಮಹಾಲಿಂಗಯ್ಯ.
ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಮಧು, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಕೆಂಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಇಒ ನಾರಾಯಣಸ್ವಾಮಿ, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟರಾಜು, ಪಶುವೈದ್ಯರಾದ ರಘುಪತಿ, ತ್ರಿವೇಣಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
