ಪಾವಗಡ ತಾಲ್ಲೂಕಿನ ಕುಖ್ಯಾತ ಮಟ್ಕಾ ಬುಕ್ಕಿ ಅಶ್ವತ್ಥ್ ಸೆರೆ!!

ತುಮಕೂರು :  

      ಪಾವಗಡ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಅಶ್ವತ್ಥ ಅಲಿಯಾಸ್ ಪಿ.ಎನ್.ಅಶ್ವತ್ಥ್ ನಾರಾಯಣನನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

      ಹಲವಾರು ವರ್ಷಗಳಿಂದ ಮಟ್ಕಾ ದಂಧೆ ನಡೆಸುವುದನ್ನೆ ಈತ ಚಾಳಿ ಮಾಡಿಕೊಂಡಿದ್ದನು. ಈತನನ್ನು “ಸ್ಥಾನ ಬದ್ಧತೆ”ಯಲ್ಲಿ ಇಡುವಂತೆ ಮಧುಗಿರಿ ಡಿ.ವೈ.ಎಸ್ಪಿ, ಕೆ.ಜಿ.ರಾಮಕೃಷ್ಣರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಜಿಲ್ಲಾಧಿಕಾರಿಗಳು ಈತನ ವಿರುದ್ಧ “ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪಚಾರ, ಜೂಜುಕೋರತನ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸುವ ಚಟುವಟಿಕೆಗಳ ತಡೆ ಅಧಿನಿಯಮ 1985 (1985 ಕರ್ನಾಟಕ ಕಾಯ್ದೆ ಸಂಖ್ಯೆ 12)”ರ ಅಡಿಯಲ್ಲಿ “ಸ್ಥಾನ ಬದ್ಧತೆ” ಆದೇಶ ಮಾಡಿರುವುದರಿಂದ ಆಸಾಮಿ ಅಶ್ವತ್ಥ ಮೊನ್ನೆ ಯುಗಾದಿ ಹಬ್ಬದ ದಿನವೆ ಜೈಲು ಪಾಲಾಗಿದ್ದಾನೆ.

ಈತನ ವಿರುದ್ಧ ಮಾಹಿತಿ ಮತ್ತು ದಾಖಲಾತಿಗಳನ್ನು ಕ್ರೋಡೀಕರಿಸಿ, ಪ್ರಸ್ತಾವನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಹೆಚ್ಚುವರಿ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಮಧುಗಿರಿ ಡಿ.ವೈ.ಎಸ್ಪಿ ಕೆ.ಜಿ.ರಾಮಕೃಷ್ಣ ನೇತೃತ್ವದ ಸರ್ಕಲ್ ಇನ್‍ಸ್ಪೆಕ್ಟರ್ ಡಿ.ನಾಗರಾಜು ಮತ್ತು ಮಧುಗಿರಿ ಉಪ ವಿಭಾಗದ ಹಾಗೂ ಪಾವಗಡ ಠಾಣ ಸಿಬ್ಬಂದಿಯನ್ನು ತುಮಕೂರು ಜಿಲ್ಲಾ ಎಸ್ಪಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

      ಇಡೀ ಜಿಲ್ಲೆಯಲ್ಲಿ ಮಟ್ಕಾ, ಜೂಜು ಮೊದಲಾದ ಅಕ್ರಮ ಚಟುವಟಿಕೆಗಳಿಗೆ ಪಾವಗಡ ತಾಲ್ಲೂಕು ಹೆಚ್ಚು ಕುಖ್ಯಾತಿ. ಜೂಜಾಟ, ಇಸ್ಪೀಟು ದಂಧೆ, ಮಟ್ಕಾದಂತಹ ಅಕ್ರಮ ವ್ಯವಹಾರಗಳು ಬಹಳಷ್ಟು ಜನರನ್ನು ಬಲಿ ತೆಗೆದುಕೊಂಡಿವೆ. ಇಂತಹ ಚಟುವಟಿಕೆಗಳಿಗೆ ನುಸುಳಿದ ಅದೆಷ್ಟೋ ಮಂದಿ ಮನೆ-ಮಠ ಕಳೆದುಕೊಂಡಿದ್ದಾರೆ. ಹಲವು ಕುಟುಂಬಗಳು ಸರ್ವನಾಶವಾಗಿವೆ. ಅದೆಷ್ಟೋ ಗಂಡಂದಿರು ಹೆಂಡತಿ ಮಕ್ಕಳನ್ನು ನರಕಕ್ಕೆ ತಳ್ಳಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಕೆಲವು ಸಂಘಟನೆಗಳು ಒತ್ತಾಯ ಮಾಡುತ್ತಲೆ ಬಂದಿದ್ದವು.

      ಇದೀಗ ಪ್ರಮುಖ ಮಟ್ಕಾ ಬುಕ್ಕಿ ಅಶ್ವತ್ಥ ನಾರಾಯಣನ ಬಂಧನವಾಗಿದೆ. ಈ ದಂಧೆಯ ಜಾಲ ಬಹಳ ದೊಡ್ಡದ್ದು. ಕೆಲವೊಮ್ಮೆ ಸ್ಥಳೀಯವಾಗಿ ಅಧಿಕಾರಿಗಳೂ ಸಹ ಏನೂ ಮಾಡಲಾಗದಂತಹ ಪರಿಸ್ಥಿತಿಗೆ ಸಿಲುಕಿದ್ದುಂಟು. ಇದಕ್ಕಿಂತ ಹೆಚ್ಚಾಗಿ ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಅವರ ಕೆಳಗಿನವರು ಜೇಬು ತುಂಬಿಸಿಕೊಂಡದ್ದೇ ಹೆಚ್ಚು. ಇನ್ನು ಮುಂದಾದರೂ ಬರದ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದು, ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂಬುದು ಹಲವು ಮಂದಿಯ ಒತ್ತಾಸೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap