ತುರುವೇಕೆರೆ:
ಎಲ್ಲಾ ಇಲಾಖಾಧಿಕಾರಿಗಳನ್ನು ಸಭೆಗೆ ಕರೆಸಿ ಸರಿಯಾದ ಮಾಹಿತಿ ನೀಡದಿದ್ದಲ್ಲಿ ಸಾಮಾನ್ಯ ಸಭೆಯನ್ನೇಕೆ ಕರೆಯುತ್ತೀರಿ? ಹೀಗೆ ಕಣ್ಣೊರೆಸುವ ಕೆಲಸ ಮಾಡುತ್ತಿದ್ದು ನಮ್ಮ ಕ್ಷೇತ್ರದ ಜನತೆಗೆ ನಾವೇನು ಉತ್ತರ ಕೊಡಲಿ ಎಂದು ತಾ.ಪಂ. ಸದಸ್ಯ ಹರಳಕೆರೆ ಮಹಾಲಿಂಗಯ್ಯ ಇ.ಓ. ರವರನ್ನು ಪ್ರಶ್ನಿಸಿದ ಪ್ರಸಂಗ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನರವೀಂದ್ರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯ್ತಿ ಆವರಣದಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದಿನ ಸಬೆಗಳಲ್ಲಿ ಕೈಗೊಂಡ ಯಾವುದೇ ನಿರ್ಣಯಗಳು ಪೂರ್ಣಗೊಂಡಿಲ್ಲ. ಯಾವ ಪುರುಷಾರ್ಥಕ್ಕೆ ಸಾಮಾನ್ಯ ಸಭೆ ಮಾಡಬೇಕು. ಈ ತರಹದ ಸಭೆ ನಡೆಸುವುದರಿಂದ ನಮ್ಮ ಹಾಗೂ ಅಧಿಕಾರಿಗಳ ಸಮಯ ವ್ಯರ್ಥವಾಗಲಿದೆ. ತಾ.ಪಂ ಸದಸ್ಯರಾಗಿ ಎರಡುವರೆ ವರ್ಷ ಕಳೆದರೂ ಸಮರ್ಪಕವಾಗಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿ ಮುಂದಿನ ಸಭೆಯೊಳಗೆ ಇ.ಓರವರು ಹೆಚ್ಚಿನ ಕಾರ್ಯ ಪ್ರವೃತ್ತರಾಗಿ ಉಳಿದಿರುವ ನಿರ್ಣಯಗಳನ್ನು ಕಾರ್ಯ ರೂಪಕ್ಕ ತರಬೇಕೆಂದು ಒತ್ತಾಯಿಸಿದರು.
ತಾ.ಪಂ. ಉಪಾಧ್ಯಕ್ಷ ನಂಜೇಗೌಡ ಮಾತನಾಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ರೀತಿಯ ಚಿಕಿತ್ಸೆ ನೀಡುತ್ತಿಲ್ಲ. ಪುರುಷ ಹಾಗೂ ಮಹಿಳಾ ರೋಗಿಗಳಿಗೆ ಒಂದೇ ಕೊಠಡಿಯಲ್ಲಿ ಚುಚ್ಚು ಮದ್ದು ನೀಡಲಾಗುತ್ತಿದೆ. ಕೂಡಲೇ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೊಠಡಿಯನ್ನು ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ತಿರುಪತಯ್ಯ ಅವರಿಗೆ ತಿಳಿಸಿದರು.
ತಾ.ಪಂ ಸದಸ್ಯ ಸಿ.ವಿ.ಮಹಾಲಿಂಗಯ್ಯ ಮಾತನಾಡಿ ತಾಲೂಕಿನ ಆಸ್ಪತ್ರೆಗಳ ಅಭಿವೃದ್ದಿ, ಆಶಾ ಕಾರ್ಯಕರ್ತರ ತರಬೇತಿಗಳಿಗಾಗಿ ಲಕ್ಷಾಂತರ ರೂಗಳನ್ನು ಸರ್ಕಾರ ನೀಡುತ್ತಿದೆ ಆದರೆ ತಾಲೂಕು ವೈದ್ಯಾದಿಕಾರಿಗಳಾಗಿ ಜನರಿಗೆ ಅರಿವು ಮೂಡಿಸುವಂತಹ ಒಂದು ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಪ್ರಶ್ನಿಸಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೂರು ಹಾಸಿಗೆಯಳ್ಳ ಆಸ್ಪತ್ರೆ ಆದರೆ ಒಂದು ಸಣ್ಣ ಅಪಘಾತವಾದರೂ ಬೇರೆ ಆಸ್ಪತ್ರೆಗೆ ಕಳಿಸಲಾಗುತ್ತದೆ.
ಆಸ್ಪತ್ರೆಯಲ್ಲಿರುವ ಯಂತ್ರಗಳು ಉಪಯೋಗಿಸದೆ ಕೆಟ್ಟುಹೋಗಿವೆ, ಬಡವರು ಬ್ಲಡ್, ಶುಗರ್ ಚಕ್ ಮಾಡಿಸಲು ಬಂದರೆ ಅವರಿಗೆ ಖಾಸಗಿ ಲ್ಯಾಬ್ಗೆ ಕಳಿಸಲಾಗುತ್ತಿದೆ. ಸುಮಾರು 10 ಗಂಟೆಯಾದರೂ ವೈದ್ಯರು, ಸಿಬ್ಬಂದಿಗಳು ಆಗಮಿಸಲ್ಲ ಎಂದು ದೂರಿದರು.
ಕೃಷಿ ಇಲಾಖೆಯಲ್ಲಿ ತುಂಬಾ ಲೋಪದೋಷಗಳಿದ್ದುಅಧಿಕಾರಿಗಳು ರೈತರಿಗೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸದಸ್ಯ ಸ್ವಾಮಿ ಆರೋಪಿಸಿದರು.
