ತುಮಕೂರು
ಪ್ರಸ್ತುತ ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಮಾರು ಹೋಗುತ್ತಿದ್ದು, ಜಾನಪದ ಕಲೆಯ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಜಾನಪದ ಕಲೆಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ತುಮಕೂರು ವಿವಿ ಉಪಕುಲಪತಿ ವೈ.ಎಸ್.ಸಿದ್ದೇಗೌಡರು ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಪಿಜಿ ಸೆಮಿನಾರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮೋತ್ಸವ ‘ಸಂಭ್ರಮ-2019’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2019 ಸಂಭ್ರಮದಿಂದ ಕೂಡಿದೆ. ಪತ್ರಿಕಾ ರಂಗ ಅನೇಕ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಜನರ ಪದವೇ ಜಾನಪದ. ನಾವು ಏನಾಗಿದ್ದೇವೆಯೋ ಅದೇ ಸಂಸ್ಕೃತಿ, ಕಲೆ. ಲೋಕಾರೂಢಿಗೆ ನಾವು ಒಳಪಡಬೇಕು. ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಗೆ ಒಳಪಡಬೇಕು. ಗ್ರಾಮೀಣ ಕಲೆಯನ್ನು ಉಳಿಸಿ, ಬೆಳಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಿಕೋದ್ಯಮಿ ಹಾಗೂ ಅಂಕಣಕಾರ ನಾಗೇಶ್ ಹೆಗ್ಡೆ ಮಾತನಾಡಿ, ಪತ್ರಿಕೋದ್ಯಮ ಒಂದು ಚಿನ್ನದ ಯುಗವಾಗಿದ್ದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರವೇಶ ಮಾಡಲು ಸುವರ್ಣಾವಕಾಶ ಒದಗಿ ಬಂದಿದೆ. ಕಾಂಟ್ರವರ್ಸಿ ಸುದ್ದಿಗೆ ಹೆಚ್ಚಿನ ಸುದ್ದಿಗಳನ್ನು ಪ್ರಸಾರವಾದಾಗ ಮಾತ್ರ ಪತ್ರಿಕೋದ್ಯಮ ಕಳೆ ಕಟ್ಟುತ್ತದೆ ಎಂಬ ಮನಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮ ರಂಗದಲ್ಲಿ ಇಂದು ತಂತ್ರಜ್ಞಾನ ಆವರಿಸಿ ಕೊಂಡಿದ್ದು, ಸ್ಪರ್ಧೆಯ ನಡುವೆ ಸತ್ಯ ಸಂಗತಿ ಮತ್ತು ಸುದ್ದಿಯ ಮೌಲ್ಯ ಕ್ಷೀಣಿಸುತ್ತಿದೆ. ಟಿಆರ್‍ಪಿ ಇಲ್ಲದೆ, ಮಾಧ್ಯಮ ರಂಗ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಭಿವೃದ್ಧಿಗಾಗಿ ಹೊರ ದೇಶಗಳಿಗೆ ಯೋಜನೆಯನ್ನು ನೀಡಲಾಗುತ್ತಿದೆ. ಇಡೀ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬರುವ ಜನರ ಸಂಖ್ಯೆ ಅತಿ ಹೆಚ್ಚು ಭಾರತದಲ್ಲೇ ಕಂಡು ಬರುತ್ತಿದೆ. ನಗರಗಳಲ್ಲಿ ಮೂಲ ಸೌಕರ್ಯಗಳು ಕ್ಷೀಣಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ಬಂದ ಜನರು ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ ಎಂದು ಇಂದಿನ ಸ್ಥಿತಿಗತಿಗಳ ಬಗ್ಗೆ ತಿಳಿಸಿದ ಅವರು, ಬುಲೆಟ್ ಟ್ರೈನ್, ನದಿಗಳ ಜೋಡಣೆ ಮಾಡಲಾಗುತ್ತದೆ. ಆ ಮೂಲಕ ದೇಶದ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಅದರ ನಿಜವಾದ ಬಣ್ಣ ನಂತರವೇ ತಿಳಿಯುತ್ತದೆ. ಆ ರೀತಿ ಅಭಿವೃದ್ಧಿ ಕಾರ್ಯದ ಯೋಜನೆಗಳು ನಡೆಯುತ್ತಿವೆ ಎಂದು ವಿಷಾದಿಸಿದರು.
ನಗರದ ಮಧ್ಯೆ ಆಕಾಶದೆತ್ತರದ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಪಕ್ಕದಲ್ಲೇ ಕೊಳಚೆ ಪ್ರದೇಶಗಳಿವೆ. ಇಂದು ಪತ್ರಿಕಾ ರಂಗದ ಮೂಲಕ ಕಟ್ಟಡಗಳನ್ನು ಮಾತ್ರ ತೋರಿಸಲಾಗುತ್ತಿದೆ ಹೊರತು ಅದರ ಪಕ್ಕದಲ್ಲಿರುವ ಕೊಳಚೆ ಪ್ರದೇಶದ ಚಿತ್ರಣ ತೋರಿಸುವಲ್ಲಿ ವಿಫಲವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ತಾಂತ್ರಿಕವಾಗಿ ದೇಶ ಅಭಿವೃದ್ಧಿ ಸಾಧಿಸಿದರೂ, ಹಲವು ನಗರ ಸಭೆಗಳಲ್ಲಿ ಕಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸಲಕರಣೆಗಳನ್ನು ನೀಡುತ್ತಿಲ್ಲ. ಈ ಬಗ್ಗೆ ಯಾವುದೇ ಸುದ್ದಿಗಳು ಪ್ರಕಟವಾಗುತ್ತಿಲ್ಲ. ಅಧಿಕಾರಿಗಳು ಅವರ ಆರೋಗ್ಯ ರಕ್ಷಣೆಗೆ ಮುಂದಾಗುತ್ತಿಲ್ಲ. ಇದೇ ಇಂದಿನ ಸತ್ಯ ಸಂಗತಿ ಎಂದು ವಿವರಿಸಿದರು.
ಆಫ್ರಿಕಾ ಖಂಡದಲ್ಲಿನ ಬಡ ಜನರ ಸಂಖ್ಯೆಗಿಂತ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಇದನ್ನು ಪತ್ರಕರ್ತರು ಎತ್ತಿ ತೋರಿಸಬೇಕು. ನಮ್ಮಲ್ಲಿ ಅನೇಕ ಹೈಟೆಕ್ ಆಸ್ಪತ್ರೆಗಳಿವೆ. ಆದರೆ ಜನ ಅಲ್ಲಿಗೆ ಹೋಗುವುದಿಲ್ಲ. ಇದನ್ನು ಮಾಧ್ಯಮದಲ್ಲಿ ಭಿತ್ತರಿಸುತ್ತಿಲ್ಲ. ಬದಲಾಗಿ ಹೊಸ ಸೌಂದರ್ಯ ವರ್ಧಕ ಬಂದಿದೆ ಎಂಬ ಬಗ್ಗೆ ತೋರಿಸಲಾಗುತ್ತದೆ ಇದು ಬದಲಾಗಬೇಕಿದೆ ಎಂದರು.
ಪತ್ರಿಕೋದ್ಯಮಿ ಪಿ.ರಾಜೇಂದ್ರ ಮಾತನಾಡಿ, ದೇಶಕ್ಕೆ ಜಾಗೃತಿ ಸಮಾಜ ಅತ್ಯವಶ್ಯಕವಾಗಿದೆ. ನಮ್ಮ ಸುತ್ತಲಿನ ವಾತಾವರಣ ಉತ್ತಮವಾಗಿರುವಂತೆ ಕರ್ತವ್ಯ ನಿರ್ವಹಿಸಬೇಕು. ಯುವ ಪತ್ರಕರ್ತರಲ್ಲಿ ಸಂಶೋಧನೆ ಎಂಬ ಅಂಶ ಕಡಿಮೆಯಾಗುತ್ತಿದೆ. ಕುಳಿತ ಜಾಗದಲ್ಲೇ ಸುದ್ದಿ ತಯಾರಿಸುವಷ್ಟು ತಂತ್ರಜ್ಞಾನ ನಮ್ಮಲ್ಲಿ ಬಂದಿದೆ. ಸ್ಥಳಕ್ಕೆ ಹೋಗಿ ವಸ್ತು ಸ್ಥಿತಿಯ ಬಗ್ಗೆ ಪರಿಚಯ ಮಾಡಿಸಲು ಮುಂದಾಗುತ್ತಿಲ್ಲ.
ಅಂತರ್ಜಾಲ ಬಳಸಿಕೊಂಡು ಕುಳಿತಲ್ಲೇ ವರದಿ ತಯಾರಿಸುವ ಪರಿಸ್ಥಿತಿ ಬಂದಿದೆ. ಜೊತೆಗೆ ಆಧುನಿಕ ತಂತ್ರಜ್ಞಾನಕ್ಕೆ ಒಳಪಡುತ್ತಿದ್ದಾರೆ. ಇದು ಬದಲಾದಾಗ ಮಾತ್ರ ಮಾಧ್ಯಮ ರಂಗ ಚಿನ್ನದ ಯುಗವಾಗಲು ಸಾಧ್ಯ ಎಂದರು.
