ಸಮಗ್ರ ನೀರಾವರಿಗೆ ನನ್ನ ಮೊದಲ ಆದ್ಯತೆ: ಜಿ ಎಸ್ ಬಸವರಾಜು

ತುಮಕೂರು

ನಿಗದಿತ ಹೇಮಾವತಿ ನೀರು ಹರಿಯದಿರಲು ನಾಲಾ ಸಮಸ್ಯೆ ಕಾರಣವಲ್ಲವೆ?

      ಈ ವಿಷಯದ ಬಗ್ಗೆಯೇ ನಾನು ಹೋರಾಡುತ್ತಿರುವುದು. ತುಮಕೂರು ನಾಲಾ ವಲಯಕ್ಕೆ 24 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿದೆ. ಅಷ್ಟು ನೀರನ್ನು ಹರಿಸುತ್ತಿಲ್ಲ. ನಾಲಾ ಆಧುನೀಕರಣವಾಗಬೇಕು ಎಂದು ನಾನು ಒತ್ತಾಯಿಸುತ್ತಲೇ ಬಂದಿದ್ದೇನೆ. 2400 ಕ್ಯುಸೆಕ್ಸ್ ನೀರು ನಾಲೆಯಲ್ಲಿ ಹರಿಯುವಂತಾಗಬೇಕು. ಈ ಪ್ರಮಾಣದಲ್ಲಿ ಒಂದು ವಾರ ನೀರು ಹರಿಸಿದರೆ ಸಾಕು ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. 0-72 ಕಿ.ಮೀ.ವರೆಗೆ ಆಧುನೀಕರಣವಾಗಿರುವ ನಾಲೆಯನ್ನು 0-120 ಬುಗುಡನಹಳ್ಳಿಯವರೆಗೂ ವಿಸ್ತರಿಸಬೇಕು.

       ಪ್ರಸ್ತುತ 1400 ಕ್ಯುಸೆಕ್ಸ್ ನೀರು ಹರಿಯುವ ಬಗ್ಗೆ ಅಧಿಕಾರಿಗಳು ಹೇಳುತ್ತಾರೆ. ನನ್ನ ಪ್ರಕಾರ ವಾಸ್ತವವಾಗಿ 700 ಕ್ಯೂಸೆಕ್ಸ್ ನೀರು ಹರಿಯುವುದೇ ಹೆಚ್ಚು. ಈ ವರ್ಷ ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಂದು 67 ಟಿ.ಎಂ.ಸಿ.ಯಷ್ಟು ನೀರು ವ್ಯಯವಾಗಿ ಹೋಯಿತು. ಇದನ್ನು ತಡೆದಿಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕಿತ್ತಲ್ಲವೆ? ಮಳೆಗಾಲದಲ್ಲಿ ಸಮುದ್ರದ ಪಾಲಾಗುವ ಹೇಮಾವತಿ ಪ್ರವಾಹದ ನೀರನ್ನು (ಫ್ಲಡ್ ಫ್ಲೋ) ಬಳಸಿಕೊಳ್ಳಲು ಏಕೆ ಮುಂದಾಗುತ್ತಿಲ್ಲ ಎಂಬುದೇ ನನ್ನ ಪ್ರಶ್ನೆ.

