ಹುಳಿಯಾರು
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಕಳೆದ 45 ದಿನಗಳಿಂದ ಅಂಗಡಿಯಿಂದ ಮಾಲ್‍ವರೆಗೆ ಎಲ್ಲದಕ್ಕೂ ಬೀಗ ಹಾಕಲಾಗಿದೆ. ಬಸ್ಸುಗಳು, ಕಾರುಗಳು, ಟ್ಯಾಕ್ಸಿಗಳು, ಆಟೋಗಳು ರಸ್ತೆಗಿಳಿಯದೆ ರಸ್ತೆಗಳು ನಿರ್ಜನವಾಗಿವೆ.
ಜೊತೆಗೆ ಇವುಗಳನ್ನೇ ನಂಬಿ ಜೀವನ ಸಾಗಿಸುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ.ಈಗ ಲಾಕ್‍ಡೌನ್ ಸಡಿಲಿಸಿದ್ದು ಕ್ಯಾಬ್, ಓಲಾ, ಉಬರ್‍ಗಳನ್ನು ಕೆಲ ಷರತ್ತಿನ ಮೇರೆಗೆ ರಸ್ತೆಗಿಳಿಯಲು ಅನುಮತಿ ನೀಡಿದೆ. ಆದರೆ ಆಟೋಗಳಿಗೆ ಮಾತ್ರ ಇನ್ನೂ ಅಜ್ಞಾತವಾಸ ಮುಂದುವರಿದಿದ್ದು, ಆಟೋ ಚಾಲಕರಿಗೆ ಸದ್ಯಕ್ಕೆ ಕೆಲಸ ಇಲ್ಲದಾಗಿದೆ. ಪರಿಣಾಮ ಬರೊಬ್ಬರಿ 45 ದಿನಗಳಿಂದ ದುಡಿಮೆಯಿಲ್ಲದೆ ಲಾಕ್ ಡೌನ್ ತೆರವು ಆಗುವುದನ್ನೇ ಎದುರು ನೋಡುತ್ತಿದ್ದ ಆಟೋ ಚಾಲಕರಿಗೆ ತೀವ್ರ ನಿರಾಸೆ ಮೂಡಿಸಿದೆ.
ಹುಳಿಯಾರು ಪಟ್ಟಣದಲ್ಲಿ ಮುನ್ನೂರಕ್ಕೂ ಅಧಿಕ ಆಟೋರಿಕ್ಷಾಗಳಿವೆ. ಕೆಲವನ್ನು ಮಾಲೀಕರೆ ಓಡಿಸುತ್ತಾರೆ, ಇನ್ನು ಕೆಲವನ್ನು ಗುತ್ತಿಗೆ ಅಥವ ದಿನಗೂಲಿ ಆಧಾರದಲ್ಲಿ ಚಾಲಕರು ಓಡಿಸುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಆಟೋ ಚಾಲಕರ ಕುಟುಂಬಗಳು ಈಗ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆದರೆ ಇವರ ನೆರವಿಗೆ ಸರ್ಕಾರ, ತಾಲ್ಲೂಕು ಆಡಳಿತ, ದಾನಿಗಳಾದಿಯಾಗಿ ಯಾರೊಬ್ಬರೂ ಬಾರದೆ ನಿರ್ಲಕ್ಷಿಸಿದ್ದಾರೆ.
ಸಂಸಾರ ದೂಡುವ ಸಮಸ್ಯೆ ಒಂದೆಡೆಯಾದರೆ ಮನೆಯ ಎದುರಿನಲ್ಲಿ ನಿಲ್ಲಿಸಿಕೊಂಡಿರುವ ಆಟೊಗಳಲ್ಲಿ ಧೂಳು ತುಂಬುತ್ತಿರುವುದು ಹಾಗೂ ನಿಂತಲ್ಲಿಯೇ ನಿಂತು ಎಂಜಿನ್‍ಗಳು ಹಾಳಾಗುವ ಆತಂಕ ಇನ್ನೊಂದೆಡೆಯಾಗಿದೆ. ಲಾಕ್‍ಡೌನ್ ಸಡಿಲಿಸಿರುವುದರಿಂದ ಸಹಜವಾಗಿ ಸಾಲ ಮರುಪಾವತಿಗೆ ಕೇಳುವ ಮೈಕ್ರೋ ಫೈನಾನ್ಸ್‍ಗಳ ಸಾಲ ತೀರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಆಟೋ ಚಾಲಕರ ಈ ಸಂಕಷ್ಟಕ್ಕೆ ತುರ್ತು ಸ್ಪಂದಿಸುವ ಅಗತ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