ಕೊಳವೆಬಾವಿಗಳ ತನಿಖೆಗೆ ಸಚಿವರ ಸೂಚನೆ

ಹುಳಿಯಾರು:

     ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯ್ತಿಯಿಂದ ಕೊರೆಸಲಾಗಿರುವ ಕೊಳವೆಬಾವಿಗಳನ್ನು ಎಸ್ಟಿಮೆಂಟ್ ಪ್ರಕಾರ ತನಿಖೆ ಮಾಡಿ ಪಟ್ಟಣ ಪಂಚಾಯ್ತಿಗೆ ಹಸ್ತಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಎಂಜಿನಿಯರ್‍ಗೆ ಸೂಚನೆ ನೀಡಿದರು.

    ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ಸಾರ್ವಜನಿಕರ ಅಹವಾಲು ಆಲಿಸುವಾಗ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವೈ.ಎಸ್.ಪಾಳ್ಯದಲ್ಲಿ ಜಿಪಂನಿಂದ ಕೊಳವೆಬಾವಿ ಕೊರೆಸಿ ನೀರು ಪೂರೈಸುತ್ತಿದ್ದು ಕಳಪೆ ಮೋಟರ್ ಹಾಗೂ ಸ್ಟಾರ್ಟರ್ ಅಳವಡಿಸಿರುವುದರಿಂದ ಪದೇಪದೇ ಕೆಟ್ಟು ನೀರಿನ ಸಮಸ್ಯೆ ಸೃಷ್ಠಿಯಾಗುತ್ತಿದೆ. ಅಲ್ಲದೆ ಎಸ್ಟಿಮೆಂಟ್‍ನಂತೆ ಕೇಸಿಂಗ್ ಪೈಪ್ ಬಿಟ್ಟಿಲ್ಲ ಎಂದು ಕೆಲ ನಿವಾಸಿಗಳು ಆರೋಪಿಸಿದರು.

   ಇದಕ್ಕೆ ಸ್ಪಂಧಿಸಿದ ಸಚಿವರು ಪಪಂ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಅವರಿಂದ ಪಪಂ ವ್ಯಾಪ್ತಿಯ ಕೊಳವೆಬಾವಿಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಪ್ರಸ್ನಿಸಿದರು. ಆಗ ಜಿಪಂನಿಂದ ಕೊರೆದಿರುವ ಯಾವ ಕೊಳವೆಬಾವಿಗಳೂ ಪಪಂಗೆ ಹಸ್ತಾಂತರಿಸಿಲ್ಲ. ಹಾಗಾಗಿ ಅವುಗಳ ನಿರ್ವಹಣೆ ಸಾಧ್ಯವಾಗದೆ ನೀರಿನ ಸಮಸ್ಯೆ ಸೃಷ್ಠಿಯಾಗಿದೆ ಎಂಬ ಮಾಹಿತಿ ನೀಡಿದರು. ತಕ್ಷಣ ಎಂಜಿನಿಯರ್ ಅವರಿಗೆ ಜಿಪಂನ ಎಲ್ಲಾ ಕೊಳವೆಬಾವಿಗಳನ್ನು ಎಸ್ಟಿಮೆಂಟ್ ಪ್ರಕಾರ ತನಿಖೆ ಮಾಡಿ ಪಪಂಗೆ ಹಸ್ತಾಂತರಿಸಿ ನಿರ್ವಹಣೆಗೆ ಅನುವು ಮಾಡುವಂತೆ ಸಚಿವರು ಸೂಚಿಸಿದರು.

     ಹುಳಿಯಾರು ಪಪಂನ ವಾಣಿಜ್ಯ ಮಳಿಗೆಗಳ ಇ-ಹರಾಜಿನಲ್ಲಿ ನಾವು ಬಿಡ್ ಕೂಗಿದ್ದ ಮಳಿಗೆಯನ್ನು ಮೂರ್ನಲ್ಕು ತಿಂಗಳಿಂದ ಹಸ್ತಾಂತರಿಸದೆ ಪಪಂ ಮುಖ್ಯಾಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಪ್ರೂಟ್ ಜಮೀರ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪಪಂ ಮಳಿಗೆಗಳ ಇ-ಹರಾಜಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವಾಗುವವರೆವಿಗೂ ಮಳಿಗೆ ಬಿಡಿಸಿಕೊಡಲು ಸಾಧ್ಯವಿಲ್ಲ. ತಮಗೆ ತುರ್ತಾಗಿ ಸಮಸ್ಯೆ ಬಗೆಹರಿಯಬೇಕೆಂದಿದ್ದರೆ ತಾವೂ ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿ ಅಲ್ಲಿಂದ ಪಪಂ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿಸಿ ಮಳಿಗೆ ಬಿಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಗ್ರಾಪಂ ಮಾಜಿ ಉಪಾಧ್ಯಕ್ಷ ನಜರುಲ್ಲಾಖಾನ್ ಅವರು ಲಿಂಗಾಯಿತರ ಬೀದಿ, ಪೆಟ್ರೋಲ್ ಕೆಂಚಪ್ಪನವರು ಸೋಮಜ್ಜನಪಾಳ್ಯದ ರಸ್ತೆ ಡಾಂಬರೀಕರಣಕ್ಕೆ ಮನವಿ ಮಾಡಿದರು. ಈಗ ರಾಜ್‍ಕುಮಾರ್ ರಸ್ತೆ ಹಾಗೂ ಪೇಟೆಬೀದಿ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದು ಹಂತಹಂತವಾಗಿ ಉಳಿದ ರಸ್ತೆಗಳನ್ನು ಡಾಂಬರೀಕರಣ ಮಾಡುವುದಾಗಿ ಸಚಿವರು ತಿಳಿಸಿದರು. ಮಹಾಲಿಂಗಪ್ಪ ಅವರು ದುರ್ಗಮ್ಮಗುಡಿ ಸಮೀಪ ಕೊಳಾಯಿ ಹಾಕಿದ್ದರೂ ಸಹ ನೀರು ಪೂರೈಸುತ್ತಿಲ್ಲ ಎಂದು ದೂರಿದರು. ತಕ್ಷಣ ನೀರಿನ ಸಂಪರ್ಕ ಕಲ್ಪಿಸುವಂತೆ ಎಂಜಿನಿಯರ್‍ಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link