ಬರಗೂರು :
ಗುರುವಾರ ರಾತ್ರಿ 4ಗಂಟೆಗಳ ಕಾಲ ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಬರಗೂರಿನ ಕೆರೆಗೆ ಸುಮಾರು ಮೂರು ತಿಂಗಳ ನೀರು ಶೇಖರಣೆಯಾಗಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ತಂದಿದೆ.
ಶಿರಾ ತಾಲ್ಲೂಕು ಬರಗೂರು ಗ್ರಾಮದ ಕೆರೆಯು ಪಕ್ಕದ ಕದಿರೇಹಳ್ಳಿ ಗ್ರಾಮಕ್ಕೂ ವಿಸ್ತಾರಗೊಂಡಿದ್ದು, ಈ ಕೆರೆಯು ಹೆಚ್ಚು ನೀರಿನ ಸಂಗ್ರಹ ಸಾಮಥ್ರ್ಯವನ್ನು ಹೊಂದಿದೆ. ಮೇಲ್ಭಾಗದಲ್ಲಿರುವ ರಂಗಾಪುರ ಹಳ್ಳದಿಂದ ಹೆಚ್ಚು ನೀರು ಬಂದರೆ ಬರಗೂರು ಕೆರೆಗೆ ವರದಾನ ಎಂಬುದು ಜನರ ಮಾತಾಗಿದೆ. ಹೆಚ್ಚು ಮಳೆ ಬಂದಾಗ ನೀರು ರಂಗಾಪುರ ಹಳ್ಳದತ್ತ ಧಾವಿಸುವುದು ಸಾಮಾನ್ಯವಾಗಿದೆ.
ಈ ಕೆರೆಗೆ 5 ತಿಂಗಳ ಮಳೆ ನೀರು ಸಂಗ್ರಹವಾದರೆ ಸಾಕು. ಒಂದು ವರ್ಷದ ಕಾಲ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಕೇವಲ ಒಂದೆರಡು ತಿಂಗಳಷ್ಟು ನೀರು ಸಂಗ್ರಹವಾಗುತ್ತಿದ್ದರಿಂದ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ 128ಮಿ.ಮೀ.ನಷ್ಟು ಮಳೆಯಾಗಿದ್ದು, ಕೆರೆಯಲ್ಲಿ ಮೂರು ತಿಂಗಳ ನೀರು ಸಂಗ್ರಹವಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಆದರೂ ಇದೇ ಮಳೆ 20 ದಿನಗಳ ಹಿಂದೆ ಬಂದಿದ್ದರೆ ಶೇಂಗಾ ಬೆಳೆ ಉತ್ತಮಗೊಂಡು ರೈತರ ಬದುಕಿನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಬಹುದಾಗಿತ್ತು. ಈ ಭಾಗದ ಶೇಂಗಾ ಬೆಳೆಗೆ ರೋಗ ಉಲ್ಬಣಿಸಿ, ಮಳೆಯಿಲ್ಲದೆ ಒಣಗಿ ಹೋಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬರಡು ಪ್ರದೇಶವಾದ ಹುಲಿಕುಂಟೆ ಹೋಬಳಿಯ ರೈತರು ಬೆಳೆದ ಬೆಳೆಗಳನ್ನು ಸರ್ಕಾರ ಪರಿಶೀಲಿಸಿ ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಬೇಕೆನ್ನುವುದು ಈ ಭಾಗದ ರೈತರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