ಪತ್ರಿಕೋದ್ಯಮದಲ್ಲಿ ನಾವು ನಾಯಕತ್ವ ವಹಿಸಿಕೊಳ್ಳಬೇಕು. ಎಲ್ಲರೂ ಒಂದೇ ವಿಷಯ ತೋರಿಸಲು ಪೈಪೋಟಿ ನಡೆಸಬಾರದು. ಸಮಾಜವನ್ನು ಜಾಗೃತಿಗೊಳಿಸುವ ಹೊಣೆ ಪತ್ರಕರ್ತರ ಮೇಲಿದೆ. ಈ ಕರ್ತವ್ಯ ನಡೆದರೆ ಸಮಾಜ, ಜನತೆ ಜಾಗೃತರಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಡಾ.ವೈ.ಎಂ.ರೆಡ್ಡಿ ಮಾತನಾಡಿ ಸಂಭ್ರಮೋತ್ಸವ ಮದುವೆ ಮನೆಯ ಸಂಭ್ರಮದಿಂದ ಕೂಡಿದೆ. ಜಾನಪದ ಕಲಾ ತಂಡಗಳ ಭಾಗವಹಿಸುವಿಕೆ ಸಂಭ್ರಮಕ್ಕೆ ಮತ್ತೊಂದು ಕಳೆ ತಂದಿದೆ. ಸಂಭ್ರಮ ಕಾರ್ಯಕ್ರಮವನ್ನು ಜಾನಪದ ಕಲಾವಿದರಿಗೆ ಅರ್ಪಣೆ ಮಾಡಲು ನಿರ್ಧರಿಸುವುದು ಉತ್ತಮ ಬೆಳವಣಿಗೆ. ಜಿಲ್ಲೆಯ ಹತ್ತು ತಾಲ್ಲೂಕಿನ ಜಾನಪದ ಕಲಾವಿದರನ್ನು ಗುರುತಿಸಿ, ಅವರಿಗೆ ಸನ್ಮಾನಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.ಪ್ರಸ್ತಾವಿಕ ನುಡಿಗಳನ್ನಾಡಿದ ಶ್ರೀ ಸಿದ್ದಾರ್ಥ ಮಾಧ್ಯಮ ಕ್ಷೇತ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಂಭ್ರಮೋತ್ಸವ ಅನ್ನುವುದು ನಮ್ಮ ನಾಡಿನ ಭೂಮಿಯಲ್ಲೇ ಅಡಗಿದೆ. ಅದನ್ನು ಹೊರ ತರುವಲ್ಲಿ ಕಲ್ಪತರು ನಾಡು ಹೊರತಾಗಿಲ್ಲ. ಅದಕ್ಕೆ ವಿದ್ಯಾರ್ಥಿಗಳು ಸ್ಪಂದಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವುದು ಮತ್ತು ಸಮತೋಲನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಸವಾಲಿನ ಕೆಲಸ. ಪತ್ರಿಕೋದ್ಯಮದ ಮೂಲ ಇರುವುದು ಜಾನಪದ ಕಲೆಯಲ್ಲಿ. ಮೊದಲ ಸಂವಹನ ಪ್ರಾರಂಭವಾಗಿದ್ದು, ಜನಪದರಿಂದಲೇ ಎನ್ನುವುದು ಸತ್ಯದ ಸಂಗತಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ ಮಾತನಾಡಿ, ಸಂಭ್ರಮ ಉತ್ಸವದಲ್ಲಿ ಸಾಕಷ್ಟು ವಿದ್ವಾಂಸರನ್ನು, ಕಲಾವಿದರು ಹಾಗೂ ಯುವ ಮಾಧ್ಯಮ ಮಿತ್ರರನ್ನು ಒಗ್ಗೂಡಿಸಿರುವುದು ಒಂದು ಒಳ್ಳೆಯ ಕಾರ್ಯವಾಗಿದೆ. ಮಾಧ್ಯಮ ರಂಗದಲ್ಲಿ ಯುವ ಪತ್ರಿಕೋದ್ಯಮಿಗಳಿಗೆ ಇರುವ ಅವಕಾಶಗಳನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ. ಹಳ್ಳಿಯ ಸೊಗಡಿನ ಈ ಸಂಭ್ರಮ ಮುಂದೆಯೂ ನಡೆಯಲಿ. ಹಿರಿಯ ಪತ್ರಿಕೋದ್ಯಮಿಗಳು ಯುವ ಮಾಧ್ಯಮ ಮಿತ್ರರಿಗೆ ಇರುವ ಸವಾಲುಗಳು, ಜಾಗೃತಿಯ ಬಗ್ಗೆ ತಿಳಿಸಿದ್ದಾರೆ. ಅದರಂತೆ ಯುವ ಪತ್ರಕರ್ತರು ಮುಂದೆ ಸಮಾಜದ ಜಾಗೃತಿ ಮತ್ತು ಜನರಲ್ಲಿ ಬದಲಾವಣೆ ತರುವ ಕಾರ್ಯಗಳನ್ನು ಮಾಡಬೇಕಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಹಲವು ಕಾಲೇಜಿನ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೊತೆಗೆ ಜಿಲ್ಲೆಯಲ್ಲಿನ ಕಲಾವಿದರಾದ ಚಿಟ್ಟಿಮೇಳದ ಚಿಕ್ಕಹುಡ್ಡೇದಯ್ಯ, ತತ್ವಪದಕಾರರಾದ ಶಾರದಮ್ಮ, ಸೋಮನಕುಣಿತದ ಶಿವಶಂಕರಪ್ಪ, ಬಯಲಾಟ ಭಾಗವತರಾದ ಷಣ್ಮುಖಪ್ಪ, ಕರಪಾಲಮೇಳದ ಹನುಮಯ್ಯ, ವೀರಗಾಸೆಯ ರುದ್ರೇಶ್, ಅರೆವಾದ್ಯದ ನರಸಿಂಹಮೂರ್ತಿ, ಹಿರಿಯ ಕಲಾವಿದ ಬಿ.ಶಿವಣ್ಣ, ಜಾನಪದ ಕಲಾವಿದರಾದ ಹುಚ್ಚಪ್ಪದಾಸರು, ನಾರಾಯಣಪ್ಪ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ರೇಡಿಯೋ ಸಂಯೋಜಕರಾದ ಶಿವಾಜಿಗಣೇಶನ್,ಸಾಫ್ಟ್ ಸಿಲ್ಕ್ ಟ್ರೈನರ್ ಸಂತೋಷ್ ಅವ್ವನ್ನವರ್ ಸೇರಿದಂತೆ ಮಾಧ್ಯಮ ಅಧ್ಯಯನ ಕೇಂದ್ರದ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರೇಮ್‍ಸಾಗರ್, ಚೈತ್ರ ವಿ.ಆರ್ ನಿರೂಪಣೆಯನ್ನು ನೆರವೇರಿಸಿದ್ದು, ಗಿರೀಶ್‍ಚಂದ್ರ ಸ್ವಾಗತ ಮಾಡಿದರು, ಪವಿತ್ರ ಕೆ.ಆರ್. ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪಂಚಕುಂಚ ಕಲಾವಿದ ಪರಮೇಶ್‍ಗುಬ್ಬಿಯವರಿಂದ ಕಲೆಯನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆತರಲಾಗಿದ್ದು, ಮೆರವಣಿಗೆಯಲ್ಲಿ ಸೋಮನಕುಣಿತ ಸೇರಿದಂತೆ ವಿವಿಧ ಕಲಾವಿದರ ತಂಡಗಳು ಭಾಗವಹಿಸಿದ್ದವು.
ಮಾಧ್ಯಮಗಳು ವಾಸ್ತವ ಹೇಳುವಂತಾಗಬೇಕು.
ಮಂಗಳವಾರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಧಾನಿಯವರ ಭಾಷಣದ ವರದಿಯಲ್ಲಿ 13 ಬಾರಿ ಹಿಂದೂ ಪದ ಬಳಕೆ ಮಾಡಲಾಗಿದೆ. ಆದರೆ ಜನರ ಸಮಸ್ಯೆಗಳನ್ನು ಪ್ರಕಟಿಸುವಲ್ಲಿ ವಿಫಲವಾಗಿವೆ. ಇದರಿಂದ ಪತ್ರಿಕೋದ್ಯಮ ಹೊರ ಬರಬೇಕು. ವಾಸ್ತವ ಹೇಳುವ ಮಾಧ್ಯಮ ನಮಗೆ ಬೇಕಿದೆ.-ನಾಗೇಶ್ ಹೆಗಡೆ, ಅಂಕಣಕಾರರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
