ಮುಂದಾಲೋಚನೆ, ಮೇಲ್ವಿಚಾರಣೆ ಇಲ್ಲದೆ ನೆನೆಗುದಿಗೆ ಬಿದ್ದ ಕಾಮಗಾರಿಗಳು

ತುಮಕೂರು:
      ನಗರದಲ್ಲಿ ಹಾಲಿ ಕಾರ್ಯಾನುಷ್ಠಾನದಲ್ಲಿರುವ 531 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪೈಕಿ ಕೆಲವು ಈಗಾಗಲೇ ಪೂರ್ಣಗೊಂಡಿವೆ. ಇನ್ನು ಕೆಲವು ಪೂರ್ಣಗೊಳ್ಳುವ ಹಂತದಲ್ಲಿವೆ. ಮತ್ತೆ ಕೆಲವು ತೆವಳುತ್ತಾ ಸಾಗಿವೆ. ಕಾಮಗಾರಿಗಳು ಆರಂಭವಾಗಿ ವರ್ಷ ಮುಗಿದರೂ ಮುಕ್ತಿ ಕಾಣದ ಸ್ಥಿತಿಯಲ್ಲಿ ಪಳೆಯುಳಿಕೆಗಳ ರೀತಿಯಲ್ಲಿ ಇನ್ನು ಕೆಲವು ಕಾಣಿಸುತ್ತಿವೆ. 
      ಬಹು ನಿರೀಕ್ಷೆಯ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಿಯಮಾನುಸಾರ, ನಿರ್ದಿಷ್ಟ ಅವಧಿಯಲ್ಲಿ ನಡೆಯುತ್ತಿಲ್ಲ ಎಂಬುದು ಈಗಾಗಲೇ ಜನಜನಿತವಾಗಿದೆ. ಕಾಮಗಾರಿಗಳಲ್ಲಿ ಎದ್ದುಕಾಣುವ ಅವ್ಯವಸ್ಥೆ, ನಿರ್ಲಕ್ಷ್ಯತೆಗಳಿಂದ ಇಡೀ ಯೋಜನೆಯ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಾರದರ್ಶಕತೆ ಇಲ್ಲದೆ, ಮುಕ್ತ ಮಾಹಿತಿ ಇಲ್ಲದೆ ನಡೆಯುತ್ತಿರುವ ಕಾಮಗಾರಿಗಳು ಏನು? ಎತ್ತ ಎಂಬುದರ ಅರಿವಂತೂ ಸಾರ್ವಜನಿಕರಿಗೆ ಲಭಿಸುತ್ತಿಲ್ಲ. ಎಲ್ಲವೂ ಮುಗುಂ ಆಗಿ ನಡೆಯುತ್ತಿವೆ. 
      ಯಾವುದೇ ಕಾಮಗಾರಿಗಳು ಆರಂಭವಾಗುವ ಮುನ್ನ ಆ ಯೋಜನೆಯ ಬಗ್ಗೆ ಪೂರ್ವ ತಯಾರಿ ಹಾಗೂ ಯೋಜನಾ ಸಿದ್ಧತೆ ಇರಬೇಕು. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಅರಿವು ಇರಬೇಕು. ಆ ಪೂರ್ವಾಲೋಚನೆ ಇಟ್ಟುಕೊಂಡೇ ಯೋಜನೆಗಳು ಸಿದ್ಧಗೊಳ್ಳಬೇಕು.
     ಆದರೆ ಇಲ್ಲಿ ಈ ಯಾವ ಸಿದ್ಧತೆಗಳೂ ನಡೆದಂತೆ ಕಾಣುತ್ತಿಲ್ಲ. ಬಹಳ ಹಿಂದೆ ಅಂದರೆ 1994ರ ಅವಧಿಯಲ್ಲಿ ತುಮಕೂರು ನಗರದಲ್ಲಿ ಕೆಯುಐಡಿಎಫ್‍ಸಿ ವತಿಯಿಂದ ಕಾಮಗಾರಿಗಳು ನಡೆದವು. ಆಗಿನ ಕಾಮಗಾರಿಗಳು ಸಹ ಅವ್ಯವಸ್ಥೆಯಿಂದ ಕೂಡಿದ್ದವು. ಆನಂತರದ ದಿನಗಳಲ್ಲಿ ನಗರಕ್ಕೆ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನಗಳು ಒದಗಿಬಂದವು. ಆಗಲೂ ಇದೇ ಸ್ಥಿತಿ ನಿರ್ಮಾಣವಾಯಿತು. 
      ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಅಧಿಕಾರದಿಂದ ಇಳಿಯುವುದಕ್ಕೂ ಮುನ್ನ ಅಂದರೆ, 2006-07 ರಲ್ಲಿ ತುಮಕೂರು ನಗರದ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಟ್ಟರು. ನಗರದ ಬಹುತೇಕ ರಸ್ತೆಗಳು ಆಗ ನಿರ್ಮಾಣಗೊಂಡವು. 200 ಕೋಟಿ ರೂ.ಗಳಲ್ಲಿ ಅರ್ಧದಷ್ಟು ಹಣ ರಸ್ತೆಗಳಿಗಾಗಿಯೇ ವಿನಿಯೋಗವಾಯಿತು. ಆಗ ನಿರ್ಮಾಣಗೊಂಡ ರಸ್ತೆಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಈಗಲೂ ನೋಡಬಹುದು.
       100 ಕೋಟಿ ರೂ.ಗಳನ್ನು ರಸ್ತೆ ಮೇಲೆ ಹಾಕಿ ಅದ್ವಾನಗೊಂಡ ಆಗಿನ ರಸ್ತೆಗಳ ಸ್ಥಿತಿಯನ್ನು ಈಗ ನೋಡುತ್ತಿರುವವರಿಗೆ ಈ ಕಾಮಗಾರಿಗಳ ನೈಜತೆ ಅರ್ಥವಾಗುತ್ತದೆ. ಆಗ ನಿರ್ಮಾಣಗೊಂಡ, ದುರಸ್ತಿಗೊಂಡ, ನವೀಕರಣಗೊಂಡ ರಸ್ತೆಗಳೇ ಮತ್ತೆ ಮತ್ತೆ ಅಗೆತಕ್ಕೆ ಒಳಗಾಗುತ್ತಿವೆ. ರಸ್ತೆಯ ನಡುವೆ ಯುಜಿಡಿ ಸಂಪರ್ಕ ಕಲ್ಪಿಸಲಾಗಿತ್ತು. ಇದೊಂದು ಅವೈಜ್ಞಾನಿಕ ಎಂದು ಆಗ ಅನ್ನಿಸಲಿಲ್ಲವೆ? ಇವುಗಳನ್ನೆಲ್ಲ ತೆಗೆದು ಈಗ ರಸ್ತೆ ಬದಿಯಲ್ಲಿ ನಿರ್ಮಾಣ ಮಾಡಲಾಗಿದೆ.
        ಒಮ್ಮೆ ಕಾಮಗಾರಿಗಳನ್ನು ಕೈಗೊಂಡು ಮತ್ತೆ ಅದೇ ಕಾಮಗಾರಿಗಳನ್ನು ಬದಲಿಸಿದರೆ ತಗಲುವ ವೆಚ್ಚವೆಷ್ಟು ಎಂಬ ಸಾಮಾನ್ಯ ಜ್ಞಾನ ಯೋಜನೆಗಳನ್ನು ರೂಪಿಸುವವರಿಗೆ ಇರುವುದಿಲ್ಲವೆ? ಹಿಂದೆ ನಿರ್ಮಾಣಗೊಂಡಿರುವ ರಸ್ತೆಗಳನ್ನೇ ಈಗಲೂ ದುರಸ್ತಿಗೊಳಿಸಲಾಗುತ್ತಿದೆ. ಸ್ಮಾರ್ಟ್‍ಸಿಟಿ ಹಣ ಇದಕ್ಕೆಲ್ಲ ವಿನಿಯೋಗವಾಗುತ್ತಿದೆ. ಮತ್ತೆ ಮತ್ತೆ ಸಾರ್ವಜನಿಕರ ತೆರಿಗೆ ಹಣ ಇದರ ಮೇಲೆ ಬೀಳುತ್ತಿದೆ. ನಗರವನ್ನೆಲ್ಲ ಅಗೆದು ಮುಚ್ಚಿ, ಮತ್ತೆ ಅಗೆಯುವ, ಗುಂಡಿ ತೋಡುವ ಕಾಮಗಾರಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. 