        ತುಮಕೂರು ಹೇಮಾವತಿ ನಾಲಾ ಕಾಲುವೆಯ ನೀರು ಹರಿಯುವ ಸಾಮಥ್ರ್ಯ ಹೆಚ್ಚಿಸಿದಲ್ಲಿ ಇದೇ ಕಾಲುವೆಯಲ್ಲಿ ನೀರು ಹರಿದು ಹೋಗಲಿದೆ. ಕಾಲುವೆಯ 5 ಕಡೆ ಎಂಬ್ಯಾಕ್ಟ್‍ಮೆಂಟ್ (ಏರಿ ಆಕಾರದ ಕಾಲುವೆ) ನೀರು ಹರಿಸಿದರೆ ಹೊಡೆದು ಹೋಗುತ್ತದೆ. ಇಲ್ಲಿ 700 ಕ್ಯೂಸೆಕ್ಸ್ ನೀರು ಮಾತ್ರ ಹರಿಸಬಹುದು. ಜಿಲ್ಲೆಗೆ ಕಡಿಮೆ ನೀರು ಬರಲು ಇದೇ ಕಾರಣ. ಕಾಲುವೆ, ಎಂಬ್ಯಾಕ್ಟ್‍ಮೆಂಟ್ ಸಾಮಥ್ರ್ಯವನ್ನು ಹೆಚ್ಚಿಸಿ ನೀರಿನ ಪ್ರಮಾಣ ಹೆಚ್ಚಿಸಬೇಕೆಂದೇ ನಾನು ಹೋರಾಟ ಮಾಡುತ್ತಿರುವುದು.

 ಶ್ರೀರಂಗ ಏತ ನೀರಾವರಿ ಬಗ್ಗೆ ನಿಮ್ಮ ವಿರೋಧ ವೇಕೆ?

       ನಮಗೆ ಹಂಚಿಕೆ ಮಾಡಿರುವ ನೀರಿನಲ್ಲಿ ಸುಮಾರು 1 ಟಿ.ಎಂ.ಸಿ. ಅಡಿ ನೀರನ್ನು ಕುಡಿಯುವ ನೀರಿಗಾಗಿ ಮಾಗಡಿಗೆ ಕೊಂಡೊಯ್ಯಲು ಶ್ರೀರಂಗ ಏತ ನೀರಾವರಿ ಯೋಜನೆ ಜಾರಿ ಮಾಡಿದಾಗ ನಾನು ವಿರೋಧಿಸಲಿಲ್ಲ. ಆದರೆ ಈಗ ಪ್ರತ್ಯೇಕ ಕೊಳವೆ ಮಾರ್ಗದ ಮೂಲಕ ಗುಬ್ಬಿ ತಾಲ್ಲೂಕು ಎಚ್‍ಎಎಲ್ ಹಿಂಭಾಗದಿಂದ ಕುಣಿಗಲ್ ರಸ್ತೆಯವರೆಗೆ – ತುಮಕೂರು ಕಾಲುವೆಯ 70 ಕಿ.ಮೀ.ಯಿಂದ 165 ಕಿ.ಮೀ. ವರೆಗೆ 614 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಇದು ನೀರಾವರಿ ಪಾಲಿಸಿಗೆ ವಿರುದ್ಧವಾದುದು. ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಿದೆ.

 ಎತ್ತಿನಹೊಳೆ ಯೋಜನೆ ಬಯಲು ಸೀಮೆ ಪ್ರದೇಶಕ್ಕೆ ಅನುಕೂಲವೇ?

       ನೇತ್ರಾವತಿ ನದಿ ಪಾತ್ರದಿಂದ ಬಯಲು ಸೀಮೆ ಪ್ರದೇಶಕ್ಕೆ ನೀರು ತರಲು ಜಿ.ಎಸ್.ಪರಮಶಿವಯ್ಯ ಯೋಜನೆ ರೂಪಿಸಿದಾಗ ಅವರ ಜೊತೆಗೂಡಿ ಶ್ರಮಿಸಿದ್ದೇನೆ. ಬಯಲು ಸೀಮೆಗೆ ನೀರು ಕೊಡಬಾರದೆಂಬ ಉದ್ದೇಶದಿಂದಲೇ ನಮ್ಮ ರಾಜ್ಯದ ಕೆಲ ಪ್ರಮುಖ ನಾಯಕರು ಹಿಂದೇಟು ಹಾಕಿದರು. ನೇತ್ರಾವತಿ ನೀರು ನಮಗೆ ಕೊಡಿ ಎಂದು ನಮ್ಮ ಸರ್ಕಾರಗಳ ವಿರುದ್ಧವೇ 20 ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು.

      ಇದರಿಂದಲೇ 20 ವರ್ಷದ ಹಿಂದೆಯೇ ನೇತ್ರಾವತಿ ನದಿ ನೀರು ಜಿಲ್ಲೆಗೆ ಬರುತ್ತಿತ್ತು. ಬಯಲು ಸೀಮೆಗೆ 140 ಟಿ.ಎಂ.ಸಿ. ಅಡಿ ನೀರು ರೂಪಿಸಬೇಕಿತ್ತು. ಆದರೆ ಪ್ರಸ್ತುತ ಕುಡಿಯುವ, ಅಂತರ್ಜಲ ಅಭಿವೃದ್ಧಿಗೆಂದು ಕೇವಲ 24 ಅಡಿ ನೀರು ತರುವ ನೇತ್ರಾವತಿ ನದಿ ಪಾತ್ರದ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದೆ. ಇದು ನನ್ನ ದೀರ್ಘಕಾಲದ ಹೋರಾಟಕ್ಕೆ ಸಂದ ಜಯ.

       ಪೈಪ್ ಲಾಬಿಗೆ ಮಣಿದು ಎತ್ತಿನಹೊಳೆ ಯೋಜನೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಬೈರಗೊಂಡ್ಲುವರೆಗೆ ಕೊಳವೆ ಮಾರ್ಗದ ಮೂಲಕ ನೀರು ತರಲು ಯೋಜನೆ ರೂಪಿಸಲಾಗಿತ್ತು. ಇದನ್ನು ವಿರೋಧಿಸಿದ ನಾನು ತೆರೆದ ಕಾಲುವೆ ಮೂಲಕ ನೀರು ತರಲು ಕಾರಣನಾದೆ. ಇದರಿಂದ ಕಾಲುವೆ ಯುದ್ದಕ್ಕೂ ಬರುವ ಗ್ರಾಮಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಲಿದೆ.

 ನಾಲ್ಕು ಬಾರಿ ಸಂಸದರಾದರೂ ಹೇಳಿಕೊಳ್ಳುವಂತಹ ಅಭಿವೃದ್ಧಿಕಾರ್ಯಗಳಾಗಿಲ್ಲ ಎಂಬ ಆರೋಪಗಳಿವೆಯಲ್ಲ?

         ನನ್ನ ಕಾಲದಲ್ಲಿ ಆಗಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಇವರು ತೋರಿಸಲಿ. ನನ್ನ ಬಳಿ ದೊಡ್ಡ ಪಟ್ಟಿಯೇ ಇದೆ. ವಸಂತನರಸಾಪುರದಲ್ಲಿ ಭಾರತದ ಮೊಟ್ಟಮೊದಲ ನಿಮ್ಜ್, ಎಚ್‍ಎಎಲ್, ಟೂಲ್ಸ್ ಪಾರ್ಕ್, ವಿಜ್ಞಾನ ಗುಡ್ಡ, ಇಸ್ರೋ, ಪಾಸ್‍ಪೋರ್ಟ್ ಕೇಂದ್ರ, ಇಪಿಎಫ್ ರೀಜನಲ್ ಆಫೀಸ್, ಚೆನ್ನೈ-ಬೆಂಗಳೂರು –ಚಿತ್ರದುರ್ಗ ಕೈಗಾರಿಕ ಕಾರಿಡಾರ್, ಎಂ.ಎಸ್.ಎಂ.ಇ. ಟೆಕ್ನಾಲಜಿ ಸೆಂಟರ್, ಫುಡ್ ಪಾರ್ಕ್, ಕರ್ನಾಟಕ ವಾಟರ್ ಗ್ರಿಡ್ ಕೆನಾಲ್, ಸ್ಮಾರ್ಟ್‍ಸಿಟಿ, 24/ 7 ನಿರಂತರ ನೀರು ಸರಬರಾಜು ಯೋಜನೆ, ರೈಲ್ವೆ ಯೋಜನೆ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ.

 ದೇವೇಗೌಡರ ಸ್ಪರ್ಧೆ ನಿಮಗೆ ಸವಾಲೆನ್ನಿಸಿದೆಯೇ?

