ಶಿರಾ :
ನಗರದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾ ಗಣಪತಿಯನ್ನು ವಿಸರ್ಜನೆ ಮಾಡುವ ಸಂಬಂಧ ಸರ್ಕಾರದ ನಿಯಮದಂತೆ ಗಣಪತಿ ವಿಸರ್ಜನೆ ಮಾಡಲು ಈವರೆಗೂ ಬಿಕ್ಕಟ್ಟು ಬಗೆಹರಿದಿಲ್ಲ.
ಸೆ. 10 ರಂದು ಪ್ರತಿ ವರ್ಷದಂತೆ ಈ ವರ್ಷವೂ ನಗರದ ಗವಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಣಪತಿಯ ಪ್ರತಿಷ್ಠಾಪನೆ ಮಾಡಲಾಗಿತ್ತು. ಮೂರನೆ ದಿನವಾದ ಭಾನುವಾರ ಗಣಪತಿಯ ವಿಸರ್ಜನೆಯನ್ನು ಮಾಡಬೇಕಿತ್ತಾದರೂ ಗಣಪತಿ ಪ್ರತಿಷ್ಠಾಪನೆಯ ಸಂಘಟಕರು ನಿಯಮದಂತೆ ಕೇವಲ 20 ಮಂದಿ ಮಾತ್ರ ಗಣಪತಿ ವಿಸರ್ಜನೆ ಮಾಡಲು ಒಪ್ಪದ ಕಾರಣ ಆರಕ್ಷಕ ಅಧಿಕಾರಿಗಳು ಮತ್ತು ಸಂಘಟಕರ ನಡುವೆ ಬಿಕ್ಕಟ್ಟು ಏರ್ಪಟ್ಟಿತ್ತು. ಸದರಿ ಬಿಕ್ಕಟ್ಟನ್ನು ಬಗೆಹರಿಸಲು ಅಡಿಷನಲ್ ಎಸ್.ಪಿ. ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದಲೂ ಸಂಘಟಕರೊಡನೆ ಸಭೆ ನಡೆಸಲಾಯಿತಾದರೂ ಸಂಘಟಕರಲ್ಲಿ ಒಮ್ಮತದ ಅಭಿಪ್ರಾಯ ಬಂದಿರಲಿಲ್ಲ
ಈ ನಡುವೆ ಹೇಗಾದರೂ ಸರಿ ಸದರಿ ಬಿಕ್ಕಟ್ಟನ್ನು ಬಗೆಹರಿಸಲೇ ಬೇಕೆಂದು ಗವಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೇಷ್ಮೇ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಹಾಗೂ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅವರ ನೇತೃತ್ವದಲ್ಲಿ ಸಂಘಟಕರನ್ನು ಮನವೊಲಿಸುವ ಪ್ರಯತ್ನ ಮಾಡಲಾಯಿತು. ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಗಣಪತಿ ವಿಸರ್ಜನೆ ಮಾಡಬೇಕೆಂದು ಆರಕ್ಷಕ ಇಲಾಖೆಯ ಅಧಿಕಾರಿಗಳು ಕೊನೆಗೂ ಪಟ್ಟು ಸಡಿಸಲಿಲ್ಲ. ಇತ್ತ ರಾಜಿ ಸಂಧಾನಕ್ಕೆಂದು ಆಗಮಿಸಿದ್ದ ಜನಪ್ರತಿನಿಧಿಗಳು ಸಂಧಾನಕ್ಕೆ ಯತ್ನಿಸಿದ್ದು ಕೂಡ ವಿಫಲಗೊಂಡಿತು ಎನ್ನಲಾಗಿದೆ.
ಸರ್ಕಾರದ ಆದೇಶದಂತೆ ಕೇವಲ 20 ಮಂದಿಯ ಮೂಲಕ ವಿಸರ್ಜನೆ ಮಾಡಲು ಸಾಧ್ಯವಿಲ್ಲ. ಗಣಪತಿ ವಿಸರ್ಜನೆಯ ವೇಳೆ ಒಂದಷ್ಟು ಮಂದಿ ಹೆಚ್ಚಿಗೆ ಸೇರಬಹುದು. ಆದರೆ ನಿಯಮಗಳನ್ನು ಒಂದಿಷ್ಟು ಸಡಿಲಗೊಳಿಸಿ ಅವಕಾಶ ನೀಡುವಂತೆ ಸಂಘಟಕರು ಮಾಡಿದ ಮನವಿ ಕೂಡ ವಿಫಲಗೊಂಡಿತು.
ಹಿಂದೂ ಮಹಾ ಗಣಪತಿ ಸಂಘಟಕರಲ್ಲಿ ಒಬ್ಬರಾದ ವಿಜಯರಾಜ್ ಮಾತನಾಡಿ, ನಮ್ಮ ಸಂಘಟನೆಯಲ್ಲಿಯೆ 500 ಮಂದಿ ಕಾರ್ಯಕರ್ತರಿದ್ದೇವೆ. ಸರ್ಕಾರದ ನಿಯಮದಂತೆ 20 ಮಂದಿ ಮಾತ್ರ ಮೆರವಣಿಗೆಯಲ್ಲಿ ತೆರಳಬೇಕೆಂದರೆ ಆದು ಆಗದ ಮಾತು. ಈ ಕಾರಣದಿಂದಾಗಿ ನಿಯಮಗಳನ್ನು ಸಡಿಲಿಕೆ ಮಾಡುವವರೆಗೂ ಗಣಪತಿ ವಿಸರ್ಜನೆಯನ್ನು ಮುಂದೂಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಭೆಗೆ ಶಾಸಕರ ಗೈರು:
ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಸಂಘಟಕರು ಮತ್ತು ಆರಕ್ಷಕ ಅಧಿಕಾರಿಗಳು ಸಂಧಾನ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಗೆ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡರನ್ನು ಆಹ್ವಾನಿಸಲು ದೂರವಾಣಿ ಕರೆ ಮಾಡಿದಾಗ ಶಾಸಕರ ದೂರವಾಣಿ ಸ್ವಿಚ್ ಆಫ್ ಆಗಿತ್ತು. ಬಹಳಷ್ಟು ತಾಸುಗಳವರೆಗೆ ಶಾಸಕರನ್ನು ಸಂಪರ್ಕಿಸುವ ಕೆಲಸವನ್ನು ಸಂಘಟಕರು ಮಾಡಿದರಾದರೂ ಶಾಸಕರು ಸಭೆಗೆ ಬಾರದೆ ಗೈರಾಗಿದ್ದರು.
ಸಂಧಾನದ ಯತ್ನ ವಿಫಲವಾದರೂ ಅಂತಿಮವಾಗಿ ಐದನೇ ದಿನವಾದ ಮಂಗಳವಾರ ಗಣಪತಿ ವಿಸರ್ಜನೆ ಮಾಡಲೇಬೇಕಿದ್ದು ಮಂಗಳವಾರ ನ್ಯಾಯಾಲಯವು ವಿಸರ್ಜನೆ ಸಂಬಂಧ ಒಂದಿಷ್ಟು ನಿಯಮಗಳನ್ನು ಸಡಿಲಿಸುವ ಅವಕಾಶ ನೀಡಬಹುದಾದ್ದರಿಂದ ಬುಧವಾರ ವಿಸರ್ಜನೆ ಮಾಡಲಾಗುವುದೆಂದು ಗಣಪತಿಯ ಸಂಘಟಕರು ನಿಲುವು ತಾಳಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