      ವಿವಿಧ ರೀತಿಯ ಪೈಪ್‍ಗಳನ್ನು ಜೋಡಿಸಲು ಗುಂಡಿ ಅಗೆಯಲಾಗುತ್ತದೆ. ರಿಲಯನ್ಸ್, ಜಿಯೋ, ಪೈಪ್ ಸಂಪರ್ಕ, ಕುಡಿಯುವ ನೀರಿನ ಪೈಪ್‍ಲೈನ್, ಗ್ಯಾಸ್ ಪೈಪ್‍ಲೈನ್ ಹೀಗೆ ಹಲವು ವಿವಿಧ ಪೈಪ್ ಜೋಡಣೆಗಳನ್ನು ಇಲ್ಲಿಂದ ಸಂಪರ್ಕಿಸಲಾಗುತ್ತಿದೆ. ದುರಂತವೆಂದರೆ, ಹೀಗೆ ರಸ್ತೆ ಅಗೆತದ ಕಾಮಗಾರಿಗಳು ಒಟ್ಟಾರೆಯಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಕಾಮಗಾರಿಗಳು ಮತ್ತೊಂದು ಕಾಮಗಾರಿ ನಡೆಸುವವರಿಗೆ ತಿಳಿಯುತ್ತಿಲ್ಲ.
       ಒಂದು ಕಾಮಗಾರಿಗೂ ಮತ್ತೊಂದಕ್ಕೂ ಹೊಂದಾಣಿಕೆಯೇ ಇಲ್ಲ. ಒಬ್ಬರಿಗೊಬ್ಬರು ಸಂಪರ್ಕವೇ ಇಲ್ಲದ ರೀತಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಅವರಿಗೆ ಬೇಕಾದ ರೀತಿಯಲ್ಲಿ ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಇಂತಹ ಅವೈಜ್ಞಾನಿಕ ನಡೆಯಿಂದಲೇ ಹಲವು ಎಡವಟ್ಟುಗಳು ಸಂಭವಿಸುತ್ತಿವೆ. ಕುಡಿಯುವ ನೀರಿನ ಪೈಪ್‍ಗಳಿಗೆ ಹಾನಿಯಾಗುವುದು, ನೀರು ಸೋರಿಕೆಯಾಗುವುದು, ಮನೆಗಳಿಗೆ ನೀರು ಹೋಗುವುದು ಇತ್ಯಾದಿ ಅಡಚಣೆಗಳು ಈಗಾಗಲೇ ವರದಿಯಾಗುತ್ತಿವೆ. 
ಮೇಲ್ವಿಚಾರಣೆ ಇಲ್ಲವೆ?
        ಯಾವುದೇ ಕಾಮಗಾರಿಗಳು ನಡೆಯಲಿ ಅದಕ್ಕೆ ಮೇಲುಸ್ತುವಾರಿ ಇರಬೇಕು. ದಿನನಿತ್ಯ ಅವುಗಳ ಬಗ್ಗೆ ನಿಗಾ ವಹಿಸಬೇಕು. ಇಂತಹ ಕಾಮಗಾರಿಗಳ ಉಸ್ತುವಾರಿಗಾಗಿಯೇ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಇಂಜಿನಿಯರ್‍ಗಳು ಇದ್ದಾರೆ. ಇವರ ಜೊತೆಗೆ ಸಂಸ್ಥೆಯ ನಿರ್ವಹಣೆ ಹೊಣೆ ಹೊತ್ತ ಇಂಜಿನಿಯರ್ ಇರುತ್ತಾರೆ. ಇವರಲ್ಲದೆ ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಪರಿಶೀಲನೆಯೂ ಆಗಬೇಕು. ಈ ಎಲ್ಲ ವ್ಯವಸ್ಥೆಗಳು ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನದಲ್ಲಿ ಆಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಗುಣಮಟ್ಟದ ವರದಿ ಪರಿಶೀಲಿಸದೇ ಹೋದರೆ ಈ ಕಾಮಗಾರಿಗಳ ನೈಜತೆ ತಿಳಿಯುವುದಾದರೂ ಹೇಗೆ? 
