ತುಮಕೂರು
ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ನೇಕಾರರನ್ನು ಗುರುತಿಸದೆ ನಿರ್ಲಕ್ಷಿಸಿಕೊಂಡು ಬಂದವು, ಆದರೆ ಬಿಜೆಪಿ ಮಾತ್ರ ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ನೆರವಾಗಿದೆ, ಈ ಕಾರಣಕ್ಕೆ ರಾಜ್ಯದ 28 ಕ್ಷೇತ್ರಗಳಲ್ಲೂ ನೇಕಾರ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ರಾಜ್ಯ ನೇಕಾರ ಮಹಾಸಭಾ ಅಧ್ಯಕ್ಷ ಬಿ ಎಸ್ ಸೋಮಶೇಖರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 2015ರ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿ ಪ್ರತಿವರ್ಷ ಈ ದಿನವನ್ನು ನೇಕಾರರು ಸಂಭ್ರಮದಿಂದ ಆಚರಿಸಲು ಅನುವು ಮಾಡಿ, ಸಮಾಜಕ್ಕೆ ಧ್ವನಿ ನೀಡಿದರು ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದೇವರ ದಾಸಿಮಯ್ಯ ದಿನಾಚರಣೆಗೆ ಅವಕಾಶ ಮಾಡಿಕೊಟ್ಟರು. ಸಮಾಜದ ಮುಖಂಡರೊಬ್ಬರು ಶಾಸಕರಾಗಲು ಅವಕಾಶ ಮಡಿಕೊಟ್ಟಿದ್ದು ಬಿಜೆಪಿಯೇ, ನೇಕಾರರ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು, ಆದರೆ ನಂತರ ಬಂದ ಸರ್ಕಾರ ಈ ಭರಸೆಯನ್ನು ಈಡೇರಿಸಲಿಲ್ಲ ಎಂದು ಆಪಾದಿಸಿದರು.
ಮೋದಿ ಸ್ಪರ್ಧಿಸಿರುವ ವಾರಣಾಸಿ ಕ್ಷೇತ್ರದಲ್ಲಿ ನೇಕಾರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ, ರಾಜ್ಯದಲ್ಲಿಯೂ ನೇಕಾರರು ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಚಲಾಯಿಸಲು ತೀಮಾನಿಸಿರುವುದಾಗಿ ಹೇಳಿದರು.
ಮುದ್ರ ಯೋಜನೆ, ಗ್ಯಾಸ್ ಸಂಪರ್ಕ, ಅಟೆಲ್ ಪಿಂಣಿ ಯೋಜನೆ, ಪ್ರಧಾನ ಮಂತ್ರಿ ಜನ್‍ಧನ್, ಉಜ್ವಲ್ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಮೊದಲಾದ ಕಾರ್ಯಕ್ರಮಗಳು ನೇಕಾರರೂ ಸೇರಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಿವೆ ಎಂದು ಸೋಮಶೇಖರ್ ಹೇಳಿದರು.
ನೇಕಾರರ ಸಂಘದ ಜಿಲ್ಲಾಧ್ಯಕ್ಷ ಗಂಗಪ್ಪ ಮಾತನಾಡಿ, ರೈತರು ಹಾಗೂ ನೇಕಾರರು ಸಮಾಜದ ಎರಡು ಕಣ್ಣುಗಳಂತೆ ಎಂದು ಹೇಳಲಾಗುತ್ತದೆ, ರೈತರ ಬಗ್ಗೆ ಎಲ್ಲಾ ಸರ್ಕಾರಗಳು ಬಗ್ಗೆ ಕಾಳಜಿ ಹೊಂದಿರುತ್ತವೆ, ಆದರೆ ನೇಕಾರರ ಸಮಸ್ಯೆಗಳ ಬಗ್ಗೆ ಯಾವ ಸರ್ಕಾರವೂ ಗಮನಹರಿಸಲಿಲ್ಲ, ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಲಿಲ್ಲ, ಈ ಸ್ಥಿತಿಯಲ್ಲಿ ಬಿಜೆಪಿಯಿಂದ ನೇಕಾರರಿಗೆ ಹೆಚ್ಚು ನ್ಯಾಯ ಸಿಕ್ಕಿದೆ, ಹೀಗಾಗಿ, ಬಿಜೆಪಿಯನ್ನು ಸಮುದಾಯ ಬೆಂಬಲಿಸುತ್ತದೆ ಎಂದು ಹೇಳಿದರು.
ನೇಕಾರರು ರಾಜಕೀಯವಾಗಿ ಪ್ರಬಲರಾಗಿಲ್ಲ, ಒಬ್ಬ ಶಾಸಕರನ್ನು ಭೇಟಿ ಮಾಡಲು ಹಿಂಜರಿಯುವ ಪರಿಸ್ಥಿತಿ ಇದೆ, ಹೀಗಿರುವಾಗ ಜವಳಿ ಖಾತೆಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ, ನಮ್ಮ ಸಮುದಾಯದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, 9 ತಿಂಗಳಿನಿಂದ ಮುಖ್ಯಮಂತ್ರಿಗಳು ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ ಎಂದರು.
ಬಡ ನೇಕಾರರ ನೆರವಿಗೆ ಸರ್ಕಾರಗಳು ಬರಬೇಕು ತಮಿಳು ನಾಡಿನಲ್ಲಿ ಇರುವಂತೆ ಸರ್ಕಾರ ನೇಕಾರರ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಬೇಕು, ಗುರುತಿನ ಚೀಟಿ ಕೊಡಬೇಕು, ನಿವೇಶನ ಮತ್ತಿತರ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಮುಖಂಡರು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನೇಕಾರರ ಸಮಾಜದ ಮುಖಂಡರಾದ ಪರಂಧಾಮಯ್ಯ, ಧನಿಯಾಕುಮಾರ್, ರಾಮಕೃಷ್ಣಯ್ಯ, ದೇವರಾಜು, ಎಸ್ ವಿ ವೆಂಕಟೇಶ್, ಕಮಲಮ್ಮ, ಭಾರತಿ ರಾಜ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