         ನಾನು ಅವರ ಹೆಸರನ್ನೇ ಹೇಳುತ್ತಿಲ್ಲ. ನಾಲ್ಕು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದೇನೆ. ಜನ ನನ್ನನ್ನು ಆರಿಸಿದ್ದಾರೆ. ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳೆ ನನಗೆ ಶ್ರೀರಕ್ಷೆ. ಮತದಾರ ನನ್ನನ್ನು ಬಹಳ ವರ್ಷಗಳಿಂದ ಗಮನಿಸಿದ್ದಾರೆ. ಅವರ ಹೆಸರು ಹೇಳಿಕೊಂಡು, ವಿರೋಧಿಸಿಕೊಂಡು ಪ್ರಚಾರ ಮಾಡಿ ಗೆಲ್ಲುವ ಅಗತ್ಯವೇನಿಲ್ಲ. ಜನ ಬಿ.ಜೆ.ಪಿ.ಯನ್ನು ಬಯಸಿದ್ದಾರೆ. ನನ್ನ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ.

ನಿಮ್ಮ ಮುಂದಿರುವ ಕಾರ್ಯ ಯೋಜನೆಗಳೇನು?

          ನಾನು ಸಂಸದನಾಗಿದ್ದ ಅವಧಿಯಲ್ಲಿ ಅನೇಕ ಕಾರ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಕೆಲವು ಇನ್ನೂ ಮುಕ್ತಾಯವಾಗಿಲ್ಲ. ಅಂತಹ ಯೋಜನೆಗಳ ಸಂಪೂರ್ಣ ಜಾರಿಗೆ ಮುಂದಾಗುತ್ತೇನೆ. ನನ್ನ ಮುಖ್ಯ ಆದ್ಯತೆ ಜಿಲ್ಲೆಗೆ ನೀರಾವರಿ ಯೋಜನೆ ರೂಪಿಸುವುದು. ಕೆರೆಗಳಿಗೆ ನೀರು ಹರಿಸುವುದು. ನೀರು ಪೋಲಾಗದಂತೆ ನೋಡಿಕೊಳ್ಳುವುದು. ಕೇಂದ್ರದ ಕೃಷಿ ಸಂಚಯಿ ಯೋಜನೆ ಒಂದು ಮಹತ್ವದ ಯೋಜನೆಯಾಗಿದ್ದು, ರೈತರಿಗೆ ಇದರಿಂದ ಲಾಭವಾಗಲಿದೆ. ಡ್ರಿಪ್ ಇರಿಗೇಷನ್ ಮೂಲಕ ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ತೆಗೆಯಲು ಸಾಧ್ಯವಾಗಲಿದೆ.

         ಇದುವರೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ 8 ಕ್ಷೇತ್ರಗಳನ್ನು ಸುತ್ತಾಡಿಕೊಂಡು ಬಂದಿದ್ದೇನೆ. ಮಧುಗಿರಿ, ಶಿರಾ, ಚಿ.ನಾ.ಹಳ್ಳಿ, ಕೊರಟಗೆರೆ, ತಿಪಟೂರು ಈ ಭಾಗಗಳಿಗೆ ಹೋದಾಗ ನನ್ನ ಕರುಳು ಚುರುಕ್ ಎನ್ನುತ್ತದೆ. ತೆಂಗು ಹಾಗೂ ಅಡಿಕೆ ಮರಗಳು ಬಾಡಿ ಹೋಗುತ್ತಿವೆ. ಅಂತರ್ಜಲ ಕಡಿಮೆಯಾಗಿದೆ. ಅಲ್ಲಿನ ಆ ಸ್ಥಿತಿಯನ್ನು ನೋಡಿದಾಗ ಪ್ರಾಣವೇ ಹೋದಂತಾಗುತ್ತದೆ. ರೈತರಿಗಾಗಿ ಏನಾದರೂ ಯೋಜನೆ ರೂಪಿಸಲೇಬೇಕು. ನೀರಿನ ಮಹತ್ವವನ್ನು ತಿಳಿಸಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link