ಅಧ್ಯಕ್ಷರ ಪಾತ್ರವೇನು?
      ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ಎಂಬ ಕಂಪನಿ ನಾಮಾಂಕಿತದಲ್ಲಿ ಅಧ್ಯಕ್ಷರೊಬ್ಬರನ್ನು ನೇಮಿಸಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಸ್ಥಾನದ ಐಎಎಸ್ ಅಧಿಕಾರಿಯೂ ಆಗಿರುವ ಶಾಲಿನಿ ರಜನೀಶ್ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಅಧ್ಯಕ್ಷರಾಗಿದ್ದು, ಎಲ್ಲ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆಗಾಗ್ಗೆ ಅಧಿಕಾರಿಗಳ ಸಭೆ ನಡೆಸಬೇಕು. ಇವರಿಗೆ ವಿಶೇಷ ಅಧಿಕಾರ ನೀಡಲಾಗಿದೆ.
      ಕಳೆದ 2 ತಿಂಗಳ ಸಮಯದಲ್ಲಿ ತುಮಕೂರು ನಗರದ ಸ್ಮಾರ್ಟ್‍ಸಿಟಿ ಅಧಿಕಾರಿಗಳೊಂದಿಗೆ ಇದೇ ಅಧಿಕಾರಿ ಸಭೆ ನಡೆಸಿದರು. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಿಡಿಮಿಡಿಗೊಂಡರು. ಯಾವುದೂ ಸರಿಇಲ್ಲ ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಂದಿನ ಆ ಸಿಡಿಮಿಡಿ, ಸಿಟ್ಟು ಒಂದೇ ವಾರದಲ್ಲಿ ಮಾಯವಾಯಿತೇಕೆ? 
       ಈ ಸಭೆಯಾದ ಬಳಿಕ ಒಂದು ವಾರಕ್ಕೆ ಮತ್ತೆ ಆಗಮಿಸಿ ಸಭೆ ನಡೆಸಿದ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಶಹಬ್ಬಾಶ್ ಗಿರಿ ಕೊಟ್ಟರು. ಕಾಮಗಾರಿಗಳ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು. ಇದರ ಗುಟ್ಟಾದರೂ ಏನು ಎಂಬುದು ಇಂದಿಗೂ ತಿಳಿಯುತ್ತಿಲ್ಲ. ಒಮ್ಮೆ ಅಧಿಕಾರಿಗಳನ್ನು ಬೈಯ್ದು ಹೋದವರು ಮತ್ತೊಮ್ಮೆ ಬಂದು ಬೆನ್ನುತಟ್ಟಿ ಹೋಗುತ್ತಾರೆಂದರೆ ಸ್ಮಾರ್ಟ್‍ಸಿಟಿ ಕಾಮಗಾರಿಗಳ
ಪರಿಸ್ಥಿತಿ ಏನಾಗಬೇಕು? 
        ಕಾಮಗಾರಿಗಳನ್ನು ಗುತ್ತಿಗೆ ಪಡೆಯುವವರು ಮುಂದಿನ ಆಗುಹೋಗುಗಳನ್ನು ಅರಿತೇ ದರ ನಮೂದಿಸಿರುತ್ತಾರೆ. ಸಣ್ಣ ಸಣ್ಣ ಅಂಶಗಳನ್ನೂ ಬಿಡದೆ ಲೆಕ್ಕಹಾಕಿರುತ್ತಾರೆ. ಅದಕ್ಕೆ ತಕ್ಕಂತೆ ಬಿಲ್ ಸಿದ್ಧಪಡಿಸುತ್ತರೆ. ಇದೇ ಕೋಟ್ಯಂತರ ರೂ.ಗಳಾಗುತ್ತದೆ. ಕೋಟಿಗಟ್ಟಲೆ ರೂ.ಗಳ ಕಾಮಗಾರಿ ನಡೆಸುತ್ತಿರುವವರು ಯಾರ ಹಂಗಿಗೂ ಸಿಗದಂತೆ ಇದ್ದಾರೆ. ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಲ್ಲರೂ ಪರಸ್ಪರ ಚರ್ಚಿಸಿ ಹೊಂದಾಣಿಕೆಯೊಂದಿಗೆ ಕಾಮಗಾರಿ ನಿರ್ವಹಣೆ ಮಾಡುವ ವ್ಯವಸ್ಥೆಯಂತೂ ಇಲ್ಲಿ ಕಾಣುತ್ತಿಲ್ಲ. ಹೀಗಾಗಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಅಯೋಮಯ ಎನ್ನುವಂತಾಗಿದೆ. 
