ತುಮಕೂರು
ಅವರ ಪಕ್ಷದವರೇ ದೇವೇಗೌಡರನ್ನು ಹರಕೆ ಕುರಿ ಮಾಡಿದರು. ದೇವೇಗೌಡರ ಮಗ ತುಮಕೂರು ಜಿಲ್ಲೆಗ ಹೇಮಾವತಿ ನೀರಿನ ಅನ್ಯಾಯ ಮಾಡಿದ್ದಕ್ಕೆ ತುಮಕೂರು ಕ್ಷೇತ್ರದ ಜನ ದೇವೇಗೌಡರನ್ನು ಸೋಲಿಸಿದರು ಎಂದು ತುಮಕೂರು ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ನಂತರ ಜಿ ಎಸ್ ಬಸವರಾಜು ಹೇಳಿದರು.
ಅವರ ಪಕ್ಷದ ಮುಖಂಡರೇ ದೇವೇಗೌಡರನ್ನು ತುಮಕೂರಿನಲ್ಲಿ ಸ್ಪರ್ಧಿಸುವಂತೆ ಮಾಡಿ ಬಲಿಪಶು ಮಾಡಿದರು. ಅವರು ಹರಕೆ ಕುರಿಯಾದರು. ದೇವೇಗೌಡರು ಸ್ಪರ್ಧೆ ಮಾಡಿದ್ದೇ ತಮ್ಮ ಗೆಲುವು ಸುಲಭವಾಗಲು ಕಾರಣವಾಯಿತು. ಹೇಮಾವತಿ ನೀರಿನ ವಿಚಾರದಲ್ಲಿ ಹಾಸನ ರಾಜಕಾರಣಿಗಳಿಂದ ಅನ್ಯಾಯವಾಗಿದೆ ಎಂಬ ಭಾವನೆ ಕೂಡಾ ದೇವೇಗೌಡರು ಸೋಲಲು, ತಾವು ಗೆಲ್ಲಲು ಕಾರಣವಾಯಿತು ಎಂದರು
ಈ ಚುನಾವಣೆಯಲ್ಲಿ 40 ಸಾವಿರ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಮಾಡಿದ್ದೆ ಆದರೂ ಮತದಾರರು ತಮ್ಮ ಕೈಹಿಡಿದು ಆಯ್ಕೆ ಮಾಡಿದರು ಅವರಿಗೆ ಕೃತಜ್ಞನಾಗಿದ್ದೇನೆ. ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ಮೋದಿ ಅಲೆ ತಮ್ಮ ಗೆಲುವಿಗೆ ನೆರವಾಗಿವೆ ಎಂದು ಜಿಎಸ್ಬಿ ಹೇಳಿದರು.
ನೀರಾವರಿಗೇ ತಮ್ಮ ಮೊದಲ ಆದ್ಯತೆ. ತುಮಕೂರು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಭೀಕರವಾಗಿದೆ. ಮೋದಿಯವರ ಯೋಜನೆಗಳ ನೆರವಿನಿಂದಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಪ್ರಯತ್ನ ಮಾಡುತ್ತೇನೆ. ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಅವರು, ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಿ, ಹೊಸ ಯೋಜನೆ ತರುವ ನಿಟ್ಟಿನಲ್ಲಿ ಗಮನಹರಿಸುವುದಾಗಿ ಜಿ ಎಸ್ ಬಸವರಾಜು ತಿಳಿಸಿದರು.
ನೇತ್ರಾವತಿ, ಶರಾವತಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಮ್ಮ ಆದ್ಯತೆ ಎಂದ ಅವರು, ನೀರಾವರಿ ತಜ್ಞ ಜಿ ಎಸ್ ಪರಮಶಿವಯ್ಯ ಅವರ ನೀರಾವರಿ ಯೋಜನೆ ಜಾರಿಗೆ ಪ್ರಯತ್ನಿಸುವುದಾಗಿ ಹೇಳಿದರು.ಜಿ ಎಸ್ ಬಸವರಾಜು ಅವರ ಗೆಲುವು ಖಚಿತವಾಗು ತ್ತಿದ್ದಂತೆ ಬಿಜೆಪಿ ಶಾಸಕರಾದ ಜೆಸಿ ಮಾಧುಸ್ವಾಮಿ, ಬಿ ಸಿ ನಾಗೇಶ್, ಮಸಾಲೆ ಜಯರಾಂ, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ. ಹುಲಿನಾಯ್ಕರ್ ಮುಖಂಡರಾದ ಶಿವಪ್ರಸಾದ್ ಮೊದಲಾದವರು ಎಣಿಕೆ ಕೇಂದ್ರದ ಬಳಿ ಬಂದು ಜಿಎಸ್ಬಿಯವರನ್ನು ಅಭಿನಂದಿಸಿದರು. ಬಸವರಾಜು ಅವರು ಮಧ್ಯಾಹ್ನವೇ ಎಣಿಕೆ ಕೇಂದ್ರಕ್ಕೆ ಬಂದು ಅಭ್ಯರ್ಥಿಗಳ ಕೊಠಡಿಯಲ್ಲಿ ಕುಳಿತು ಫಲಿತಾಂಶ ನಿರೀಕ್ಷಿಸಿದರು.