ಆಫ್ರಿಕಾ ವಿರುದ್ಧ ಏಕದಿನ ಸರಣಿ ವಶಪಡಿಸಿಕೊಂಡ ಭಾರತ ವನಿತೆಯರು..!

ವಡೋದರ

  ಸಂಘಟಿತ ಹೋರಾಟ ನಡೆಸಿದ ಭಾರತ ಮಹಿಳೆಯರ ಕ್ರಿಕೆಟ್‌ ತಂಡ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮಿಥಾಲಿ ರಾಜ್‌ ಬಳಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು ೨-೦ ಅಂತರದಲ್ಲಿ ವಶಪಡಿಸಿಕೊಂಡಿತು.

   ದಕ್ಷಿಣ ಆಫ್ರಿಕಾ ನೀಡಿದ 248 ರನ್‌ ಗುರಿ ಹಿಂಬಾಲಿಸಿದ ಭಾರತ ಆಟ ನಿಧಾನಗತಿಯಿಂದ ಕೂಡಿತ್ತು. ಆರಂಭಿಕರಾದ ಜೆಮಿಮಾ ರೋಡ್ರಿಗಸ್‌ (18) ಹಾಗೂ ಪ್ರಿಯಾ ಪೂನಿಯಾ (20) ಅವರನ್ನು ಕ್ರಮವಾಗಿ ಅಯಾಬೊಂಗಾ ಖಾಖ ಹಾಗೂ ಶಬ್ನಿಮ್‌ ಇಸ್ಮಾಯಿಲ್‌ ಅವರು ಔಟ್‌ ಮಾಡಿದರು. ನಂತರ ಮೂರನೇ ವಿಕೆಟ್‌ಗೆ ಜತೆಯಾದ ನಾಯಕಿ ಮಿಥಾಲಿ ರಾಜ್‌ ಹಾಗೂ ಪೂನಮ್‌ ರಾವತ್‌ ಜೋಡಿ ಅಮೋಘ ಬ್ಯಾಟಿಂಗ್‌ ಮಾಡಿತು. ಈ ಜೋಡಿ ತಂಡದ ಮೊತ್ತವನ್ನು 195ರವರೆಗೂ ಹಿಗ್ಗಿಸಿದರು.

    ಅದ್ಭುತ ಬ್ಯಾಟಿಂಗ್‌ ಮಾಡಿದ ಪೂನಮ್‌ ರಾವತ್‌ 92 ಎಸೆತಗಳಲ್ಲಿ65 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸೊಗಸಾದ ಬ್ಯಾಟಿಂಗ್‌ ಮಾಡಿದ ನಾಯಕಿ ಮಿಥಾಲಿ ರಾಜ್‌ ಅವರು 82 ಎಸೆತಗಳಲ್ಲಿ 66 ರನ್‌ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಲುಪಿಸಿತು. ಕೊನೆಯ ಹಂತದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಅವರು ಸ್ಫೋಟಕ 39 ಗಳಿಸಿ ಭಾರತಕ್ಕೆ ಗೆಲುವಿನ ದಡ ಸೇರಿಸಿದರು. ಒಟ್ಟಾರೆ, ಭಾರತ 48 ಓವರ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಿ ಜಯ ಸಾಧಿಸಿತು. ಆಫ್ರಿಕಾ ಪರ ಅಯಾಬೊಂಗಾ ಖಾಖ ಮೂರು ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್‌ಗಳಲ್ಲಿ 6 ನಷ್ಟಕ್ಕೆ 247 ರನ್‌ ದಾಖಲಿಸಿತು. ಆಫ್ರಿಕಾ ಪರ ಲಾರಾ ವೊಲ್ವಾರ್ಡ್ 98 ಎಸೆತಗಳಲ್ಲಿ 69 ರನ್‌ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಿಗ್ನೋನ್‌ ಪ್ರೀಜ್‌ 44 ರನ್‌ ಹಾಗೂ ಲಾರಾ ಗುಡಾಲ್‌ 38 ರನ್‌ ಗಳಿಸಿದರು. ಭಾರತದ ಪರ ಶಿಖಾ ಪಾಂಡೆ, ಏಕ್ತ್‌ ಬಿಷ್ಟ್‌ ಹಾಗೂ ಪೂನಮ್‌ ಯಾದವ್‌ ತಲಾ ಎರಡು ವಿಕೆಟ್‌ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link