       ತುಮಕೂರು: ಸ್ಮಾರ್ಟ್ ಹೆಸರೇ ಹೇಳುವಂತೆ ಇಡೀ ಕಾಮಗಾರಿಗಳು ಸ್ಮಾರ್ಟ್ ಆಗಿಯೇ ನಡೆಯಬೇಕು. ಅಂತಿಮವಾಗಿ ಈ ನಗರ ಸುಂದರವಾಗಬೇಕು. ಆದರೆ ಯಾವ ದೃಷ್ಟಿಕೋನದಿಂದ ನೋಡಿದರೂ ಈಗಿನ ಕಾಮಗಾರಿಗಳು ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಅಧಿಕಾರಿಗಳು, ನಾಯಕರು ಮತ್ತು ಫಲಾನುಭವಿಗಳು ಮಾತ್ರವೇ ಸ್ಮಾರ್ಟ್ ಆಗುತ್ತಿರಬಹುದೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಕಾಮಗಾರಿಗಳ ಬಗ್ಗೆ ಪ್ರಶ್ನೆ ಮಾಡಬೇಕಿರುವವರು, ಅದರ ಗುಣಮಟ್ಟ ಪ್ರಶ್ನಿಸಬೇಕಿರುವವರು ಮೌನ ವಹಿಸಿದರೆ ಅದರ ಹಿಂದಿರುವ ಕಾರಣವಾದರೂ ಏನು? ಎಂಬ ಗುಮಾನಿ ಬರುವುದು ಸಹಜವಲ್ಲವೆ? 
      ಮಹಾನಗರ ಪಾಲಿಕೆಯ ಸದಸ್ಯರ ಸ್ಥಿತಿಯಂತೂ ನೆಪಮಾತ್ರ ಸದಸ್ಯರು ಎನ್ನುವಂತಾಗಿದೆ. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಸಂಪೂರ್ಣ ಚಿತ್ರಣ ಇವರಿಗೂ ತಿಳಿದಿಲ್ಲ. ನನ್ನ ವಾರ್ಡ್‍ನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೇ ಅವರಿಗೆ ಇಲ್ಲವಾದರೆ ಸದಸ್ಯರಾಗಿ ಇದ್ದುಕೊಂಡು ಪ್ರಯೋಜನವಾದರೂ ಏನು? ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಅವರೂ ಉತ್ತರಿಸಲಾಗದೆ ಹೈರಾಣಾಗಿ ಹೋಗಿದ್ದಾರೆ. ಮತದಾರರು ಇವರ ಹಿಂದೆ ಬೀಳುತ್ತಿದ್ದಾರೆ. ಕಾಮಗಾರಿಗಳ ಅವ್ಯವಸ್ಥೆಯ ಬಗ್ಗೆ ಕಾರ್ಪೋರೇಟರ್‍ಗಳನ್ನೇ ಪ್ರಶ್ನಿಸುತ್ತಿದ್ದಾರೆ. ತಾವು ಗೆಲ್ಲಿಸಿದ ಜನನಾಯಕರನ್ನಲ್ಲದೆ ಮತ್ಯಾರನ್ನು ಪ್ರಶ್ನಿಸಲು ಸಾಧ್ಯ? ಸಾರ್ವಜನಿಕರ ಜವಾಬ್ದಾರಿ ಯೋಜನೆ ಜಾರಿಯಾಗುವ ಪ್ರದೇಶದ ಜನರ ಸಹಭಾಗಿತ್ವದಿಂದಲೇ ಕಾಮಗಾರಿಗಳು ರೂಪುಗೊಳ್ಳಬೇಕು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