ಸರ್ಕಾರಿ ಗೋಮಾಳ ಅಕ್ರಮ ಖಾತೆ: ಸದಸ್ಯ ಡಿ.ಸಿ.ಕುಮಾರ್ ಮಾತನಾಡಿ ಅಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ಕಾರಿ ಗೋಮಾಳ ಭೂಮಿಯನ್ನು ಅಧಿಕಾರಿಗಳು ಹಣ ಪಡೆದು ಅಕ್ರಮವಾಗಿ ಸೈಟ್ಗಳಾಗಿ ಮಾಡಿ ಇ ಸೊತ್ತು ಮೂಲಕ ಖಾತೆ ಮಾಡಿಕೊಡಲಾಗುತ್ತಿದೆ. ಈಗಾಗಲೇ ಸುಮಾರು 70ಕ್ಕೂ ಹೆಚ್ಚು ಸೈಟ್ ಗಳನ್ನು ಖಾತೆ ಮಾಡಲಾಗಿದೆ. ಸಭೆಯಲ್ಲಿ ತಿಳಿಸಿದ್ದರು ಇ.ಓ ರವರು ಅಲ್ಲಿನ ಪಿಡಿಓರ ಮೇಲೆ ಕ್ರಮ ಕೈಗೊಂಡಿಲ್ಲ ಅಂದು ಆರೋಪಿಸಿದರು.
ಇ.ಓ.ಗಂಗಾಧರನ್ ಮಾತನಾಡಿ ಅಮ್ಮಸಂದ್ರ ಗ್ರಾಮ ಪಂಚಾಯ್ತಿಯ ಸರ್ಕಾರಿ ಗೋಮಾಳ ಇ ಸೊತ್ತು ಖಾತೆಗೆ ಸಂಬಂದಿಸಿದಂತೆ 11ಎ ನಲ್ಲಿ ಏನಿದೆ ಎಂದು ಪರಿಶೀಲಿಸಿ ಲೋಪಗಳು ಕಂಡು ಬಂದರೆ ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆದು ತನಿಖೆಗೆ ಒತ್ತಯಿಸಲಾಗುವುದು ಎಂದು ತಿಳಿಸಿ ಡಿ.5 ರಂದು ತಾಲೂಕಿನ ಎಲ್ಲ ಪಿಡಿಓ, ಕಾರ್ಯದರ್ಶಿ, ನರೇಗಾ ಇಂಜಿನಿಯರ್ ಗಳ ಸಭೆಯನ್ನು ಕರೆಯಲಾಗಿದ್ದು ಸದಸ್ಯರುಗಳು ಯಾವುದೇ ಸಮಸ್ಯೆಗಳಿದ್ದರೆ ಚರ್ಚೆ ಮಾಡಬಹುದು ಎಂದು ತಿಳಿಸಿದರು.
ಸದಸ್ಯತ್ವಕ್ಕೆ ರಾಜಿನಾಮೇ ನೀಡುವೇ: ಕಳೆದ ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಂಭಂದ ಪಟ್ಟ ಅಧಿಕಾರಿಗಳು ಸರಿಯಾದ ಉತ್ತರ ನೀಡಿಲ್ಲ ಎಂದು ಆರೋಪಿಸಿ. ಕಳೆದ 6 ತಿಂಗಳಿನಿಂದ ಇದೇ ಆಗಿದೆ. ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಲಿದ್ದಾರೆ ಎಂದು ಸಭೆಯಿಂದ ಹೊರನಡೆಯುವುದಾಗಿ ತಿಳಿಸಿ ಇದೇ ರೀತಿ ಧೋರಣೆಗಳು ಮುಂದುವರೆದರೆ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಕೊಡಲಾಗುವುದು ಎಂದು ಸದಸ್ಯ ಡಿ.ಸಿ.ಕುಮಾರ್ ಎಚ್ಚರಿಸಿದರು.
ಕಿರಿಯ ಇಂಜಿನಿಯರ್ಗಳಿಗೆ ಒತ್ತಾಯ: ಜಿಲ್ಲಾ ಪಂಚಾಯ್ತಿ ಹಾಗೂ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಒಬ್ಬರೂ ಇಂಜಿನಿಯರ್ ಇಲ್ಲದೆ ಯಾವುದೇ ಕಾಮಗಾರಿಗಳು ನೆಡೆಯುತ್ತಿಲ್ಲ. ಕೂಡಲೇ ಸಿಇಓ ಹಾಗೂ ಶಾಸಕರನ್ನು ಬೇಟಿ ಮಾಡಿ ಮನವಿ ಮಾಡೋಣ ನಂತರ ತುಮಕೂರು ಜಿಲ್ಲಾ ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡೋಣ ಎಂದು ಸದಸ್ಯರು ಒಕ್ಕೊರಲಿನಿಂದ ತಿರ್ಮಾನಿಸಿದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ನಾಗರತ್ನರವೀಂದ್ರ, ಸ್ಥಾಯಿಸಮಿತಿ ಅಧ್ಯಕ್ಷ ಬೈರಪ್ಪ, ಸದಸ್ಯರಾದ ಹೇಮಾವತಿಶಿವಾನಂದ್, ತೀರ್ಥಕುಮಾರಿರವಿಕುಮಾರ್, ತೇಜಾವತಿ, ಕೆಂಪಮ್ಮ, ಮಂಜುನಾಥ್, ಸುವರ್ಣಶ್ರೀನಿವಾಸ್, ಕೆಂಪಲಕ್ಷ್ಮಮ್ಮ ಸೇರಿದಂತೆ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
