ಮಧುಗಿರಿ :
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಇಪ್ಪತ್ತು ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದು 980 ಮತದಾರರ ಪೈಕಿ 956 ಶಿಕ್ಷಕರು ಮತ ಚಲಾವಣೆ ಮಾಡಿ ಶೇ. 97.55ರಷ್ಟು ಮತದಾನವಾಗಿದೆ.
ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ 3 ಕೊಠಡಿಗಳಲ್ಲಿ ನಡೆಯಿತು. ಮೊದಲ ಕೊಠಡಿಯಲ್ಲಿ 336-328, ಎರಡನೇ ಕೊಠಡಿಯಲ್ಲಿ 314-304 ಮತ್ತು ಮೂರನೇ ಕೊಠಡಿಯಲ್ಲಿ 330-324 ಮತಗಳು ಚಲಾವಣೆಗೊಂಡವು. ಉಳಿದ ಇಪ್ಪತ್ತಾರು ಮತದಾರರಲ್ಲಿ 1 ಮತ ಡಬಲ್ ಎಂಟ್ರಿಯಾಗಿದ್ದು, ಮೂವರು ಶಿಕ್ಷಕರು ಹೈಸ್ಕೂಲ್‍ಗೆ ಬಡ್ತಿ ಹೊಂದಿದ ಕಾರಣ ಇನ್ನೂ ಇಪ್ಪತ್ತು ಶಿಕ್ಷಕರು ಮಾತ್ರ ಮತದಾನದಿಂದ ದೂರ ಉಳಿದರು.
20 ಸ್ಥಾನಗಳ ಪೈಕಿ 13 ಶಿಕ್ಷಕರು 7 ಶಿಕ್ಷಕಿಯರು ಆಯ್ಕೆಯಾಗಬೇಕು, ಪ್ರತ್ಯೇಕ ಮತಪತ್ರಗಳನ್ನು ಶಿಕ್ಷಕ, ಶಿಕ್ಷಕಿಯರ ಆಯ್ಕೆಗೆ ಉಪಯೋಗಿಸಲಾಯಿತು. ಗುರು ಮಿತ್ರ ಮತ್ತು ಶಿಕ್ಷಕರ ಸ್ನೇಹ ಬಳಗದ ಎರಡೂ ತಂಡಗಳಿಂದ ತಲಾ ಇಪ್ಪತ್ತು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 8 ಪಕ್ಷೇತರರಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದರು.
ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆದು, 2 ಗುಂಪಿನವರು ಮತ್ತು ಪಕ್ಷೇತರರು ಮತದಾರರನ್ನು ಕೊನೆ ಕ್ಷಣದವರೆಗೂ ಮತಯಾಚಿಸಿದ್ದು ಕಂಡು ಬಂತು. ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ತರೇವಾರಿ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದ್ದ ದೃಶ್ಯಗಳು ಕಂಡುಬಂದವು.
ಈ ಚುನಾವಣೆ ಸಾರ್ವತ್ರಿಕ ಚುನಾವಣೆಗಿಂತಲೂ ಭಿನ್ನವಾಗಿಯೇ ನಡೆಯಿತು. ಬೆಳಗಿನಿಂದಲೆ ತಿಂಡಿ, ಮಧ್ಯಾಹ್ನ ಸಿಹಿ ಊಟ ಹಾಗೂ ಫ್ಲ್ಲೆಕ್ಸ್‍ಗಳ ಭರಾಟೆ ಕಂಡು ಬಂದಿತು. ಚುನಾವಣೆ ನಡುವೆಯೂ ರಕ್ತದಾನ ಶಿಬಿರದಲ್ಲಿ ಡಿಡಿಪಿಐ ಕಚೇರಿ ಮುಂದೆ ಇದ್ದ ವಾಹನದಲ್ಲಿ ಹಲವು ಶಿಕ್ಷಕರು ರಕ್ತದಾನ ಮಾಡಿ ಗಮನ ಸೆಳೆದರು.
ಆಡಳಿತಾರೂಢ ಗುರುಮಿತ್ರ ತಂಡದವರು ತಮ್ಮ ಕಣ್ಮುಂದೆ ಇರುವ ಗುರುಭವನ ಅಭಿವೃದ್ಧಿಯನ್ನು ತೋರಿಸಿ ಮತ ಯಾಚಿಸಿದರೆ, ಶಿಕ್ಷಕರ ಸ್ನೇಹ ಬಳಗದವರು ಅಧಿಕಾರವಿಲ್ಲದೆ ನೀಡಲಾದ ಸೇವೆಗಳನ್ನು ಹೇಳಿ ಮತ ಯಾಚಿಸಿದ್ದು ಕಂಡುಬಂತು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಶಾಸಕರನ್ನೆ ಸೋಲಿಸುವ ತಾಕತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗಿದೆ.
ಸರ್ಕಾರಿ ನೌಕರರ ಪೈಕಿ ಶೇ. 80ರಷ್ಟು ಸಮಸ್ಯೆಗಳಿರುವುದು ಪ್ರಾಥಮಿಕ ಶಾಲಾ ಶಿಕ್ಷಕರದ್ದು. ಇದನ್ನು ಹೇಗೆ ಬಗೆಹರಿಸುತ್ತಿರಿ ಎಂದು ಶಾಸಕರು ತಮ್ಮ ಬಳಿ ಹೇಳಿದ ಬಗ್ಗೆ ಮಧುಗಿರಿಯಲ್ಲಿ ಪ್ರಸ್ತಾಪಿಸಿ, ಶಾಸಕರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಮ್ಮನ್ನೆ ಬದಲಿಸುತ್ತಾರೆಂಬ ಮಾತಿದ್ದು, ಈ ಚುನಾವಣೆಯಲ್ಲಿ ಯಾರಿಗೆ ಸಿಹಿಯಾಗಿಸಿದ್ದಾರೋ ಕಾದು ನೋಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
